ಬುದ್ದಿಮಾಂದ್ಯ ಬಾಲಕಿ ಮೇಲೆ ಗ್ಯಾಂಗ್ ರೇಪ್ ಗೆ ಆಕ್ರೋಶ; ಮುಸ್ಲಿಂ ಸಂಘಟನೆಗಳ ಪ್ರತಿಭಟನೆ

KannadaprabhaNewsNetwork |  
Published : Aug 14, 2025, 01:00 AM IST
ಮುಸ್ಲಿಂ ಸಂಘಟನೆಗಳ ಪ್ರತಿಭಟನೆ  | Kannada Prabha

ಸಾರಾಂಶ

ಹಾಸನ ಜಿಲ್ಲೆಯಲ್ಲಿ ನಡೆಯುತ್ತಿರುವ ಮಾದಕ ವಸ್ತುಗಳ ಮಾರಾಟ ಜಾಲವನ್ನು ಪತ್ತೆಹಚ್ಚಿ ಶಿಕ್ಷೆಗೆ ಒಳಪಡಿಸಬೇಕು ಹಾಗೂ ಅಲ್ಪಸಂಖ್ಯಾತ ಸಮುದಾಯ ಹೆಚ್ಚಿರುವ ಮೊಹಲ್ಲಾಗಳಲ್ಲಿ ವಿದ್ಯಾರ್ಥಿ- ಯುವಜನ ಸಂವಾದ ಕಾರ್ಯಕ್ರಮಗಳನ್ನು ನಡೆಸಿ ಮಾದಕ ವಸ್ತುಗಳ ಮಾರಾಟದ ಹಾಗೂ ಸೇವನೆಯ ಪರಿಣಾಮಗಳ ಬಗ್ಗೆ ಚರ್ಚಿಸುವ ಕಾರ್ಯಕ್ರಮಗಳನ್ನು ರೂಪಿಸಬೇಕು.

ಕನ್ನಡಪ್ರಭ ವಾರ್ತೆ ಹಾಸನ

ಪೆನ್ಷನ್ ಮೊಹಲ್ಲಾ ವ್ಯಾಪ್ತಿಯಲ್ಲಿ ಬುದ್ದಿಮಾಂದ್ಯ ಬಾಲಕಿ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರ ವಿರೋಧಿಸಿ, ಆರೋಪಿತರಿಗೆ ಗರಿಷ್ಠ ಪ್ರಮಾಣದ ಶಿಕ್ಷೆ ಹಾಗೂ ಸಂತ್ರಸ್ಥೆಗೆ ೨೫ ಲಕ್ಷ ರು. ಪರಿಹಾರಕ್ಕೆ ಆಗ್ರಹಿಸಿ ಮತ್ತು ಜಿಲ್ಲೆಯಲ್ಲಿ ನಡೆಯುತ್ತಿರುವ ಮಾದಕ ವಸ್ತುಗಳ ಮಾರಾಟ ಜಾಲವನ್ನು ಪತ್ತೆಹಚ್ಚಿ ಶಿಕ್ಷೆ ನೀಡುವಂತೆ ಒತ್ತಾಯಿಸಿ ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದಿಂದ ಬುಧವಾರ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅನ್‌ಷಾದ್ ಪಾಳ್ಯ ಮತ್ತು ಶಾಹಿರಾ ಮಾತನಾಡಿ, ಜಿಲ್ಲೆಯೇ ಬೆಚ್ಚಿ ಬೀಳಿಸುವಂತಹ ಪೈಶಾಚಿಕ ಕೃತ್ಯ ಕಳೆದ ಐದು ದಿನಗಳ ಹಿಂದೆ ಬೆಳಕಿಗೆ ಬಂದಿದೆ. ನಗರದ ಪೆನ್ಷನ್‌ ಮೊಹಲ್ಲಾ ವ್ಯಾಪ್ತಿಯಲ್ಲಿ ಬುದ್ದಿಮಾಂದ್ಯ ಸಹೋದರಿಯ ಮೇಲೆ ನಾಲ್ಕು ಜನ ದುರುಳರು ಸೇರಿ ಸಾಮೂಹಿಕ ಅತ್ಯಾಚಾರ ಮಾಡಿರುತ್ತಾರೆ. ಈ ಘಟನೆಯಿಂದಾಗಿ ಇಡೀ ಸಮುದಾಯ ಇಂದು ಬಹಳ ನೋವಿನಿಂದ ಸಂತ್ರಸ್ಥ ಕುಟುಂಬದ ಜೊತೆ ಇದ್ದೇವೆ ಎನ್ನುವ ಸಂದೇಶ ನೀಡುತ್ತಾ, ಈ ಪ್ರಕರಣವು ಪೊಲೀಸ್ ಇಲಾಖೆಯ ಗಮನಕ್ಕೆ ಬಂದ ೨೪ ಗಂಟೆಯ ಒಳಗೆ ಆರೋಪಿಗಳನ್ನು ಬಂಧಿಸಿದ್ದು, ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಅತ್ಯಾಚಾರದಂತಹ ಪ್ರಕರಣದಿಂದ ಇಡೀ ನಗರದ ಜನ ಸಾಮಾನ್ಯರು ಇದರಿಂದ ಬೆಚ್ಚಿಬಿದ್ದಿದಾರೆ. ಈ ಘಟನೆಗೆ ಕಾರಣರಾದ ನಾಲ್ಕು ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ಹಾಗೂ ಇಂತಹ ಘಟನೆಗಳಿಗೆ ಪೂರಕವಾಗಿ ನಡೆಯುತ್ತಿರುವ ಮಾದಕ ವಸ್ತುಗಳ ಮಾರಾಟ ಸಂಪೂರ್ಣವಾಗಿ ತಡೆಗಟ್ಟುವ ಆಗ್ರಹ ನಮ್ಮದಾಗಿದೆ ಎಂದು ಹೇಳಿದರು.

