ಕನ್ನಡಪ್ರಭವಾರ್ತೆ ಚಿತ್ರದುರ್ಗಬಾಂಗ್ಲಾದೇಶದಲ್ಲಿ ಇಸ್ಲಾಮಿಕ್ ಮೂಲಭೂತವಾದಿಗಳು ಹಿಂದೂಗಳ ಮೇಲೆ ನಡೆಸುತ್ತಿರುವ ದೌರ್ಜನ್ಯ ಖಂಡಿಸಿ ಹಿಂದೂ ಹಿತರಕ್ಷಣಾ ಸಮಿತಿ ವತಿಯಿಂದ ಬುಧವಾರ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ನಗರದ ಆನೆಬಾಗಿಲ ಬಳಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ವೃತ್ತದವರೆಗೆ ಮೆರವಣಿಗೆಯಲ್ಲಿ ಬಂದ ಪ್ರತಿಭಟನಾಕಾರರು, ಇಸ್ಲಾಮಿಕ್ ಮೂಲಭೂತವಾದಿಗಳು ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ಮೇಲೆ ದಾಳಿ, ಹತ್ಯೆ, ಲೂಟಿ, ಆಸ್ತಿ ಹಾನಿ ಹಾಗೂ ಮಹಿಳೆಯರ ಮೇಲಿನ ಅಮಾನವೀಯ ದೌರ್ಜನ್ಯಗಳನ್ನು ನಡೆಸುತ್ತಿರುವುದು ಹೇಯ ಕೃತ್ಯವೆಂದು ಆಕ್ರೋಶ ಹೊರ ಹಾಕಿದರು.ಒನಕೆ ಓಬವ್ವ ವೃತ್ತದ ಬಳಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಸಂಘ ಪರಿವಾರದ ಶಿವಮೊಗ್ಗದ ಪ್ರಮುಖ ಪಟ್ಟಾಭಿಜೀ, ಬಾಂಗ್ಲಾದೇಶದಲ್ಲಿ ಇಸ್ಲಾಮಿಕ್ ಮೂಲಭೂತವಾದಿಗಳು ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಸುತ್ತಿದ್ದು, ಸ್ಪಷ್ಟ ಎಚ್ಚರಿಕೆ ಸಂದೇಶವನ್ನು ಆ ರಾಷ್ಟ್ರಕ್ಕೆ ರವಾನಿಸಬೇಕಿದೆ. ಇಂದಿನ ದಿನಮಾನದಲ್ಲಿ ಪ್ರಪಂಚವೇ ಸಣ್ಣ ಕುಟುಂಬವಾಗಿದೆ. ಇಲ್ಲಿ ನಡೆಯುತ್ತಿರುವ ಪ್ರತಿಭಟನಾ ಸಭೆ ಅಲ್ಲಿನ ಹಿಂದುಗಳಿಗೆ ಧೈರ್ಯ ತುಂಬುವುದಾಗಿದೆ ಎಂದರು.ಹಿಂದೂಗಳ ಮೇಲಿನ ದೌರ್ಜನ್ಯವನ್ನು ಬಾಂಗ್ಲಾದೇಶದ ಸರ್ಕಾರ ಮತ್ತು ಅನ್ಯ ಸರ್ಕಾರಿ ಸುರಕ್ಷಾ ಸಂಸ್ಥೆಗಳು ತಡೆಯುವ ಬದಲು ಕೇವಲ ಮೂಕಪ್ರೇಕ್ಷಕರಾಗಿದ್ದಾರೆ. ಬಾಂಗ್ಲಾದೇಶದ ಅಲ್ಪಸಂಖ್ಯಾತ ಹಿಂದೂಗಳು ತಮ್ಮ ಸ್ವರಕ್ಷಣೆಗಾಗಿ ಪ್ರಜಾಸತ್ತಾತ್ಮಕ ವಿಧಾನಗಳ ಮೂಲಕ ಎತ್ತಿದ್ದ ಧ್ವನಿಯನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ. ಅವರ ಮೇಲೆ ಅನ್ಯಾಯ ಹಾಗೂ ಅತ್ಯಾಚಾರದಂತಹ ದುಷ್ಕೃತ್ಯಗಳನ್ನು ಎಸಗುವ ಹೊಸ ಯುಗ ಅಲ್ಲಿ ಹೊರಹೊಮ್ಮುತ್ತಿರುವಂತೆ ತೋರುತ್ತಿದೆ. ಇಂತಹ ಘಟನೆಗಳ ವಿರುದ್ಧ ಹಾಗೂ ಹಿಂದುಗಳ ಪರ ಶಾಂತಿಯುತ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಇಸ್ಕಾನ್‍ನ ಸನ್ಯಾಸಿ ಚಿನ್ಮಯ್ ಕೃಷ್ಣದಾಸರನ್ನು ಬಾಂಗ್ಲಾದೇಶದ ಸರ್ಕಾರ ಬಂಧಿಸಿ ಸೆರೆಮನೆಗೆ ಕಳುಹಿಸಿರುವುದು ಅನ್ಯಾಯವೆಂದರು.
