ದೊಡ್ಡಬಳ್ಳಾಪುರ: ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ 4 ಕಾರ್ಮಿಕ ಸಂಹಿತೆಗಳ ಅನುಷ್ಠಾನಕ್ಕೆ ಪ್ರಕಟಿಸಿರುವ ನಿಯಮಾವಳಿಗಳ ಅಧಿಸೂಚನೆ ಪ್ರತಿಯನ್ನು ಸುಡುವ ಮೂಲಕ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಿಐಟಿಯು ನೇತೃತ್ವದಲ್ಲಿ ದೊಡ್ಡಬಳ್ಳಾಪುರದ ತಾಲೂಕು ಕಚೇರಿ ವೃತ್ತದಲ್ಲಿ ಮಂಗಳವಾರ ಸಂಜೆ ಪ್ರತಿಭಟನೆ ನಡೆಸಲಾಯಿತು.
ದೇಶದ ಕಾರ್ಮಿಕ ವರ್ಗವು ನಿರಂತರವಾಗಿ ಪ್ರತಿರೋಧವನ್ನು ವ್ಯಕ್ತಪಡಿಸುತ್ತಿದ್ದರೂ, ದೇಶದ ದುಡಿಯುವ ಜನರ ಅಭಿಪ್ರಾಯಗಳನ್ನು ತಿರಸ್ಕರಿಸಿ, ವಿದೇಶಿ ಹಾಗು ಸ್ವದೇಶಿ ಕಾರ್ಪೊರೇಟ್ ಬಂಡವಾಳಿಗರ ಅನುಕೂಲಕ್ಕಾಗಿ ಈ ನಾಲ್ಕು ಸಂಹಿತೆಗಳನ್ನು ಜಾರಿಗೆ ತರಲಾಗಿದೆ. ಸರ್ಕಾರವು ಹಠಮಾರಿ ಧೋರಣೆಯೊಂದಿಗೆ, ಜಾರಿಗೊಳಿಸುತ್ತಿರುವ ಈ ಕಾನೂನುಗಳು ಅತ್ಯಂತ ದೇಶದ್ರೋಹಿ ಕ್ರಮವಾಗಿವೆ ಎಂದು ಟೀಕಿಸಿದರು.
ಹಲವಾರು ದಶಕಗಳಿಂದ ಹೋರಾಟಗಳ ಮೂಲಕ ಗಳಿಸಲಾದ ಕಾರ್ಮಿಕರ ಮೂಲಭೂತ ಹಕ್ಕುಗಳನ್ನು ಹಾಗು ಸವಲತ್ತುಗಳನ್ನು ನಾಶಮಾಡುವ ಕ್ರಮ ಇದಾಗಿದೆ. ಬಂಡವಾಳಿಗರು ಮಾಡುತ್ತಿದ್ದ ಎಲ್ಲಾ ಕಾನೂನು ಉಲ್ಲಂಘನೆಗಳನ್ನು ಕಾನೂನು ಬದ್ಧಗೊಳಿಸುವುದಲ್ಲದೆ, ಖಾಯಂ ಉದ್ಯೋಗದ ಅವಕಾಶಗಳೇ ಭಾರತೀಯ ಯುವ ಪೀಳಿಗೆಗಳಿಗೆ ಇಲ್ಲದಂತೆ ಮಾಡುವ ಕ್ರಮವಾಗಿದೆ. ನವ ಗುಲಾಮಗಿರಿಗೆ ಹಾಲಿ ಹಾಗು ಭಾವಿ ಕಾರ್ಮಿರನ್ನು ಒಳಪಡಿಸುವ ಕುತಂತ್ರವಾಗಿದೆ ಎಂದರು.ಸಿಐಟಿಯು ಸಂಘಟನೆಯು ಈ ಸಂಹಿತೆಗಳನ್ನು ಕಾರ್ಮಿಕರ ಜೀವನ ಮತ್ತು ಜೀವನೋಪಾಯಗಳ ಮೇಲಿನ ನರಮೇಧದ ದಾಳಿಗಳೆಂದು ಪರಿಗಣಿಸುತ್ತದೆ. ಇವು ಕಾರ್ಮಿಕರ ಮೇಲೆ ಗುಲಾಮಗಿರಿಯನ್ನು ಹೇರುವುದು ಮಾತ್ರವಲ್ಲದೇ, ಕಾರ್ಮಿಕರ ಪ್ರತಿಯೊಂದು ಹಕ್ಕು ಹಾಗು ಪ್ರತಿಭಟಿಸುವ ಅವಕಾಶಗಳನ್ನು ಕಸಿದುಕೊಳ್ಳುತ್ತವೆ ಎಂದರು.
ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ತಾಲೂಕು ಕಾರ್ಯದರ್ಶಿ ಎಲ್.ಸಿ.ಸುಮಾ, ಕಾರ್ಮಿಕ ಮುಖಂಡರಾದ ಮನೀಶ್ ಶರ್ಮ,ಪಿ.ಕೆ. ವೆಂಕಟೇಶ್, ಬೀದಿ ಬದಿ ವ್ಯಾಪಾರಿಗಳ ಸಂಘದ ಮುಖಂಡ ನರೇಶ್ ಕುಮಾರ್, ಆಟೋರಿಕ್ಷಾ ಡ್ರೈವರ್ಸ್ ಯೂನಿಯನ್‌ನ ಏಜಾಜ್ ಪಾಷಾ ಮತ್ತಿತರರು ಪಾಲ್ಗೊಂಡಿದ್ದರು.
12ಕೆಡಿಬಿಪಿ1- ದೊಡ್ಡಬಳ್ಳಾಪುರದಲ್ಲಿ ಬೆಂ.ಗ್ರಾ ಜಿಲ್ಲಾ ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕ ಸಂಹಿತೆಗಳ ನಿಯಮಾವಳಿಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಯಿತು.