ಬೆಳೆನಷ್ಟ ಪರಿಹಾರ ವಿತರಣೆ ವಿಳಂಬಕ್ಕೆ ಆಕ್ರೋಶ

KannadaprabhaNewsNetwork | Published : Nov 19, 2023 1:30 AM

ಸಾರಾಂಶ

ಬೆಳೆನಷ್ಟ ಪರಿಹಾರ ವಿತರಣೆ ವಿಳಂಬಕ್ಕೆ ಆಕ್ರೋಶ

ಚಿತ್ರದುರ್ಗದಲ್ಲಿ ರೈತ ಸಂಘದಿಂದ ಪ್ರತಿಭಟನೆ । ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ । ಕೂಡಲೇ ಬೆಳೆ ನಷ್ಟ ಪರಿಹಾರ, ವಿಮೆ ಜಮೆಗೆ ಆಗ್ರಹಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಬೆಳೆನಷ್ಟ ಪರಿಹಾರ ವಿತರಣೆಯಲ್ಲಿ ರಾಜ್ಯ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ರೈತ ಸಂಘದ ಕಾರ್ಯಕರ್ತರು ಶನಿವಾರ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ನಗರದ ಪ್ರವಾಸಿ ಮಂದಿರದಿಂದ ಮೆರವಣಿಗೆಯಲ್ಲಿ ಬಂದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಬಳಿ ಸಭೆ ಮಾಡಿ ಆಕ್ರೋಶ ಹೊರ ಹಾಕಿದರು. ಚಿತ್ರದುರ್ಗ ಜಿಲ್ಲೆಯನ್ನು ರಾಜ್ಯ ಸರ್ಕಾರ ಈಗಾಗಲೇ ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದೆ. ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಫಸಲು ಪೂರ್ಣ ಪ್ರಮಾಣದಲ್ಲಿ ಒಣಗಿ ಹೋಗಿದ್ದು, ರೈತ ನಷ್ಟ ಅನುಭವಿಸಿದ್ದಾನೆ. ಸರ್ಕಾರವೇ ಬರ ಎಂದು ಘೋಷಿಸಿದ ಮೇಲೆ ಪರಿಹಾರ ನೀಡಲು ಮತ್ಯಾರ ಪ್ರಮಾಣ ಪತ್ರ ಬೇಕು. ಕೂಡಲೇ ಬೆಳೆ ನಷ್ಟಪರಿಹಾರ ಹಾಗೂ ಬೆಳೆ ವಿಮೆ ಪರಿಹಾರ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಬೇಕೆಂದು ಆಗ್ರಹಿಸಿದರು.

ರಾಜ್ಯ ಸರ್ಕಾರ ಘೋಷಣೆ ಮಾಡಿದ್ದರೂ ಇಲ್ಲಿಯವರೆಗೂ ಯಾವುದೇ ಬರಪರಿಹಾರದ ಕಾಮಗಾರಿ ಕೈಗೊಳ್ಳಲಾಗಿಲ್ಲ. ಮೊಳಕಾಲ್ಮೂರು, ಚಳ್ಳಕೆರೆ ಪ್ರದೇಶದಲ್ಲಿ ಕೃಷಿ ಕಾರ್ಮಿಕರು ಗುಳೇ ಹೋಗುತ್ತಿದ್ದಾರೆ. ಬೆಳೆನಷ್ಟ ಪರಿಹಾರ ಮೊತ್ತವ ಬ್ಯಾಂಕ್ ಗೆ ಹಾಕಿದ್ದರೆ ಅನುಕೂಲವಾಗುತ್ತಿತ್ತು. ಕೇಂದ್ರ ಸರ್ಕಾರ ಕೂಡಾ ಬೆಳೆನಷ್ಟ ಪರಿಹಾರ ನೀಡಲು ಉದಾಸೀನ ತೋರುತ್ತಿದೆ. ರಾಜ್ಯದ ಸಂಸದರ ನಡೆ ಈ ವಿಚಾರದಲ್ಲಿ ರೈತ ವಿರೋಧಿ ನಿಲುವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ವಿಚಾರದಲ್ಲಿ ಹಠ ಮಾಡದೆ, ಪರಸ್ಪರ ಒಬ್ಬೊರ ಮೇಲೊಬ್ಬರು ದೂಷಿಸುತ್ತಾ ಕೂರದೆ ಬೆಳೆನಷ್ಟ ಪರಿಹಾರ ವಿತರಿಸುವುದರ ಮೂಲಕ ರೈತರ ತೆರವಿಗೆ ಧಾವಿಸಬೇಕೆಂದು ಒತ್ತಾಯಿಸಿದರು.

