ಕನ್ನಡಪ್ರಭ ವಾರ್ತೆ ಬೆಂಗಳೂರು
ಇದು ಶನಿವಾರ ನಗರದ ಭಾರತೀಯ ವಿದ್ಯಾಭವನದಲ್ಲಿ ನಡೆದ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ, ಸ್ವರ್ಣವಲ್ಲೀ ಮಹಾಸಂಸ್ಥಾನದಿಂದ ‘ಪಶ್ಚಿಮ ಘಟ್ಟದಲ್ಲಿ ನದಿತಿರುವು ಯೋಜನೆಗಳು, ಬೇಡ್ತಿ ಅಘನಾಶಿನಿ ಕಣ್ಣೀರು; ಜನಜಾಗೃತಿ ಚಿಂತನ ಮಂಥನ’ ಕಾರ್ಯಕ್ರಮದಲ್ಲಿ ಕೇಳಿ ಬಂದ ಕೂಗು.
ಸೋಂದಾ ಶ್ರೀಸ್ವರ್ಣವಲ್ಲೀ ಮಹಾಸಂಸ್ಥಾನದ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಮಾತನಾಡಿ,‘ ಪಶ್ಚಿಮಘಟ್ಟ ಪ್ರದೇಶ ವ್ಯಾಪ್ತಿಯ ಎಲ್ಲ ಜಿಲ್ಲೆಗಳ ಶಾಸಕ, ಸಂಸದರು ಒಟ್ಟಾಗಿ ಕೇಂದ್ರ ಸರ್ಕಾರದ ಬಳಿ ತೆರಳಿ ಈ ಯೋಜನೆಗಳ ದುಷ್ಟರಿಣಾಮದ ಬಗ್ಗೆ ಮನವರಿಕೆ ಮಾಡಿಕೊಡಬೇಕು ಎಂದರು.ವೈಜ್ಞಾನಿಕ, ದೀರ್ಘಾವಧಿಯ ದೃಷ್ಟಿಕೋನವಿಲ್ಲದ ಯೋಜನೆಗಳು ಅಪಾಯಕ್ಕೆ ಕಾರಣವಾಗುತ್ತವೆ. ಅಭಿವೃದ್ಧಿಯೂ ಪತನವಾಗುತ್ತದೆ. ಉತ್ತರಕನ್ನಡ ಜಿಲ್ಲೆಯು ಯೋಜನೆಗಳಿಗೆ ಸಾಕಷ್ಟು ತ್ಯಾಗ ಮಾಡಿದೆ. ಆದರೆ ಈಗ ಪುನಃ ನಮಗೆ ತ್ಯಾಗದ ಉಪದೇಶ ಮಾಡುತ್ತಾರೆ. ತ್ಯಾಗ ಎಂಬುದು ಉದಾಸೀನತೆ, ನಿರ್ಲಕ್ಷ್ಯತೆ ಹಾಗೂ ಬೇಜವಾಬ್ದಾರಿಯಿಂದ ಕೂಡಿರಬಾರದು ಎಂದು ಹೇಳಿದರು.
ಮುಟ್ಟಾಳತನದ ಯೋಜನೆ: ಡಾ.ಉಲ್ಲಾಸ್ ಕಾರಂತ್ ಮಾತನಾಡಿ, ಶರಾವತಿ ಪಂಪ್ಡ್ ಸ್ಟೋರೇಜ್ ಒಂದು ಮುಟ್ಟಾಳತನದ ಯೋಜನೆ. ಪರಿಸರದ ಒಳಿತಿಗೆ ಸುಸ್ಥಿರ ಅಭಿವೃದ್ಧಿ ಎಂಬ ಸೂತ್ರವೇ ಉತ್ತಮ ಎಂದು ಭಾವಿಸಿದ್ದೇವೆ. ಅಂದರೆ ದಟ್ಟ ಅರಣ್ಯವಿದ್ದಲ್ಲೂ ಆ ಪರಿಸರ ಉಳಿಸಿಕೊಂಡೇ ಅಭಿವೃದ್ಧಿ ಮಾಡುತ್ತೇವೆ ಎಂಬ ಮಾತು ಜಾತ್ರೆಯಲ್ಲಿ ಕೇಳಿಬರುವಷ್ಟು ಹಳತು. ಆದರೆ, ಇದನ್ನು ನಾನು ಒಪ್ಪಲ್ಲ. ಬದಲಾಗಿ ಭೂಪ್ರದೇಶ ಅಭಿವೃದ್ಧಿ (ಲ್ಯಾಂಡ್‌ಸ್ಕೇಪ್ ಡೆವಲಪ್‌ಮೆಂಟ್) ಆಗಬೇಕು. ದಟ್ಟಾರಣ್ಯ ಪರಿಸರವನ್ನು ಅದರಂತೆ ಇರಲು ಬಿಡಬೇಕು. ಇನ್ನೊಂದೆಡೆ ಕೃಷಿಗೆ, ವನ್ಯಜೀವಿಗಳಿಗೆ ಮೀಸಲು, ಅಭಿವೃದ್ಧಿಗೆ ಮೀಸಲು ಎಂದು ಗುರುತಿಸಿ ಅಲ್ಲಿ ಕಾರ್ಯ ಮಾಡಬಹುದು ಎಂದು ತಜ್ಞರು ಹೇಳಿದ್ದಾರೆ. ಹೀಗಾಗಿ ಪರಿಸರ ಉಳಿಸಿಕೊಳ್ಳಲು ಈ ಚಿಂತನೆ ಕೀಲಿಕೈ ಆಗಬಹುದು ಎಂದು ಅಭಿಪ್ರಾಯಪಟ್ಟರು.
