ರೋಣ: ತಹಸೀಲ್ದಾರ್ ನಾಗರಾಜ ಕೆ. ಅವರ ಮೇಲೆ ಭಾನುವಾರ ಜರುಗಿದ ಹಲ್ಲೆ ಖಂಡಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಘಟಕದ ವತಿಯಿಂದ ಮೌನ ಪ್ರತಿಭಟನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ತಹಸೀಲ್ದಾರರ ಮೂಲಕ ಜಿಲ್ಲಾಧಿಕಾರಿ ಹಾಗೂ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಎಸ್.ಜಿ. ದಾನಪ್ಪಗೌಡ್ರ ಮಾತನಾಡಿ, ಕಾರ್ಯಾಂಗದ ಭಾಗವಾಗಿರುವ ಸರ್ಕಾರಿ ನೌಕರರು ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದು, ಸರ್ಕಾರದ ನೀತಿ ಧೋರಣೆಗಳನ್ನು ಜಾರಿಗೆ ತರುವಲ್ಲಿ ಸರ್ಕಾರದ ಯೋಜನೆಗಳನ್ನು ಪ್ರಜೆಗಳಿಗೆ ತಲುಪಿಸುವಲ್ಲಿ ನಿತ್ಯ ಕಾರ್ಯನಿರ್ವಹಿಸುತ್ತಾರೆ. ನೆರೆ ಹಾವಳಿ, ಅತಿವೃಷ್ಟಿ, ಅನಾವೃಷ್ಟಿ, ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ಸೇರಿದಂತೆ ನೈಸರ್ಗಿಕ ವಿಕೋಪಗಳ ವೇಳೆಯಲ್ಲಿಯೂ ಹಗಲಿರುಲು ಕಾರ್ಯನಿರ್ವಹಿಸುವ ಸರ್ಕಾರಿ ನೌಕರಿಗೆ ತಾಲೂಕಿನಲ್ಲಿ ಭದ್ರತೆ ಇಲ್ಲದಾಗಿದೆ. ಭಾನುವಾರ ರಾತ್ರಿ ಲೋಕೋಪಯೋಗಿ ಇಲಾಖೆಯ ವಸತಿಗೃಹದಲ್ಲಿ ತಹಸೀಲ್ದಾರ್ ನಾಗರಾಜ ಕೆ. ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದು ಖಂಡನೀಯ. ಸರ್ಕಾರಿ ನೌಕರರಿಗೆ ರಕ್ಷಣೆ ಒದಗಿಸುವ ಜತೆಗೆ ತಾಲೂಕಿನ ಸರ್ಕಾರಿ ನೌಕರರಿಗೆ ಭಯಮುಕ್ತವಾಗಿ ಕಾರ್ಯ ನಿರ್ವಹಿಸುವಂತಹ ವಾತಾವರಣ ನಿರ್ಮಿಸಬೇಕು. ಸರ್ಕಾರ ನೌಕರರಿಗೆ ಸೂಕ್ತ ರಕ್ಷಣೆ ನೀಡಬೇಕು ಆಗ್ರಹಿಸಿದರು.