ಅಡಕೆ ಆಮದು ಮಾಡಿಕೊಳ್ಳುವ ಕೇಂದ್ರದ ನಡೆಗೆ ಆಕ್ರೋಶ

KannadaprabhaNewsNetwork |  
Published : Sep 25, 2024, 01:04 AM IST
ನರಸಿಂಹರಾಜಪುರ ಪಟ್ಟಣದ ಅಂಬೇಡ್ಕರ್‌ ವೃತ್ತದಲ್ಲಿ ಕಾಂಗ್ರೆಸ್‌ ಪಕ್ಷವು ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಮಾತನಾಡಿದರು. | Kannada Prabha

ಸಾರಾಂಶ

ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸಿ ದೇಶದ ಕೆಲವೇ ಗುಟ್ಕಾ ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ವಿದೇಶದಿಂದ ಕಳಪೆ ಅಡಕೆ ಆಮದು ಮಾಡಿಕೊಳ್ಳಲು ಮುಂದಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಘಟಕ ಅಧ್ಯಕ್ಷ ಕೆ.ಪಿ. ಅಂಶುಮಂತ್ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸಿ ದೇಶದ ಕೆಲವೇ ಗುಟ್ಕಾ ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ವಿದೇಶದಿಂದ ಕಳಪೆ ಅಡಕೆ ಆಮದು ಮಾಡಿಕೊಳ್ಳಲು ಮುಂದಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಘಟಕ ಅಧ್ಯಕ್ಷ ಕೆ.ಪಿ. ಅಂಶುಮಂತ್ ಆರೋಪಿಸಿದರು.ಸೋಮವಾರ ಸಂಜೆ ಪಟ್ಟಣದ ಅಂಬೇಡ್ಕರ್‌ ವೃತ್ತದಲ್ಲಿ ವಿದೇಶದಿಂದ ಕೇಂದ್ರ ಸರ್ಕಾರ ಅಡಕೆ ಆಮದು ಮಾಡಿಕೊಳ್ಳುತ್ತಿರುವುದನ್ನು ವಿರೋಧಿಸಿ ತಾಲೂಕು ಕಾಂಗ್ರೆಸ್ ಘಟಕದಿಂದ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ ಅವರು ಮಾತನಾಡಿದರು.

ಕೇಂದ್ರ ಸಚಿವ ಸಂಪುಟದಲ್ಲಿ ರಾಜ್ಯ ಖಾತೆ ಆರೋಗ್ಯ ಸಚಿವ ಅನುಪ್ರಿಯ ಪಾಟೀಲ್ ಅಡಕೆ ತಿನ್ನುವುದರಿಂದ ಕ್ಯಾನ್ಸರ್ ಬರುತ್ತದೆ ಎಂಬ ಹೇಳಿಕೆ ನೀಡುವ ಮೂಲಕ ಅತಿವೃಷ್ಟಿ, ಅನಾವೃಷ್ಟಿ ಹಾಗೂ ವಿವಿಧ ರೋಗಗಳಿಂದ ಅಡಕೆ ಬೆಳೆ ಕಾಪಾಡಿಕೊಂಡು ಬಂದಿರುವ ಬೆಳೆಗಾರರನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದ್ದಾರೆ ಎಂದು ದೂರಿದರು.

ಬಿಜೆಪಿಗೆ ಚುನಾವಣೆ ಸಂದರ್ಭದಲ್ಲಿ ನೆರವು ನೀಡಿದ ಉತ್ತರ ಭಾರತದ ಗುಟ್ಕಾ ಕಂಪನಿಯ ಉದ್ಯಮಿಗಳಿಗೆ ಅನುಕೂಲ ಮಾಡುವ ದೃಷ್ಟಿಯಿಂದ ಭಾರತದಲ್ಲಿ ಬೆಳೆವ ಅಡಕೆಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸದೆ ಭೂತಾನ್ ನಿಂದ 17 ಸಾವಿರ ಟನ್ ಕಳಪೆ ಅಡಕೆ ಆಮದಿನ ಮೂಲಕ ದೇಶದ ಅಡಕೆ ಬೆಲೆ ಕುಸಿತಕ್ಕೆ ಕೇಂದ್ರ ಕಾರಣವಾಗಿದೆ ಎಂದು ಆರೋಪಿಸಿದರು.ಕೇಂದ್ರ ಸರ್ಕಾರ ಅಡಕೆಯನ್ನು ಅರಣ್ಯ ಉತ್ಪನ್ನ ಎಂದು ಘೋಷಿಸಲು ಹೊರಟಿದೆ. ಅಡಕೆ ಅರಣ್ಯ ಉತ್ಪನ್ನವಾದರೆ ರೈತರು ಅಡಕೆ ಬೆಳೆಯಲು ಅರಣ್ಯ ಇಲಾಖೆ ಒಪ್ಪಿಗೆ ಪಡೆಯಬೇಕಾಗುತ್ತದೆ. ವಿದೇಶದಿಂದ ಅಡಕೆ ಆಮದು ಮಾಡಿಕೊಳ್ಳುವ ಮೂಲಕ ರೈತರ ಬದುಕನ್ನು ಕೇಂದ್ರ ನಾಶ ಮಾಡಲು ಹೊರಟಿದ್ದರೂ ಮಾಜಿ ಶಾಸಕರು ಕಾಂಗ್ರೆಸ್ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.

