ಮುಂಡರಗಿ: ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಾಮಗಾರಿ ಪ್ರಾರಂಭಗೊಂಡು 5 ವರ್ಷ ಕಳೆದಿದ್ದು, ಆದರ್ಶ ಗ್ರಾಮ ಎಂದು ಘೋಷಣೆ ಮಾಡಲು ಸಾಧ್ಯವಾಗಿಲ್ಲ. ಇಲಾಖೆಯವರು ಕೆಲಸದ ಬಗ್ಗೆ ನಿರಂತರ ನಿಷ್ಕಾಳಜಿ ತೋರುತ್ತಿದ್ದು, ಇವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಡಿಸಿ ಹಾಗೂ ಸಿಎಸ್ ಅವರಿಗೆ ಅನುಮತಿ ಕೋರಿ ಪತ್ರ ಬರೆಯಲಾಗುವುದು ಎಂದು ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಉದಯಕುಮಾರ ಯಲಿವಾಳ ತಿಳಿಸಿದರು.ಇತ್ತೀಚೆಗೆ ತಾಪಂ ಸಾಮರ್ಥ್ಯ ಸೌಧದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿಯವರ ಅಧ್ಯಕ್ಷತೆಯಲ್ಲಿ ಜರುಗಿದ ತಾಲೂಕು ಮಟ್ಟದಲ್ಲಿ ಎಸ್‌ಸಿ ಎಸ್‌ಪಿ ಮತ್ತು ಟಿಎಸ್‌ಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಕೆಆರ್‌ಐಡಿಎಲ್ ಅಧಿಕಾರಿ ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ಆಯ್ಕೆಯಾದ ಕಕ್ಕೂರು ತಾಂಡಾದ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸದಿರುವುದರಿಂದ ಇತ್ತೀಚೆಗೆ ಗ್ರಾಮಸ್ಥರು ಅಧಿಕಾರಿಯನ್ನು ಗ್ರಾಮದ ದೇವಸ್ಥಾನದಲ್ಲಿ ಕೂಡಿ ಹಾಕಿದ್ದರು ಎಂದರು.ಕಳೆದ ಅನೇಕ ಸಭೆಗಳಲ್ಲಿ ಈ ಬಗ್ಗೆ ಅಧಿಕಾರಿಗೆ ಸೂಚನೆ ನೀಡುತ್ತಾ ಬಂದಿದ್ದರೂ ನಿರ್ಲಕ್ಷ್ಯ ಮನೋಭಾವ ಮುಂದುವರಿದಿದ್ದು, ಸಭೆಗೆ ತಾವು ಸಂಬಂಧಪಟ್ಟ ಅಧಿಕಾರಿಗಳು ಬಾರದೇ ಬೇರೆಯವರನ್ನು ಕಳಿಸಿದ್ದಾರೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ಪತ್ರ ಬರೆಯುವುದು ಅನಿವಾರ್ಯವಾಗಿದೆ ಎಂದರು.ಸಭೆಯ ಅಧ್ಯಕ್ಷತೆ ವಹಿಸಿದ್ದ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ ಹೊಸಮನಿ ಪ್ರಗತಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಅಧಿಕಾರಿ ಮಾಹಿತಿ ನೀಡಿ ತಾಲೂಕಿನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರಿಗೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿ ಸೌಲಭ್ಯ, ಬಿತ್ತನೆ ಬೀಜ ವಿತರಣೆ ಯೋಜನೆ ಅಡಿ ಸಹಾಯಧನ ನೀಡಲಾಗುವುದು ಎಂದರು.
ತೋಟಗಾರಿಕೆ ಇಲಾಖೆ ಅಧಿಕಾರಿ ಮಾತನಾಡಿ, ಕೀಟ ಮತ್ತು ರೋಗಗಳ ಸಮಗ್ರ ನಿಯಂತ್ರಣ ಯೋಜನೆ ಅಡಿ 50000 ಬಿಡುಗಡೆಯಾಗಿದ್ದು, ಅನುದಾನವನ್ನು ಇನ್ನೂ ಖರ್ಚು ಭರಿಸಿಲ್ಲ. ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ₹42.47 ಲಕ್ಷ ನಿಗದಿಯಾಗಿದ್ದು, ಅದರಲ್ಲಿ ₹12.11 ಲಕ್ಷ ಬಿಡುಗಡೆ ಆಗಿದೆ ಎಂದು ತಿಳಿಸಿದಾಗ, ಅನುದಾನ ಬಿಡುಗಡೆಯಾಗಿದ್ದರೂ ಇನ್ನು ಖರ್ಚು ಭರಿಸಿಲ್ಲ ಎನ್ನುವುದರ ಕುರಿತು ವಿವರಣೆ ಕೇಳಿದರು.ಲೋಕೋಪಯೋಗಿ ಇಲಾಖೆ ಅಧಿಕಾರಿ ಮಾಹಿತಿ ನೀಡಿ, ಡಂಬಳದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಕಾಮಗಾರಿ ಮುಕ್ತಾಯಗೊಂಡಿದ್ದು, ಕಟ್ಟಡವನ್ನು ಇಲಾಖೆಗೆ ಹಸ್ತಾಂತರ ಮಾಡಲಾಗಿದೆ. ಸರ್ಕಾರಿ ಮೆಟ್ರಿಕ್‌ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯ ಮುಂಡರಗಿ ಕಟ್ಟಡ ಕಾಮಗಾರಿ ಪೇಂಟಿಂಗ್ ಹಂತದಲ್ಲಿದೆ ಎಂದರು. ಅದಕ್ಕೆ ತಾಪಂ ಇಒ ಅಗ್ರಿಮೆಂಟ್ ಪ್ರಕಾರ ಕೇವಲ 11 ತಿಂಗಳು ಅವಧಿಯಲ್ಲಿ ಮುಗಿಸಬೇಕು. ಆದರೆ ಇನ್ನು ಮುಗಿದಿಲ್ಲ. 1 ತಿಂಗಳೊಳಗೆ ಮುಕ್ತಾಯಗೊಳಿಸುವಂತೆ ತಿಳಿಸಿದರು.
ಸಭೆಯಲ್ಲಿ ಹೆಸ್ಕಾಂ, ಸಿಡಿಪಿಒ, ಬಿಸಿಎಂ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ವಲಯ ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.