ಹಿರಿಯ ವಕೀಲ ಅಶೋಕ್ ಹಾರ್ನಹಳ್ಳಿ ಮಾತನಾಡಿ, ಅಭಿವೃದ್ಧಿಗೆ ಪರಿಸರ ನಾಶ ಮಾಡುವಾಗ ಯೋಜನಾ ಪ್ರದೇಶದಲ್ಲಿ ಲಕ್ಷಗಟ್ಟಲೆ ಮರ ಕಡಿದು ಇನ್ನೊಂದು ಕಡೆ ಮರ ಬೆಳೆಸುತ್ತೇವೆ ಎನ್ನುವುದು ಎಷ್ಟು ಸಮಂಜಸ? ಡಿಪಿಆರ್ ಹಂತದಲ್ಲಿ ಇರುವಾಗಲೇ ಈ ಯೋಜನೆಗಳನ್ನು ತಡೆಯುವ ಕೆಲಸ ಮಾಡಬೇಕು ಎಂದರು.
ಉ.ಕ.ಪರಿಸರ ನಾಶ ದುಷ್ಪರಿಣಾಮ
ಪಶ್ಚಿಮಘಟ್ಟ ಬಹಳ ಸೂಕ್ಷ್ಮ ಪ್ರದೇಶ. ಅದನ್ನು ಅರ್ಥಮಾಡಿಕೊಳ್ಳಬೇಕು. ಉತ್ತರನ್ನಡದ ಪರಿಸರದ ಮೇಲಿನ ಪ್ರಹಾರ, ನದಿತಿರುವು ಯೋಜನೆಗಳು ಜಿಲ್ಲೆಗೆ ಮಾತ್ರವಲ್ಲದೆ ರಾಜ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಎಚ್ಚರಿಸಿದರು.
ಪಶ್ಚಿಮಘಟ್ಟದಲ್ಲಿನ ನದಿತಿರುವು ಯೋಜನೆಗೆ ಇನ್ನೂ ಹೆಚ್ಚಿನ ತಜ್ಞ ಅಧ್ಯಯನ, ವರದಿಗಳು ಬೇಕು. ವ್ಯವಸ್ಥಿತ ಧಾರಣಾ ಸಾಮರ್ಥ್ಯದ ವರದಿ ಆಗಬೇಕು. ಯೋಜನೆಗಳಿಗೆ ಸಂಬಂಧಿಸಿ, ಸಭೆಯಲ್ಲಿ ತೆಗೆದುಕೊಳ್ಳುವ ಎಲ್ಲ ನಿರ್ಣಯಗಳಿಗೂ ನಾನು ಬದ್ಧ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಮಟ್ಟದಲ್ಲಿ ಯೋಜನೆಗಳನ್ನು ಕೈಬಿಡುವಂತೆ ಆಗ್ರಹಿಸಿ, ರಚನಾತ್ಮಕವಾಗಿ ಕೆಲಸ ಮಾಡುತ್ತೇವೆ. ನಿಮ್ಮೊಂದಿಗೆ ಇದ್ದು, ನನ್ನ ಪಾತ್ರ ನಾನು ನಿರ್ವಹಿಸುತ್ತೇನೆ’ಎಂದು ಭರವಸೆ ನೀಡಿದರು.