ಕೃಷಿ ಪಂಪ್‌ಸೆಟ್‌ಗಳಿಗೆ ರೈತರೇ ಕಂಬ, ವೈರ್, ವಿದ್ಯುತ್ ಪರಿವರ್ತಕಗಳ ಸ್ವಂತ ಖರ್ಚಿನಲ್ಲಿ ಭರಿಸಬೇಕೆಂದು ರಾಜ್ಯ ಸರ್ಕಾರ ಆದೇಶಿದೆ. ಬಯಲು ಸೀಮೆಯಯಲ್ಲಿ ಪೂರ್ಣ ಪ್ರಮಾಣದ ನೀರಾವರಿ ಕಲ್ಪಿಸುವಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ಮಾಡಿದೆ. ತಾನು ಮಾಡಿದ ಲೋಪವ ಸರಿಪಡಿಸಿಕೊಳ್ಳಲು ರೈತರಿಗೆ ಉಚಿತವಾಗಿ ವಿದ್ಯುತ್ ಪೂರೈಕೆ ಅನಿವಾರ್ಯ. ಸರ್ಕಾರ ತನ್ನ ಆದೇಶವನ್ನು ವಾಪಾಸ್ ಪಡೆದು ಮೊದಲಿನಂತೆ ಖರ್ಚು ವೆಚ್ಚ ಭರಿಸಬೇಕೆಂದು ಆಗ್ರಹಿಸದರು. ಖರ್ಚುಗಳನ್ನು ಧರಿಸಬೇಕೆಂದು ರೈತಸಂಘ ಒತ್ತಾಯಿಸಿತು.

ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಜಾನುವಾರುಗಳಿಗೆ ಗೋಶಾಲೆ ತೆರೆಯಬೇಕು ಹಾಗೂ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ನೀರಿನ ತೊಟ್ಟಿ, ಟ್ಯಾಂಕ್ ಗಳನ್ನು ಶುದ್ಧಗೊಳಿಸಿ, ಶುದ್ಧ ಕುಡಿವ ನೀರು ಸರಬರಾಜು ಮಾಡುವಂತೆ ಸೂಚನೆ ನೀಡಬೇಕು. ಎಲ್ಲಾ ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕ್‌ಗಳಲ್ಲಿ ರೈತರ ಕೃಷಿಸಾಲ ವಸೂಲಿಯನ್ನು ತಡೆಗಟ್ಟಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣವಾಗಿ ಮನ್ನಾ ಮಾಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಪಿ. ಭೂತಯ್ಯ, ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಸುರೇಶ್ ಬಾಬು, ಜಿಲ್ಲಾ ಕಾರ್ಯಾಧ್ಯಕ್ಷ ಕೆ.ಸಿ. ಹೊರಕೇರಪ್ಪ, ಹಿರಿಯೂರು ತಾಲೂಕು ಅಧ್ಯಕ್ಷ ಬ್ಯಾಡರಹಳ್ಳಿ ಶಿವಕುಮಾರ್, ರಾಜ್ಯ ಮುಖಂಡ ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ತಾಲೂಕು ಅಧ್ಯಕ್ಷ ಪಂಪಯ್ಯನಮಾಳಿಗೆ ಧನಂಜಯ, ತಿಮ್ಮಣ್ಣ, ಶಶಿಕಲಾ, ಮಲ್ಲಿಕಾರ್ಜುನ, ಗಂಗಾಧರಪ್ಪ, ಹಂಪಣ್ಣ, ಸುರೇಶ್, ರಾಮಚಂದ್ರಪ್ಪ, ರಾಜಣ್ಣ, ನಿತ್ಯ ಶ್ರೀ, ಸೇರಿದಂತೆ ಇತರರು ಭಾಗವಹಿಸಿದ್ದರು.

- - -

ಬೆಳೆನಷ್ಟ ಪರಿಹಾರ ವಿತರಣೆಯಲ್ಲಿ ರಾಜ್ಯ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ರೈತ ಸಂಘದ ಕಾರ್ಯಕರ್ತರು ಶನಿವಾರ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿದರು.

- 18ಸಿಟಿಡಿ1--

Share this article