ಶಾಸಕ ಸಿಮೆಂಟ್ ಮಂಜು ವಿರುದ್ಧ ದಲಿತ ಸಂಘಟನೆ ಮುಖಂಡರ ಆಕ್ರೋಶ

KannadaprabhaNewsNetwork | Published : Nov 22, 2024 1:19 AM

ಸಾರಾಂಶ

ಪರಿಶಿಷ್ಟ ಜಾತಿ, ವರ್ಗದ ಹಿತರಕ್ಷಣಾ ಸಮಿತಿ ತ್ರೈಮಾಸಿಕ ಸಭೆಗೆ ಶಾಸಕ ಸಿಮೆಂಟ್ ಮಂಜುರವರು ಗೈರು ಹಾಜರಾದ್ದರಿಂದ ಕೆರಳಿದ ದಲಿತ ಸಂಘಟನೆ ಮುಖಂಡರು, ಶಾಸಕರು ಮತ್ತು ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ಇನ್ನು ಮುಂದೆ ತಾಲೂಕಿನಲ್ಲಿ ನಡೆಯುವ ಪ. ಜಾತಿ, ವರ್ಗದ ಹಿತರಕ್ಷಣಾ ಸಮಿತಿ ಸಭೆಗೆ ಬರುವುದಿಲ್ಲ. ಸಭೆ ನಡೆಸು ಔಚಿತ್ಯವೂ ಇಲ್ಲ ಎಂದು ಸಭೆಯಿಂದ ಹೊರನಡೆದ ಘಟನೆ ಪಟ್ಟಣದ ಅಂಬೇಡ್ಕರ್‌ ಭವನದಲ್ಲಿ ಸಂಭವಿಸಿತು.

ಕನ್ನಡಪ್ರಭ ವಾರ್ತೆ ಆಲೂರು

ಪರಿಶಿಷ್ಟ ಜಾತಿ, ವರ್ಗದ ಹಿತರಕ್ಷಣಾ ಸಮಿತಿ ತ್ರೈಮಾಸಿಕ ಸಭೆಗೆ ಶಾಸಕ ಸಿಮೆಂಟ್ ಮಂಜುರವರು ಗೈರು ಹಾಜರಾದ್ದರಿಂದ ಕೆರಳಿದ ದಲಿತ ಸಂಘಟನೆ ಮುಖಂಡರು, ಶಾಸಕರು ಮತ್ತು ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ಇನ್ನು ಮುಂದೆ ತಾಲೂಕಿನಲ್ಲಿ ನಡೆಯುವ ಪ. ಜಾತಿ, ವರ್ಗದ ಹಿತರಕ್ಷಣಾ ಸಮಿತಿ ಸಭೆಗೆ ಬರುವುದಿಲ್ಲ. ಸಭೆ ನಡೆಸು ಔಚಿತ್ಯವೂ ಇಲ್ಲ ಎಂದು ಸಭೆಯಿಂದ ಹೊರನಡೆದ ಘಟನೆ ಪಟ್ಟಣದ ಅಂಬೇಡ್ಕರ್‌ ಭವನದಲ್ಲಿ ಸಂಭವಿಸಿತು.ನ.20ರಂದು ಬೆಳಗ್ಗೆ 11 ಗಂಟೆಗೆ ಪ. ಜಾತಿ, ವರ್ಗದ ಹಿತರಕ್ಷಣಾ ಸಮಿತಿ ಸಭೆಯನ್ನು ಸಭೆಯನ್ನು ಏರ್ಪಡಿಸಲಾಗಿತ್ತು. ನಿಗದಿತ ಸಮಯಕ್ಕೆ ದಲಿತ ಮುಖಂಡರು ತಮ್ಮ ಸಂಕಷ್ಟಗಳನ್ನು ಪರಿಹರಿಸಿಕೊಳ್ಳಲು ಸಭೆಯಲ್ಲಿ ಜಮಾಯಿಸಿದ್ದರು.

12 ಗಂಟೆಯಾದರೂ ಶಾಸಕರು ಸಭೆಗೆ ಬಾರದ ಕಾರಣ, ಕೆರಳಿದ ದಲಿತ ಮುಖಂಡರು, ದಲಿತ ವಿರೋಧಿ ಶಾಸಕರು ಮತ್ತು ಅಧಿಕಾರಿಗಳಿಗೆ ಧಿಕ್ಕಾರ. ಇನ್ನು ಮುಂದೆ ನಡೆಯುವ ಪ. ಜಾತಿ, ವರ್ಗದ ಹಿತರಕ್ಷಣಾ ಸಮಿತಿ ಸಭೆಗೆ ದಲಿತರು ಭಾಗವಹಿಸುವುದಿಲ್ಲವೆಂದು ಸಭೆಯಿಂದ ನಿರ್ಗಮಿಸಿದರು. 5 ನಿಮಿಷದ ನಂತರ ಸ್ಥಳದಲ್ಲಿದ್ದ ಕೆಲವು ದಲಿತ ಮುಖಂಡರು, ಶಾಸಕರು ಸಭೆಗೆ ಹಾಜರಾಗುತ್ತಾರೆ, ನೀವು ಸಭೆ ನಡೆಸಿ ಎಂದು ತಹಸೀಲ್ದಾರ್‌ ಅವರನ್ನು ಒತ್ತಾಯಿಸಿದರು. ಆದರೆ ತಹಸೀಲ್ದಾರ್ ನಂದಕುಮಾರ್ ಅವರು ಸಭೆಯನ್ನು ಅನಿರ್ದಿಷ್ಟ ಕಾಲ ಮುಂದೂಡಲಾಗಿದೆ ಎಂದು ಘೋಷಿಸಿದರು.ನಡೆದದ್ದು ಏನು?: ಈ ಸಂದರ್ಭದಲ್ಲಿ ದಲಿತ ಮುಖಂಡರಾದ ತಾಲೂಕು ಪಂಚಾಯತ್‌ ಮಾಜಿ ಸದಸ್ಯರಾದ ರಂಗಯ್ಯ, ಬಸವರಾಜು ಗೇಕರವಳ್ಳಿ, ಸುಳುಗೋಡು ಮಂಜುನಾಥ್ ಮಾತನಾಡಿ, ಫೆಬ್ರವರಿ 2014ರಿಂದ ಸಭೆ ನಡೆದಿರಲಿಲ್ಲ. ಇಂದು ನಡೆಸಲು ಶಾಸಕರು ದಿನಾಂಕ ಗೊತ್ತು ಮಾಡಿದ್ದರಾದರೂ, ಅವರು ಸಭೆಗೆ ಗೈರು ಹಾಜರಾಗಿ ದಲಿತರನ್ನು ಕಡೆಗಣಿಸಿದ್ದಾರೆ. ಇವರಿಗೆ ದಲಿತರ ಮತ ಬೇಕು, ಆದರೆ ದಲಿತರ ಕಷ್ಟನಷ್ಟಗಳ ಬಗ್ಗೆ ಕೇಳುವ ಸೌಜನ್ಯ ಇಲ್ಲ. ಮುಂದಿನ ದಿನಗಳಲ್ಲಿ ಸಭೆ ಅವಶ್ಯಕವಿಲ್ಲ. ಸಭೆಗೂ ಬರುವುದಿಲ್ಲ ಎಂದು ಧಿಕ್ಕಾರ ಕೂಗುತ್ತಾ ಹೊರ ನಡೆದರು.

