ಧಾರವಾಡ:
ಈ ವರ್ಷದಿಂದ ಕರ್ನಾಟಕ ವಿಜ್ಞಾನ ಕಾಲೇಜಿನಲ್ಲಿ ಬಿಎಸ್ಸಿ ಓದುತ್ತಿರುವ ವಿದ್ಯಾರ್ಥಿಗಳಿಗೆ ₹ 6699 ಇರುವ ಕಾಲೇಜು ಶುಲ್ಕವನ್ನು ₹ 13,112ಕ್ಕೆ ಏರಿಸಲಾಗಿದೆ. ಇನ್ನು, ಈ ಮೊದಲಿದ್ದ ₹ 25,000 ಬಿಸಿಎ ಪ್ರವೇಶ ಶುಲ್ಕವನ್ನು ₹ 34, 522 ಆಗಿದೆ. ಅದೆಷ್ಟೋ ವಿದ್ಯಾರ್ಥಿಗಳು ಕಾಲೇಜು ಶುಲ್ಕ ಹೆಚ್ಚಳದಿಂದಾಗಿ ಈ ವರೆಗೂ ಶುಲ್ಕ ಪಾವತಿಸಿಲ್ಲ ಎಂದು ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಶಶಿಕಲಾ ಮೇಟಿ ಬೇಸರ ವ್ಯಕ್ತಪಡಿಸಿದರು.
ಈ ಕಾಲೇಜಿನಲ್ಲಿ ಓದಲು ಬರುವ ಬಹುಪಾಲು ವಿದ್ಯಾರ್ಥಿಗಳು ಬಡ ಹಾಗೂ ಮಧ್ಯಮ ವರ್ಗದ ಕುಟುಂಬದವರು. ಈ ಶುಲ್ಕ ಏರಿಕೆಯು ವಿದ್ಯಾರ್ಥಿಗಳಿಗೆ ಆತಂಕವನ್ನುಂಟು ಮಾಡಿದೆ. ಶಿಕ್ಷಣದಿಂದ ಹೊರಗುಳಿಯುವಂತಹ ಪರಿಸ್ಥಿತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಶುಲ್ಕ ಏರಿಕೆ ಹಿಂಪಡೆಯಬೇಕು ಹಾಗೂ ಈಗಾಗಲೇ ಶುಲ್ಕ ಏರಿಕೆಯ ಮೊತ್ತ ಪಾವತಿಸಿರುವ ವಿದ್ಯಾರ್ಥಿಗಳಿಗೆ ಶುಲ್ಕವನ್ನು ಮರುಪಾವತಿಸಬೇಕು ಎಂದು ಮೇಟಿ ಆಗ್ರಹಿಸಿದರು.ಮನವಿ ಸ್ವೀಕರಿಸಿದ ಪ್ರಾಂಶುಪಾಲರು, ಸಮಸ್ಯೆ ಕುರಿತು ಚರ್ಚಿಸಿ ಬಗೆಹರಿಸುವುದಾಗಿ ಭರವಸೆ ನೀಡಿದರು. ಎಐಡಿಎಸ್‌ಒ ಜಿಲ್ಲಾಧ್ಯಕ್ಷೆ ಸಿಂಧು ಕೌದಿ, ಸಂಘಟನಾಕಾರ ಶಾಂತೇಶ ನಂದಿಕೋಲಮಠ, ಸಿದ್ದು ಚಿಪ್ಪಲಕಟ್ಟಿ ಹಾಗೂ ಕಾಲೇಜಿನ ವಿದ್ಯಾರ್ಥಿಗಳಿದ್ದರು.