ಭದ್ರಾ ಮೇಲ್ದಂಡೆಗೆ ಸರ್ಕಾರಗಳ ದ್ರೋಹಕ್ಕೆ ಆಕ್ರೋಶ

KannadaprabhaNewsNetwork | Published : Aug 24, 2024 1:18 AM

ಸಾರಾಂಶ

ಆಳುವ ಸರ್ಕಾರಗಳು ಮಧ್ಯ ಕರ್ನಾಟಕದ ಅಭಿವೃದ್ಧಿ ಬಗ್ಗೆ ಇಷ್ಟೊಂದು ಉದಾಸೀನ ತೋರಬಾರದು. ಪ್ರತಿಯೊಂದಕ್ಕೂ ಹೋರಾಟ ಮಾಡಬೇಕೆಂದರೆ ಸರ್ಕಾರಗಳ ಜವಾಬ್ದಾರಿಯಾದರೂ ಏನು

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪೂರ್ಣಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಮ್ಮ ದ್ರೋಹವನ್ನು ಮುಂದುವರಿಸಿದ್ದು ಮತ್ತೊಂದು ಸುತ್ತಿನ ಹೋರಾಟಕ್ಕೆ ಜಿಲ್ಲೆ ಅಣಿಯಾಗಬೇಕಿದೆ ಎಂದು ರೈತ ಸಂಘದ ಮುಖಂಡ ಬೇಡರೆಡ್ಡಿ ಹಳ್ಳಿ ಬಸವರೆಡ್ಡಿ ಹೇಳಿದರು.

ಇಲ್ಲಿನ ಎಪಿಎಂಸಿ ರೈತ ಭವನದಲ್ಲಿ ಶುಕ್ರವಾರ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ಆಳುವ ಸರ್ಕಾರಗಳು ಮಧ್ಯ ಕರ್ನಾಟಕದ ಅಭಿವೃದ್ಧಿ ಬಗ್ಗೆ ಇಷ್ಟೊಂದು ಉದಾಸೀನ ತೋರಬಾರದು. ಪ್ರತಿಯೊಂದಕ್ಕೂ ಹೋರಾಟ ಮಾಡಬೇಕೆಂದರೆ ಸರ್ಕಾರಗಳ ಜವಾಬ್ದಾರಿಯಾದರೂ ಏನು ಎಂದು ಪ್ರಶ್ನಿಸಿದರು. ಭದ್ರಾ ಮೇಲ್ದಂಡೆ ಕಾಮಗಾರಿ ನೆನೆಗುದಿಗೆ ಬಿದ್ದಿದ್ದು ಮುಂದಿನ ಹೋರಾಟ ಕೈಗೊಳ್ಳುವ ಸಂಬಂಧ ಆ.26 ರಂದು ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಸಭೆ ಕರೆಯಲಾಗಿದೆ ಎಂದರು.

ರೈತರ ಪರವಾಗಿ ಇಂದಿಗೂ ನಡೆಸುತ್ತಿರುವ ಹೋರಾಟದಲ್ಲಿ ಅನೇಕ ಸಮಸ್ಯೆ, ಸವಾಲು, ಸನ್ನಿವೇಶ ಎದುರಿಸಿದ್ದೇನೆ. ಈ ಸಂಬಂಧ ಜೈಲಿಗೂ ಸಹ ಹೋಗಿ ಬಂದಿದ್ದೇವೆ. ಹಿರಿಯರ ಮಾರ್ಗದರ್ಶನದಲ್ಲಿ ರೈತರ ಹಿತಕ್ಕಾಗಿ ಅನೇಕ ಹೋರಾಟಗಳನ್ನು ಮಾಡಿದ್ದೇನೆ. ಸಂಘಟನೆಯಲ್ಲಿ ಬೆಳೆಯಲು ಸಾಕಷ್ಟು ಅವಕಾಶಗಳಿವೆ. ಹಾಗಾಗಿ ರೈತರು ಬೇಜವಾಬ್ದಾರಿ ತೋರದೆ ಒಬ್ಬರಿಗೊಬ್ಬರು ಸಹಕಾರ ನೀಡಿದಾಗ ಮಾತ್ರ ಸರ್ಕಾರದಿಂದ ಕೃಷಿಗೆ ಸಿಗುವ ಸೌಲತ್ತುಗಳನ್ನು ಪಡೆದುಕೊಳ್ಳಬಹುದು. ಸಂಘಟನೆಯಲ್ಲಿ ಒಡಕು ಮೂಡಿದರೆ ಸರ್ಕಾರ, ಅಧಿಕಾರಿಗಳು ಹೆದರುವುದಿಲ್ಲ.ಹಾಗಾಗಿ ಒಗ್ಗಟ್ಟಿನಿಂದ ಇರಬೇಕು ಎಂದು ಹೇಳಿದರು.

ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಹೊರಕೇರಪ್ಪ ಮಾತನಾಡಿ, ಭದ್ರಾ ಮೇಲ್ದಂಡೆ ಕಾಮಗಾರಿ ಚುರುಕುಗೊಳಿಸಲು ನಿರ್ಣಾಯಕ ಹೋರಾಟಕ್ಕೆ ಅಣಿಯಾಗಬೇಕಿದೆ. 26ರಂದು ನಡೆಯುವ ನೀರಾವರಿ ಅನುಷ್ಠಾನ ಸಮಿತಿ ಸಭೆಯಲ್ಲಿ ಪ್ರಮುಖ ನಿರ್ಣಯ ಕೈಗೊಳ್ಳಲಾಗುವುದೆಂದರು.