ನಂತರ ದಲಿತ ಮುಖಂಡರಾದ ಬಾಲಲೋಚನ, ಈರಪ್ಪ, ಹರೀಂದ್ರ, ಬಸವರಾಜು ಅವರು, ನೀವು ಸಭೆ ನಡೆಸಿ, ಶಾಸಕರು ಬಂದು ಸೇರುತ್ತಾರೆ. ಪ್ರತಿಭಟನೆಗೆ ಹೆದರಿ ಸಭೆ ಮುಂದೂಡಬಾರದು ಎಂದು ತಹಸೀಲ್ದಾರ್‌ರವರನ್ನು ಒತ್ತಾಯಿಸಿದರು.ಕೆಲ ಸಮಯ ಆಲೋಚಿಸಿದ ತಹಸೀಲ್ದಾರ್‌ ನಂದಕುಮಾರ್, ಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿರುವುದಾಗಿ ಘೋಷಣೆ ಮಾಡಿದ ನಂತರ, ಭಾಗವಹಿಸಿದ್ದ ಎಲ್ಲ ಅಧಿಕಾರಿಗಳು ಮತ್ತು ದಲಿತ ಮುಖಂಡರು ಸಭೆಯಿಂದ ಹೊರನಡೆದರು. ಸಭೆ ಮುಕ್ತಾಯಗೊಂಡಿತು.ದಲಿತರನ್ನು ನಾನು ಎಂದೂ ಕಡೆಗಣಿಸುವುದಿಲ್ಲ. ಪ್ರತಿಯೊಬ್ಬರೂ ಸಭೆಯ ಔಚಿತ್ಯವನ್ನು ಗಮನಿಸಬೇಕು. ನಾನು ಒಬ್ಬ ದಲಿತನಾಗಿದ್ದು ಅವರನ್ನು ಕಡೆಗಣಿಸುವ ಸಂದರ್ಭ ಉದ್ಭವಿಸಲಾರದು. ಪ್ರತಿಯೊಬ್ಬರೂ ಸಭೆಯ ಔಚಿತ್ಯವನ್ನು ಗಮನಿಸಬೇಕು. ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ನಡೆಯುವ ಸಭೆ ಇದಾಗಿದೆ. ಸಭೆ ನಡೆಸುವ ಬಗ್ಗೆ ತಹಸೀಲ್ದಾರ್ ನನ್ನ ಗಮನಕ್ಕೆ ತರುತ್ತಾರೆ ಅಷ್ಟೆ. ಸಮಯವಿದ್ದರೆ ಸಭೆಯಲ್ಲಿ ಭಾಗವಹಿಸುತ್ತೇನೆ. ಅಧಿಕಾರಿಗಳು ಸಭೆಯಲಿ ಭಾಗವಹಿಸಿ ದಲಿತರ ಕಷ್ಟಗಳಿಗೆ ಸ್ಪಂದಿಸಿ ಬಗೆಹರಿಸುತ್ತಾರೆ. ನಾನು ಸಕಲೇಶಪುರದಲ್ಲಿ ನಡೆದ ಕೆ.ಡಿ.ಪಿ. ಸಭೆಯಲ್ಲಿ ಅಧ್ಯಕ್ಷನಾಗಿ ಹಾಜರಾಗಿದ್ದೆನು. ದಲಿತರ ಸಮಸ್ಯೆಯನ್ನು ತಹಸೀಲ್ದಾರ್‌ ಬಗೆಹರಿಸಲು ಸಾಧ್ಯವಾಗುವುದಿಲ್ಲ. ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ನಡೆಸಬೇಕೆಂಬ ಇಚ್ಛೆ ಮುಖಂಡರಲ್ಲಿದ್ದರೆ, ಸಭೆ ಕರೆಯಲು ತಯಾರಿದ್ದೇನೆ ಎಂದು ಶಾಸಕ ಸಿಮೆಂಟ್ ಮಂಜು ತಿಳಿಸಿದರು.

Share this article