ಕೃಷಿ ಪಂಪ್‌ಸೆಟ್ಟುಗಳಿಗೆ ಸ್ಮಾರ್ಟ್ ಕಾರ್ಡ್ ಅಳವಡಿಕೆಗೆ ಆಕ್ರೋಶ

KannadaprabhaNewsNetwork | Published : May 16, 2025 1:59 AM

ಕೃಷಿ ಪಂಪ್‌ಸೆಟ್ಟುಗಳಿಗೆ ಸ್ಮಾರ್ಟ್ ಕಾರ್ಡ್ ಅಳವಡಿಕೆ ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಗುರುವಾರ ಚಿತ್ರದುರ್ಗ ಬೆಸ್ಕಾಂ ಕಚೇರಿಗೆ ಮುತ್ತಿಗೆಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಚಿತ್ರದುರ್ಗರದಲ್ಲಿ ರೈತ ಸಂಘದಿಂದ ಬೆಸ್ಕಾಂ ಕಚೇರಿಗೆ ಮುತ್ತಿಗೆ ನಿರ್ಧಾರದಿಂದ ಹಿಂದೆ ಸರಿಯಲು ಆಗ್ರಹಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಸರ್ಕಾರ ಕೃಷಿ ಪಂಪ್‍ಸೆಟ್‍ಗಳಿಗೆ ಸ್ಮಾರ್ಟ್‍ಕಾರ್ಡ್, ಡಿಜಿಟಲ್ ಮೀಟರ್ ಅಳವಡಿಸಲು ಹತ್ತು ಸಾವಿರ ರು. ಶುಲ್ಕ ನಿಗಧಿಪಡಿಸಿರುವುದನ್ನು ವಿರೋಧಿಸಿ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಗುರುವಾರ ಚಿತ್ರದುರ್ಗ ಬೆಸ್ಕಾ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯ ವಿವಿದ ತಾಲೂಕುಗಳಿಂದ ಆಗಮಿಸಿದ್ದ ರೈತರು ಪ್ರವಾಸಿ ಮಂದಿರದಿಂದ ಇಂಧನ ಸಚಿವರ ಅಣಕು ಶವಯಾತ್ರೆ ಮೂಲಕ ಮೊದಲು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗಿದರು. ತರುವಾಯ ತಿಪ್ಪಜ್ಜಿ ಸರ್ಕಲ್ ಸಮೀಪವಿರುವ ಬೆಸ್ಕಾಂ ಎದುರು ಇರುವ ಬೆಸ್ಕಾಂ ಕಚೇರಿಗೆ ತೆರಳಿ ಮುತ್ತಿಗೆ ಹಾಕಿದರು. ರಾಜ್ಯ ಸರ್ಕಾರ ರೈತ ವಿರೋಧಿ ನೀತಿಗೆ ದಿಕ್ಕಾರ ಕೂಗಿದರು.ಪ್ರತಿಭಟನಾ ಸಭೆ ನಡೆಸಿ ಕಾರ್ಯಪಾಲಕ ಇಂಜಿನಿಯರ್‍ಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಈ.ಎನ್.ಲಕ್ಷ್ಮಿಕಾಂತ್ ಲಿಂಗಾವರಹಟ್ಟಿ, ವಿದ್ಯುತ್ ಕ್ಷೇತ್ರವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಖಾಸಗಿಕರಣಗೊಳಿಸಲು ನಡೆಸುತ್ತಿರುವ ಹುನ್ನಾರ ನಿಲ್ಲಬೇಕು. ಅಕ್ರಮ-ಸಕ್ರಮ ಅಡಿಯಲ್ಲಿ ರೈತರಿಗೆ ಈ ಹಿಂದೆ ವಿದ್ಯುತ್ ಪರಿಕರಗಳನ್ನು ನೀಡಿದಂತೆ ಉಚಿತ ವಿದ್ಯುತ್ ಕಲ್ಪಿಸಬೇಕು. ವಿದ್ಯುತ್ ಸಂಪರ್ಕಕ್ಕೆ ರೈತರ ಆಧಾರ್ ಜೋಡಣೆ ಮಾಡುವುದನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

