ಭಟ್ಕಳ: ಪುರಸಭೆಯ ಪ್ರಭಾರ ಅಧ್ಯಕ್ಷ ಅಲ್ತಾಫ್ ಖರೂರಿ ಅಧ್ಯಕ್ಷತೆಯಲ್ಲಿ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಒಳಚರಂಡಿ ಅವ್ಯವಸ್ಥೆ, ರಸ್ತೆಯಲ್ಲಿ ಬಿದ್ದಿರುವ ಹೊಂಡ, ಬೀದಿದೀಪ ಮುಂತಾದವುಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಿ ಪರಿಹಾರಕ್ಕೆ ಸದಸ್ಯರು ಆಗ್ರಹಿಸಿದರು.
ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿ ಗುತ್ತಿಗೆ ಪಡೆದ ಕಂಪನಿ ರಸ್ತೆಯನ್ನು ಒಳಚರಂಡಿ ಪೈಪ್ ಲೈನ್ ಮತ್ತು ಮ್ಯಾನ್ ಹೋಲ್ ಗಾಗಿ ಬೇಕಾಬಿಟ್ಟಿ ರಸ್ತೆ ಅಗೆದು ಇದೀಗ ಹೊಂಡ ಮುಚ್ಚಿಸಲು ಮುಂದೆ ಬರುತ್ತಿಲ್ಲ. ಇದರಿಂದಾಗಿ ಪಟ್ಟಣದ ರಸ್ತೆಗಳು ಮಳೆಗಾಲದಲ್ಲಿ ಕೆಸರುಗದ್ದೆಯಾಗಿ ಮಾರ್ಪಡುತ್ತಿದ್ದು, ಸಾರ್ವಜನಿಕರು ದಿನನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಉತ್ತರಿಸಿದ ಪ್ರಭಾರೆ ಅಧ್ಯಕ್ಷ ಅಲ್ತಾಫ್ ಖರೂರಿ ಅವರು, ರಸ್ತೆ ಗುಂಡಿ ಮುಚ್ಚಿಸಲು ₹10 ಲಕ್ಷದ ಕ್ರಿಯಾಯೋಜನೆ ರೂಪಿಸಲು ನಿರ್ಧರಿಸಲಾಗಿದೆ ಎಂದರು.ಪುರಸಭೆ ಸದಸ್ಯ ಫಯ್ಯಾಜ್ ಮುಲ್ಲಾ, ಹೆದ್ದಾರಿ ಅಗಲೀಕರಣ ನೆಪವೊಡ್ಡಿ ಪುರಸಭೆ ಬೀದಿದೀಪಗಳನ್ನು ಹೆದ್ದಾರಿಯಿಂದ ತೆರವು ಮಾಡಲಾಗಿದೆ. ಇದಕ್ಕೆ ಪರ್ಯಾಯವಾಗಿ ಈವರೆಗೆ ಐ.ಆರ್.ಬಿಯಿಂದ ಬೀದಿದೀಪ ಅಳವಡಿಸಿಲ್ಲ. ರಸ್ತೆಯಲ್ಲಿ ಬೀದಿದೀಪ ಇಲ್ಲದೇ ರಾತ್ರಿ ವೇಳೆ ಅಪಘಾತಗಳಾಗುತ್ತಿವೆ. ಪುರಸಭೆಯಿಂದ ಹೆದ್ದಾರಿಯಲ್ಲಿ ಬೀದಿದೀಪ ಅಳವಡಿಸಿ ಸಂಭವಿಸುವ ಅಪಘಾತಗಳನ್ನು ತಡೆಯಬೇಕು ಎಂದು ಆಗ್ರಹಿಸಿದರು.
ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸದಸ್ಯರು, ಅವರು ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳುವ ತನಕ ಬೀದಿದೀಪ ಅಳವಡಿಸುವುದಿಲ್ಲ. ಪುರಸಭೆಯಿಂದಲೇ ಅಗತ್ಯ ಕಡೆಗಳಲ್ಲಿ ಬೀದಿ ಅಳವಡಿಸಬೇಕು ಎಂದು ಆಗ್ರಹಿಸಿದರು.
ಸಭೆಯಲ್ಲಿ ಪಟ್ಟಣದ ಹಲವು ಸಮಸ್ಯೆಗಳ ಬಗ್ಗೆ ಸದಸ್ಯರು ಚರ್ಚೆ ನಡೆಸಿ ಪರಿಹಾರಕ್ಕೆ ಆಗ್ರಹಿಸಿದರು. ಕಚೇರಿ ವ್ಯವಸ್ಥಾಪಕ ವೆಂಕಟೇಶ ನಾಯ್ಕ, ಅಭಿಯಂತರ ಅರವಿಂದ ರಾವ್, ಆರೊಗ್ಯ ನಿರೀಕ್ಷಕಿ ಸೋಜಿಯಾ ಸೋಮನ್ ಮುಂತಾದವರಿದ್ದರು.