ಪರೀಕ್ಷಾ ಕೇಂದ್ರಗಳಲ್ಲಿ ಜನಿವಾರ ತೆಗೆಸಿರುವ ಕ್ರಮಕ್ಕೆ ಆಕ್ರೋಶ

KannadaprabhaNewsNetwork |  
Published : May 13, 2026, 01:15 AM IST
ಲಕ್ಷ್ಮೇಶ್ವರದಲ್ಲಿ ತಹಸೀಲ್ದಾರರ ಮೂಲಕ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಮನವಿ ಅರ್ಪಿಸಲಾಯಿತು. | Kannada Prabha

ಸಾರಾಂಶ

ರಾಜ್ಯವ್ಯಾಪಿ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಹಿಂದೂ ವಿದ್ಯಾರ್ಥಿಗಳ ಸಂವಿಧಾನದತ್ತವಾದ ಧರ್ಮಾಚರಣೆಯ ಮೇಲಿನ ಘಟನೆಯು ಸಮಸ್ತ ಹಿಂದೂ ಸಮಾಜವನ್ನು ತೀವ್ರವಾಗಿ ನೋವುಗೊಳಿಸಿದೆ.

ಲಕ್ಷ್ಮೇಶ್ವರ: ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಿರುವುದನ್ನು ಖಂಡಿಸಿ ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸೋಮವಾರ ಪಟ್ಟಣದಲ್ಲಿ ತಹಸೀಲ್ದಾರರ ಮೂಲಕ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಮನವಿ ಅರ್ಪಿಸಲಾಯಿತು.ಮನವಿ ಪತ್ರದಲ್ಲಿ ಪರೀಕ್ಷಾ ಕೇಂದ್ರದಲ್ಲಿ ವಿವಾಹಿತ ಹಿಂದೂ ಮಹಿಳೆಯರ ಮಂಗಳಸೂತ್ರ, ಕಾಲುಂಗುರ, ಮೂಗುತಿ, ಕಿವಿಯೋಲೆ, ಕೈದಾರ ಮುಂತಾದ ಧಾರ್ಮಿಕ ಚಿಹ್ನೆಗಳನ್ನು ತೆಗೆಯಲು ಒತ್ತಾಯಿಸುವ ಕ್ರಮಗಳನ್ನು ತಕ್ಷಣ ನಿಲ್ಲಿಸಬೇಕು.

ರಾಜ್ಯವ್ಯಾಪಿ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಹಿಂದೂ ವಿದ್ಯಾರ್ಥಿಗಳ ಸಂವಿಧಾನದತ್ತವಾದ ಧರ್ಮಾಚರಣೆಯ ಮೇಲಿನ ಘಟನೆಯು ಸಮಸ್ತ ಹಿಂದೂ ಸಮಾಜವನ್ನು ತೀವ್ರವಾಗಿ ನೋವುಗೊಳಿಸಿದೆ. ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಗಳಿಂದ ತಪಾಸಣೆ ನೆಪದಲ್ಲಿ ತಡೆದು, ಅವರು ಧರಿಸಿದ್ದ ಜನಿವಾರವನ್ನು ಬಲವಂತವಾಗಿ ತೆಗೆಸಲಾಗಿದೆ.

ಜನಿವಾರ ತೆಗೆದಿಲ್ಲದಿದ್ದರೆ ಪರೀಕ್ಷಾ ಕೇಂದ್ರಕ್ಕೆ ಪ್ರವೇಶವಿಲ್ಲ ಎಂದು ಬೆದರಿಕೆ ಹಾಕಲಾಗಿದೆ. ಪೋಷಕರು ಅನಿವಾರ್ಯವಾಗಿ ಜನಿವಾರ ತೆಗೆಸಿ ಮಕ್ಕಳನ್ನು ಪರೀಕ್ಷಾ ಕೊಠಡಿಗೆ ಕಳುಹಿಸಿರುವುದು, ಕೇವಲ ಒಂದು ವಿದ್ಯಾರ್ಥಿಯ ಅವಮಾನವಲ್ಲ; ಇದು ಸಂಪೂರ್ಣ ಹಿಂದೂ ಧಾರ್ಮಿಕ ಸಂಪ್ರದಾಯದ ಮೇಲೆ ನಡೆದ ಗಂಭೀರ ದಾಳಿ ಆಗಿದೆ ಎಂದು ಆರೋಪಿಸಲಾಗಿದೆ. ಈ ಹಿಂದೆ ಜನಿವಾರ ತೆಗೆಸಿದ ಕ್ರಮವನ್ನು ರಾಜ್ಯದ ಉಚ್ಚ ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿತ್ತು. ಆದರೂ ಮತ್ತೆ ಇದೇ ಘಟನೆ ಮರುಕಳಿಸಿರುವುದು ಆಡಳಿತದ ನಿರ್ಲಕ್ಷ್ಯ ಮತ್ತು ಹಿಂದೂ ಧಾರ್ಮಿಕ ಹಕ್ಕುಗಳ ವಿರುದ್ಧದ ನಡೆಯನ್ನು ತೋರಿಸುತ್ತದೆ ಈ ಹಿನ್ನೆಲೆ ಜನಿವಾರ ತೆಗೆಸಿದ ಎಲ್ಲ ಪರೀಕ್ಷಾ ಕೇಂದ್ರಗಳ ವಿರುದ್ಧ ಸಂಪೂರ್ಣ ತನಿಖೆ ನಡೆಸಬೇಕು. ಸಿಬ್ಬಂದಿ, ಆಡಳಿತ ಮಂಡಳಿ ಮತ್ತು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತು ಹಾಗೂ ಕಾನೂನು ಕ್ರಮ ಕೈಗೊಳ್ಳಬೇಕು.

ಪರೀಕ್ಷಾ ಕೇಂದ್ರಗಳ ಮಾನ್ಯತೆಯನ್ನು ರದ್ದುಪಡಿಸುವ ಕುರಿತು ಗಂಭೀರ ಪರಿಶೀಲನೆ ನಡೆಸಬೇಕು. ಈ ವೇಳೆ ಪರೀಕ್ಷೆಯಿಂದ ವಂಚಿತರಾದ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಗ್ರೇಡ್-೨ ತಹಸೀಲ್ದಾರ್ ಮಂಜುನಾಥ ಅಮಾಸಿ ಮನವಿ ಸ್ವೀಕರಿಸಿದರು. ಈ ವೇಳೆ ಹಿಂದೂ ಜನಜಾಗೃತಿ ಸಮಿತಿಯ ಶಂಕರ ಬ್ಯಾಡಗಿ, ಮಹಾದೇವಪ್ಪ ಕೊತ್ತಲ್, ಪ್ರಕಾಶ ಗುತ್ತಲ, ಅನಸೂಯಾ ಸಜ್ಜನರ, ಗೀತಾ ಬಡಿಗೇರ, ಮಹೇಶ ಗೋಡಿ, ಮಂಜುನಾಥ ಸುಣ್ಣದಮನಿ, ಮಲ್ಲಿಕಾರ್ಜುನ ದೊಡ್ಡೂರ ಮುಂತಾದವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗದುಗಿನಲ್ಲಿ ಹಾಲಿಗಿಂತ ಮೊದಲೇ ಇಲ್ಲಿ ಮದ್ಯ ಸಿಗುತ್ತೆ!
ಎರಡು ಲಕ್ಷಕ್ಕೂ ಅಧಿಕ ಭಕ್ತರಿಂದ ಹುಲಿಗೆಮ್ಮದೇವಿ ದರ್ಶನ