ರೈತರ ಬದುಕು ನಾಶವಾಗುತ್ತಿದ್ದರೂ ಸಂಸದರು ವಿದೇಶದಿಂದ ಅಡಕೆ ಆಮದು ನಿಲ್ಲಿಸುವ ಬಗ್ಗೆ ಯಾವುದೇ ಪ್ರಯತ್ನ ಮಾಡುತ್ತಿಲ್ಲ. ಹಳದಿ ಎಲೆ ರೋಗ ಪೀಡಿತ ತೋಟದ ರೈತರ ಸಾಲ ಮನ್ನಾಮಾಡುವ, ಕಸ್ತೂರಿ ರಂಗನ್ ವರದಿ ಜಾರಿಯಾಗಲು ಬಿಡುವುದಿಲ್ಲ ಎಂಬ ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿಯವರು ಅಡಕೆ ಬೆಳೆಗಾರರ ಬದುಕು ನಾಶ ಮಾಡಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಎಸ್. ಸುಬ್ರಹ್ಮಣ್ಯ ಮಾತನಾಡಿ, ಅಡಕೆ ಬೆಳೆಗೆ ತಗಲಿರುವ ಹಲವು ರೋಗಗಳಿಂದ ಬೆಳೆ ಕುಸಿತವಾಗಿದೆ. ಸರ್ಕಾರ ಅಡಕೆಯನ್ನು ಪಾರಂಪರಿಕ ಬೆಳೆ ಎಂದು ಘೋಷಿಸುವ ಮೂಲಕ ವಿದೇಶದಿಂದ ಆಮದಾಗುವ ಅಡಕೆ ಮೇಲೆ ಸುಂಕ ವಿಧಿಸದಿರುವುದರಿಂದ ದೇಶಿಯ ಅಡಕೆ ಬೆಲೆ ಕುಸಿತ ಕಂಡಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ರೈತರನ್ನು ಭೂಗಳ್ಳರು ಎಂದು ಹಣೆ ಪಟ್ಟಿಕಟ್ಟಿತ್ತು. ಕೇಂದ್ರ ಸರ್ಕಾರ ಪ್ರಸ್ತುತ ರೈತರ ವಿರೋಧಿ ನೀತಿ ಅನುಸರಿಸುತ್ತಿದೆ ಎಂದರು.ತಾಲೂಕು ಬಗರ್ ಹುಕುಂ ಸಮಿತಿ ಅಧ್ಯಕ್ಷ ಈ.ಸಿ. ಜೋಯಿ, ತಾಲೂಕು ಕಾಂಗ್ರೆಸ್ ಘಟಕ ಅಧ್ಯಕ್ಷ ಗೇರುಬೈಲು ನಟರಾಜ್, ನಗರ ಅಧ್ಯಕ್ಷ ಬಿಳಾಲು ಮನೆ ಉಪೇಂದ್ರ, ಮುಖಂಡರಾದ ಸಾಜು, ಸುನಿಲ್, ಬೆನ್ನಿ, ರವಿಶಂಕರ್, ಎಲ್ದೋಸ್, ಬಿನು, ಮಂಜುನಾಥ್ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

500 ನಾಯಿಗಳಿಗೆ ಚಿಕನ್‌ ರೈಸ್ ನೀಡಲು ವರ್ಷಕ್ಕೆ 1.83 ಕೋಟಿ
ಯಲಹಂಕದಲ್ಲಿ ‘ಚೀನಾದ ಹ್ಯಾಂಗ್‌ಝೌ’ ಮಾದರಿ ರೈಲು ನಿಲ್ದಾಣ