ಸರ್ಕಾರ ಟಿಸಿಗಳನ್ನು ಮಾತ್ರ ನೀಡುತ್ತಿದ್ದು, ಕಂಬ ಮತ್ತು ವೈರ್ ಗಳನ್ನು ರೈತರೇ ಸ್ವಂತ ಖರ್ಚಿನಿಂದ ಜೋಡಿಸಿಕೊಳ್ಳಲು ಸಾಧ್ಯವಿಲ್ಲ. ಅದಕ್ಕಾಗಿ ಸರ್ಕಾರವೇ ವಿತರಿಸಬೇಕು. ಜಮೀನಿನಲ್ಲಿ ವಾಸವಾಗಿರುವ ರೈತರಿಗೆ, ವಿದ್ಯಾರ್ಥಿಗಳಿಗೆ, ಹೈನುಗಾರಿಕೆ ನಡೆಸುವವರಿಗೆ ಸಂಜೆ ಆರು ಗಂಟೆಯಿಂದ ಬೆಳಿಗ್ಗೆ 6 ಗಂಟೆತನಕ ಸಮರ್ಪಕ ವಿದ್ಯುತ್ ನೀಡಬೇಕು. 11 ಕೆವಿ ಮತ್ತು ಎಲ್ ಟಿ ಲೈನ್‍ಗಳಲ್ಲಿ ಹದಿನೈದು ವರ್ಷಗಳಿಂದ ಬೆಳೆದಿರುವ ಗಿಡ ಮರಗಳಿಂದಾಗಿ ಕರೆಂಟ್ ತಾಗಿ ಲೈನ್ ವೈರ್‍ಗಳು ಸುಟ್ಟು ಹೋಗುತ್ತಿವೆ. ಕೃಷಿ ಪಂಪ್‍ಸೆಟ್, ಟಿ.ಸಿ.ಮೋಟಾರ್, ಕೇಬಲ್‍ಗಳು ಸುಟ್ಟು ರೈತರು ನಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ಗಿಡ-ಮರಗಳನ್ನು ಕೂಡಲೆ ತೆರವುಗೊಳಿಸುವಂತೆ ಪ್ರತಿಭಟನಾನಿರತ ರೈತರು ಒತ್ತಾಯಿಸಿದರು.

ಅಸಮರ್ಪಕ ವಿದ್ಯುತ್ ಪೂರೈಕೆಯಿಂದಾಗಿ ಪದೇ ಪದೆ ವಿದ್ಯುತ್ ಪರಿವರ್ತಕಗಳು ಸುಟ್ಟು ಹೋಗುತ್ತಿದ್ದು ಪಂಪ್‌ಸೆಟ್‌ಗಳ ಸಂಖ್ಯೆಗೆ ಅನುಸಾರ ವಿದ್ಯುತ್ ಪರಿವರ್ತಕಗಳ ಅಳವಡಿಸಿ ರೈತರಿಗೆ ವಿದ್ಯುತ್ ಪೂರೈಕೆ ಮಾಡಬೇಕು. ಪರಿವರ್ತಕ ಸುಟ್ಟಲ್ಲಿ 12 ಗಂಟೆ ಒಳಗೆ ಬದಲಾಯಿಸಿಕೊಡಬೇಕೆಂದು ಆಗ್ರಹಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ತಾಲೂಕು ಅಧ್ಯಕ್ಷ ಶಿವಮೂರ್ತಿ, ಮಹಿಳಾಧ್ಯಕ್ಷೆ ಲೋಲಾಕ್ಷಮ್ಮ, ಜಿಲ್ಲಾ ಕಾರ್ಯಾಧ್ಯಕ್ಷ ಓಂಕಾರಪ್ಪ, ಸಿ.ಡಿ.ನಿಲಿಂಗಪ್ಪ, ತಿಪ್ಪೇಸ್ವಾಮಿ, ನಾಗರಾಜ್, ಶ್ರೀನಿವಾಸ್, ರಂಗಸ್ವಾಮಿ, ಜಯಲಕ್ಷ್ಮಿ, ಮಂಜುಳ, ನಾಗರಾಜ್, ರುದ್ರಮುನಿ, ತಿಪ್ಪೇಸ್ವಾಮಿ ಶಶಿಕಲ, ಸೈಯದ್ ಮಮ್ತಾಜ್, ಬಸವರಾಜರೆಡ್ಡಿ, ಮಹೇಶ್ವರಿ, ಮಂಜುನಾಥ ಪ್ರತಿಭಟನೆ ನೇತೃತ್ವ ವಹಿಸಿದ್ದರು.