ಚಿಕ್ಕಾಲಗಟ್ಟದಲ್ಲಿ ತಾಲೂಕು ಮಟ್ಟದ ಜನಸ್ಪಂದನಾ ಸಭೆ
ಚುನಾವಣೆ ಮುಗಿದು ವರ್ಷ ಕಳೆದರೂ ಗ್ರಾಮದ ಕಡೆಗೆ ತಲೆ ಹಾಕದ ನೀವು ಈಗ ಜನಸ್ಪಂದನಾ ಕಾರ್ಯಕ್ರಮಕ್ಕೆ ಬಂದಿದ್ದೀರಿ ಎಂದು ಚಿತ್ರದುರ್ಗ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಸಿರಿಗೆರೆ ಸಮೀಪದ ಚಿಕ್ಕಾಲಗಟ್ಟ ಗ್ರಾಮದಲ್ಲಿ ಬುಧವಾರ ಆಯೋಜಿಸಲಾಗಿದ್ದ ಜನಸ್ಪಂದನ ಸಭೆಗೆ ಆಗಮಿಸಿ ಕಾರ್ಯಕ್ರಮ ಉದ್ಘಾಟಿಸಿ ಆಸೀನರಾದ ನಂತರ ಜನರು ಇದುವರೆಗೂ ಗ್ರಾಮಕ್ಕೆ ಭೇಟಿ ನೀಡದ ಶಾಸಕರ ಬಗ್ಗೆ ತಮ್ಮ ಸಿಟ್ಟು ಹೊರಹಾಕಿದರು.ಗ್ರಾಮದಲ್ಲಿ ಕಳೆದ ಒಂದೂವರೆ ವರ್ಷಗಳಲ್ಲಿ ಒಂದೇ ಒಂದು ಅಭಿವೃದ್ಧಿ ಕೆಲಸ ಆಗಿಲ್ಲ. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಂಕಷ್ಟವನ್ನು ಅನುಭವಿಸಿದ್ದೇವೆ. ಕುಡಿಯುವ ನೀರು ಕೊಡಲು ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ಬಳಿ ಮೊರೆ ಇಟ್ಟರೂ ಸ್ಪಂದನೆ ಸಿಕ್ಕಿಲ್ಲ. ಆಲಗಟ್ಟ ಪಂಚಾಯಿತಿ ವ್ಯಾಪ್ತಿಯಲ್ಲಿ ಈವರೆಗೆ ವಸತಿ ರಹಿತರಿಗೆ ಒಂದೇ ಒಂದು ಮನೆ ಹಂಚಿಕೆ ಆಗಿಲ್ಲ ಎಂದು ಜನರು ಸಿಟ್ಟಿಗೆದ್ದು ಪ್ರತಿಭಟಿಸಿದರು.