ನಮ್ಮ ಪ್ರಮುಖ ಒತ್ತಾಯಗಳೆಂದರೆ ಸಂತ್ರಸ್ಥೆಯ ಕುಟುಂಬಕ್ಕೆ ಕನಿಷ್ಠ ೨೫ ಲಕ್ಷ ರು. ಪರಿಹಾರವನ್ನು ಆರೋಪಿಗಳಿಂದ ಕೊಡಿಸಬೇಕು. ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿತರಿಗೆ ಗರಿಷ್ಠ ಪ್ರಮಾಣದ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಈ ಪ್ರಕರಣವನ್ನು ನಡೆಸಲು ವಿಶೇಷ ನ್ಯಾಯಾಲಯ ರಚಿಸಬೇಕು ಹಾಗೂ ವಿಶೇಷ ಸರ್ಕಾರಿ ಅಭಿಯೋಜಕರನ್ನು ಸರ್ಕಾರ ನೇಮಿಸಬೇಕು ಎಂದು ಆಗ್ರಹಿಸಿದರು.

ಹಾಸನ ಜಿಲ್ಲೆಯಲ್ಲಿ ನಡೆಯುತ್ತಿರುವ ಮಾದಕ ವಸ್ತುಗಳ ಮಾರಾಟ ಜಾಲವನ್ನು ಪತ್ತೆಹಚ್ಚಿ ಶಿಕ್ಷೆಗೆ ಒಳಪಡಿಸಬೇಕು ಹಾಗೂ ಅಲ್ಪಸಂಖ್ಯಾತ ಸಮುದಾಯ ಹೆಚ್ಚಿರುವ ಮೊಹಲ್ಲಾಗಳಲ್ಲಿ ವಿದ್ಯಾರ್ಥಿ- ಯುವಜನ ಸಂವಾದ ಕಾರ್ಯಕ್ರಮಗಳನ್ನು ನಡೆಸಿ ಮಾದಕ ವಸ್ತುಗಳ ಮಾರಾಟದ ಹಾಗೂ ಸೇವನೆಯ ಪರಿಣಾಮಗಳ ಬಗ್ಗೆ ಚರ್ಚಿಸುವ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಸದಸ್ಯರಾದ ಸೈಯ್ಯದ್ ಯೂಸುಫ್, ಅಮೀರ್ ಜಾನ್, ಸೈಯ್ಯದ್ ಅನ್ಸರ್, ಫೈರೋಜ್ ಪಾಷಾ, ಇಮ್ರಾನ್ ಅರೇಹಳ್ಳಿ, ಮುಬಷೀರ್, ಧರ್ಮೇಶ್, ಸಾಹಿರಾ ಬಾನು, ರೂಬಿ ವಾಹಿದ್, ರೂಪ ಹಾಸನ, ಸೂಫಿ ಇಬ್ರಾಹಿಂ, ಫರೀದ್, ನವೀದ್, ಅಕ್ರಂ ಪಾಷ, ಫಾಜಿಲ್, ಸತ್ತಾರ್, ಅರ್ಬಾಜ್, ಶಾಹಿರಾ ಇತರರು ಇದ್ದರು.

PREV

Recommended Stories

ಋತು ರಜೆ ಕೊಡದಿದ್ದರೆ ಕ್ರಮ : ಲಾಡ್‌
ಪ್ರೇಮಿ ಜೊತೆ ಓಡಿ ಹೋದ ಮಗಳ ತಿಥಿ ಮಾಡಿದ ಅಪ್ಪ