ಯಾವ ಸರ್ಕಾರವಾಗಲಿ, ರಾಜಕಾರಣಿಗಳಾಗಲಿ ರೈತರ ಪರ ಧ್ವನಿ ಎತ್ತುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ಮಾತ್ರ ರೈತರ ನೆನಪಾಗುತ್ತದೆ. ಮೂರು ರೈತ ವಿರೋಧಿ ಕಾಯಿದೆ ಹಿಂದಕ್ಕೆ ಪಡೆಯುವಂತೆ ದೆಹಲಿಯಲ್ಲಿ ಹದಿನೈದು ತಿಂಗಳ ಕಾಲ ಮಳೆ ಚಳಿಯನ್ನು ಲೆಕ್ಕಿಸದೆ ರೈತರು ಚಳುವಳಿ ನಡೆಸಿದರು. ಹೋರಾಟದಿಂದ ಮಾತ್ರ ಸರ್ಕಾರವನ್ನು ಮಣಿಸಲು ಸಾಧ್ಯ. ಇಲ್ಲದಿದ್ದರೆ ಸರ್ಕಾರದ ಯೋಜನೆಗಳು ಸಿಗುವುದಿಲ್ಲ ಎಂದರು.

ರೈತ ಸಂಘದ ಜಿಲ್ಲಾಧ್ಯಕ್ಷ ಧನಂಜಯ ಹಂಪಯ್ಯನಮಾಳಿಗೆ, ಮಾಜಿ ಅಧ್ಯಕ್ಷ ಬಸ್ತಿಹಳ್ಳಿ ಜಿ.ಸುರೇಶ್‍ಬಾಬು ಸೇರಿದಂತೆ ಅನೇಕ ರೈತ ಮುಖಂಡರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ತಾಲೂಕು ಪದಾಧಿಕಾರಿಗಳ ಆಯ್ಕೆ

ಕರ್ನಾಟಕ ರಾಜ್ಯ ರೈತ ಸಂಘ ಪುಟ್ಟಣ್ಣಯ್ಯ ಬಣದ ತಾಲೂಕು ನೂತನ ಸಮಿತಿಯನ್ನು ಎಪಿಎಂಸಿ ರೈತ ಭವನದಲ್ಲಿ ಶುಕ್ರವಾರ ರಚಿಸಲಾಯಿತು. ತಾಲೂಕು ಅಧ್ಯಕ್ಷರಾಗಿ ಪ್ರಭು ಇಸಾಮುದ್ರ, ಗೌರವಾಧ್ಯಕ್ಷರಾಗಿ ತಿಪ್ಪೇಸ್ವಾಮಿ ಜಾನುಕೊಂಡ, ಕಾರ್ಯಾಧ್ಯಕ್ಷರಾಗಿ ಚಂದ್ರಣ್ಣ ಶಿವನಕೆರೆ, ಕೆಂಚಪ್ಪ ಕಳ್ಳಿರೊಪ್ಪ, ಪ್ರಧಾನ ಕಾರ್ಯದರ್ಶಿಗಳಾಗಿ ಕಾಂತರಾಜ ಹುಣಸೆಕಟ್ಟೆ, ಸಿದ್ದೇಶ ಜಾನುಕೊಂಡ, ಉಪಾಧ್ಯಕ್ಷರುಗಳಾಗಿ ಕರಿಯಪ್ಪ ವಡ್ಡರಸಿದ್ದವ್ವನಹಳ್ಳಿ, ಜೆ.ಎನ್.ಕೋಟೆ ಓಂಕಾರಪ್ಪ, ರಂಗೇಗೌಡ ಹುಣಸೆಕಟ್ಟೆ, ರವಿ ಕೋಗುಂಡೆ, ಕಾರ್ಯದರ್ಶಿಗಳಾಗಿ ಶಂಭುಲಿಂಗಪ್ಪ, ತಿಪ್ಪೇಸ್ವಾಮಿ, ಕರಿಬಸಪ್ಪ, ಹನುಮಂತರೆಡ್ಡಿ, ಸಂಘಟನಾ ಕಾರ್ಯದರ್ಶಿಯಾಗಿ ನಾಗರಾಜ್‍ನಾಯ್ಕ ಅವರನ್ನು ನೇಮಕ ಮಾಡಲಾಯಿತು.

ಖಜಾಂಚಿಯಾಗಿ ಮಂಜಣ್ಣ ಶಿವನಕೆರೆ, ಜಿಲ್ಲಾ ಸಮಿತಿಗೆ ನೂತನ ಪ್ರಧಾನ ಕಾರ್ಯದರ್ಶಿಯಾಗಿ ಕುಮಾರ ಕಲ್ಲೇನಹಳ್ಳಿ, ಉಪಾಧ್ಯಕ್ಷರಾಗಿ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ ಇವರುಗಳನ್ನು ನೇಮಕ ಮಾಡಲಾಯಿತು.

ಯುವ ರೈತ ಸಂಘದ ತಾಲೂಕು ಅಧ್ಯಕ್ಷರಾಗಿ ತಿಪ್ಪೇಸ್ವಾಮಿ, ಕಾರ್ಯಾಧ್ಯಕ್ಷರಾಗಿ ಮೋಹನ, ಪ್ರಧಾನ ಕಾರ್ಯದರ್ಶಿಯಾಗಿ ಮಾರುತಿ ಇವರುಗಳನ್ನು ನೇಮಕ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಧನಂಜಯ ಹಂಪಯ್ಯನ ಮಾಳಿಗೆ ತಿಳಿಸಿದ್ದಾರೆ.

Share this article