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯಗಳು ತಕ್ಷಣವೇ ನಿಲ್ಲಬೇಕು. ಇಸ್ಕಾನ್‍ನ ಚಿನ್ಮಯ್ ಕೃಷ್ಣದಾಸ್ ಅವರನ್ನು ಸೆರೆವಾಸದಿಂದ ಮುಕ್ತಗೊಳಿಸಬೇಕು. ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಇತರೆ ಎಲ್ಲಾ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯವನ್ನು ತಡೆಯುವ ತನ್ನ ಪ್ರಯತ್ನವನ್ನು ಸರ್ಕಾರ ಸಾಧ್ಯವಾದಷ್ಟು ಮುಂದುವರಿಸಬೇಕು. ಹಾಗೂ ಅದಕ್ಕೆ ಪೂರಕವಾಗಿ ಅವಶ್ಯಕ ಹೆಜ್ಜೆಯನ್ನು ಕೇಂದ್ರ ಸರ್ಕಾರ ಇಡಬೇಕೆಂದು ಆಗ್ರಹಿಸಿದರು.ಮಾದಾರ ಗುರುಪೀಠದ ಬಸವ ಮೂರ್ತಿ ಮಾದಾರ ಚನ್ನಯ್ಯ ಶ್ರೀ ಮಾತನಾಡಿ, ಭಾರತೀಯರಾದ ನಾವುಗಳು ನಮ್ಮಲ್ಲಿ ಎಲ್ಲರನ್ನು ಒಂದು ಗೂಡಿಸುತ್ತೇವೆ. ಆದರೆ ಬೇರೆ ರಾಷ್ಟ್ರಗಳು ನಮ್ಮ ಮೇಲೆ ಹಲ್ಲೆ ಮಾಡುವ ಕೆಲಸ ಮಾಡುತ್ತಿರುವುದು ಖಂಡನೀಯ ಎಂದರು.ಬೇರೆ ರಾಷ್ಟ್ರಗಳಿಂದ ಬಂದವರಿಗೆ ಭಾರತದಲ್ಲಿ ಅತ್ಯಂತ ಗೌರವದಿಂದ ಕಾಣುತ್ತೇವೆ. ಅವರ ಬದುಕಿಗೆ ಪೂರಕ ವಾತಾವರಣ ಕಲ್ಪಿಸುತ್ತೇವೆ. ಆದರೆ ಬೇರೆ ರಾಷ್ಟ್ರಗಳಲ್ಲಿ ಇರುವ ಹಿಂದೂಗಳ ಮೇಲೆ ಈ ರೀತಿಯಾದ ಕೃತ್ಯ ನಡೆಸುವುದು ಆಂತಕಕ್ಕೆ ಈಡು ಮಾಡಿದೆ. ಕೇಂದ್ರ ಸರ್ಕಾರ ತಕ್ಷಣವೇ ಮಧ್ಯಸ್ಥಿಕೆ ವಹಿಸುವುದರ ಮೂಲಕ ಬಾಂಗ್ಲಾ ದೇಶದಲ್ಲಿನ ಹಿಂದುಗಳನ್ನು ರಕ್ಷಿಸುವ ಕೆಲಸ ಮಾಡಬೇಕಿದೆ ಎಂದು ಆಗ್ರಹಿಸಿದರು.ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್, ಮಾಜಿ ಶಾಸಕರಾದ ಜಿ.ಎಚ್. ತಿಪ್ಪಾರೆಡ್ಡಿ, ತಿಪ್ಪೇಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಎ. ಮುರಳಿ, ಪ್ರಧಾನ ಕಾರ್ಯದರ್ಶಿಗಳಾದ ಸಂಪತ್‍ಕುಮಾರ್, ಸುರೇಶ್ ಸಿದ್ದಾಪುರ, ಜಿಪಂ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಬಸಮ್ಮ, ವಕ್ತಾರ ನಾಗರಾಜ್ ಬೇದ್ರೇ, ಛಲವಾದಿ ತಿಪ್ಪೇಸ್ವಾಮಿ, ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜನ್, ಚಂದ್ರಶೇಖರ್ ಪ್ರತಿಭಟನೆ ನೇತೃತ್ವ ವಹಿಸಿದ್ದರು.