ಮುಂದಿನ ದಿನಗಳಲ್ಲಿ ನಾಣಿಕೇರಿ ಉತ್ಸವವನ್ನು ಸರ್ಕಾರದ ಮಟ್ಟದಲ್ಲಿಯೇ ಆಯೋಜಿಸಬೇಕು.

ಮರಿಯಮ್ಮನಹಳ್ಳಿ: ನಾಣಿಕೇರಿ ಉತ್ಸವವು ಹಂಪಿ ಉತ್ಸವದಷ್ಟೇ ಅದ್ಧೂರಿಯಾಗಿ ಕಳೆದ ಮೂರು ದಿನಗಳಿಂದ ವಿಜೃಂಭಣೆಯಿಂದ ನಡೆಯುತ್ತಿರುವುದು ಸಂತಸದ ವಿಷಯವಾಗಿದೆ ಎಂದು ಪದ್ಮಶ್ರೀ ಮಾತಾ ಮಂಜಮ್ಮ ಜೋಗತಿ ಮೆಚ್ಚುಗೆ ವ್ಯಕ್ತಪಡಿಸಿದರು.

ಇಲ್ಲಿನ ಶಾಲಾ ಆವರಣದಲ್ಲಿ ನಡೆದ ನಾಣಿಕೇರಿ ಯುವ ಸೇವಾ ಟ್ರಸ್ಟ್ ಮೂರನೇ ವರ್ಷದ ನಾಣಿಕೇರಿ ಉತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಮುಂದಿನ ದಿನಗಳಲ್ಲಿ ನಾಣಿಕೇರಿ ಉತ್ಸವವನ್ನು ಸರ್ಕಾರದ ಮಟ್ಟದಲ್ಲಿಯೇ ಆಯೋಜಿಸಬೇಕು. ಈ ನಿಟ್ಟಿನಲ್ಲಿ ಕ್ಷೇತ್ರದ ಶಾಸಕರು ಹಾಗೂ ಜಿಲ್ಲೆಯ ಸಚಿವರು ವಿಷಯ ಸರ್ಕಾರದ ಗಮನಕ್ಕೆ ತಂದು ಕಾರ್ಯಕ್ರಮವನ್ನು ಮತ್ತಷ್ಟು ವಿಜೃಂಭಣೆಯಿಂದ ನಡೆಸಲು ಮುಂದಾಗಬೇಕು ಎಂದರು.

ಮಂಡಲ ಪಂಚಾಯಿತಿ ಮಾಜಿ ಪ್ರಧಾನ ಹಾಗೂ ಸ್ಥಳೀಯ ಮುಖಂಡ ಎಂ.ವಿಶ್ವನಾಥ ಶೆಟ್ಟಿ ಮಾತನಾಡಿ, ನಾಣಿಕೇರಿ ಯುವ ಸೇವಾ ಟ್ರಸ್ಟ್‌ನವರು ಸಮಾಜ ಸೇವೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಉತ್ಸವದ ಜತೆಗೆ ಸಮಾಜಮುಖಿ ಕಾರ್ಯಗಳಿಗೂ ಒತ್ತು ನೀಡಲಾಗಿದ್ದು, ಆಂಬ್ಯುಲೆನ್ಸ್ ಸೇವೆ, ಆರೋಗ್ಯ ಶಿಬಿರ ಆಯೋಜಿಸಿ ಯಶಸ್ವಿಯಾಗಿ ನಡೆಸಲಾಗಿದೆ ಎಂದರು.

ಸ್ಥಳೀಯ ವೈದ್ಯ ಡಾ.ಪಿ.ವಿಜಯ ವೆಂಕಟೇಶ್‌, ಡಾ. ಜಿ.ಎಂ. ಸೋಮೇಶ್ವರ ಸಭೆಯಲ್ಲಿ ಮಾತನಾಡಿದರು.

ನಾಣಿಕೇರಿ ಯುವ ಸೇವಾ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಬಾಪೂರಿ ಅಂಜನಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಸ್ಥಳೀಯ ಮುಖಂಡ ಎನ್‌.ಎಸ್‌.ಬುಡೇನ್‌ ಸಾಹೇಬ್‌, ಕುಪ್ಪಿನ ಕೇರಿ ಮಂಜುನಾಥ, ಕಲಾಲ್‌ ಮಂಜುನಾಥ, ಕಲಾಳ್ ಪರಶುರಾಮ, ಹುರುಕೊಳ್ಳಿ ಮಂಜುನಾಥ, ಈಡಿಗರ ಅಜ್ಜಯ್ಯ, ವಸ್ತ್ರದ್‌ ಕೇದರ್‌, ಸಾಗರ್‌ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ನಾಣಿಕೇರಿ ಯುವ ಸೇವಾ ಟ್ರಸ್ಟ್‌ನ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.