ಕನ್ನಡಪ್ರಭ ವಾರ್ತೆ ಟಿ. ನರಸೀಪುರಮೂರು ವರ್ಷಗಳ ಹಿಂದೆ ಭತ್ತದ ದಲ್ಲಾಳಿಗಳಿಂದ ಕೋಟ್ಯಂತರ ರು. ಗಳ ಭತ್ತ ಪಡೆದು ಹಣ ನೀಡದೇ ರೈಸ್ ಮಿಲ್ ಮಾಲೀಕರೊಬ್ಬರು ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ರೈತರು, ರೈಸ್ ಮಿಲ್ ಮುಂದೆ ಪ್ರತಿಭಟನೆ ನಡೆಸಿದ ಘಟನೆ ತಾಲೂಕಿನ ಗರ್ಗೇಶ್ವರಿ ಗ್ರಾಮದಲ್ಲಿ ನಡೆದಿದೆ.ಗ್ರಾಮದಲ್ಲಿರುವ ಎಂ.ಎನ್. ಆಗ್ರೋ ಇಂಡಸ್ಟ್ರಿಸ್ ರೈಸ್ ಮಿಲ್ ಮಾಲೀಕರಾದ ನಯೀಮುಲ್ಲಾ ಎಂಬವರು ತಾಲೂಕಿನ ವಿವಿಧ ಗ್ರಾಮಗಳ ಭತ್ತದ ದಲ್ಲಾಳಿಗಳಿಂದ ಭತ್ತ ಪಡೆದು ಮೂರು ವರ್ಷ ಕಳೆದರೂ ಹಣ ನೀಡದೆ ವಂಚಿಸುತ್ತಿದ್ದಾರೆ ಎಂದು ಆರೋಪಿಸಿದ ರೈತರು, ಶುಕ್ರವಾರ ರೈಸ್ ಮಿಲ್ ಮುಂದೆ ದಲ್ಲಾಳಿಗಳೊಂದಿಗೆ ಮಿಲ್ ಮಾಲೀಕನ ಕಾರು ತಡೆದು ಆಕ್ರೋಶ ವ್ಯಕ್ತಪಡಿಸಿದರು.ಕಾರು ಹತ್ತಿಸುವ ಪ್ರಯತ್ನಮಾಡಿದ್ದಲ್ಲದೇ ಮಿಲ್ ಮಾಲೀಕರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಹರೀಶ್ ನ ಮೇಲೆ ದೂರು ದಾಖಲು ಮಾಡುವ ಮೂಲಕ ಬೆದರಿಕೆ ಒಡ್ಡುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.ಕಳೆದ ವಾರ ಸಹ ಪ್ರತಿಭಟನೆ ಮಾಡಿ ಪೋಲೀಸರಿಗೆ ದೂರು ನೀಡಿದ್ದೇವೆಯಾದರೂ ಯಾವುದೇ ಕ್ರಮವಾಗಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು. ಕಾರು ಅಡ್ಡಗಟ್ಟಿ ಪ್ರತಿಭಟನೆ...!ಎಂ.ಎನ್. ಆಗ್ರೋ ಇಂಡಸ್ಟ್ರೀಸ್ ಮುಖ್ಯದ್ವಾರದ ಬಳಿ ಜಮಾಯಿಸಿದ್ದ ಪ್ರತಿಭಟನಾ ನಿರತರು ಕಾರಿನಲ್ಲಿ ಮಿಲ್ ಗೆ ಬಂದ ನಯೀಮುಲ್ಲಾ ಅವರನ್ನು ಕಂಡು ಕೋಪೋದ್ರಿತರಾಗಿ ಕಾರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಕೂಡಲೇ ರೈತರ ಹಣ ಕೊಡಿಸುವಂತೆ ಒತ್ತಾಯಿಸಿದರು. ಸಮಸ್ಯೆ ಬಗೆಹರಿಯದ ಹೊರತಾಗಿ ಕಾರು ಮಿಲ್ ಒಳಗೆ ಹೋಗಲು ಬಿಡುವುದಿಲ್ಲ ಎಂದು ಪಟ್ಟುಹಿಡಿದರು ಈ ವೇಳೆ ಕೂಗಾಟ, ತಳ್ಳಾಟ ಉಂಟಾಯಿತು. ಎರಡೂ ಕೋಮಿನವರ ನಡುವೆ ಪರಸ್ಪರ ಮಾತಿನ ಚಕಮಕಿ ನಡೆಯಿತು. ಇನ್ನೇನೋ ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಲಕ್ಷಣ ಕಾಣಿಸಿಕೊಂಡ ಸಮಯಕ್ಕೆ ನಯೀಮುಲ್ಲಾ ಕಾರು ಸ್ಟಾರ್ಟ್ ಮಾಡಿಕೊಂಡು ಮಿಲ್ ನೊಳಗೆ ಹೋದರು. ನಂತರ ಮಿಲ್ನ ಗೇಟ್ ಬಂದ್ ಮಾಡಲಾಯಿತು.ಕೆಲ ಸಮಯ ಪ್ರತಿಭಟನಾ ನಿರತರು ಮಿಲ್ಮುಂಭಾಗ ಪ್ರತಿಭಟನೆ ನಡೆಸಿ ನಂತರ ಟಿ. ನರಸೀಪುರ ಪಟ್ಟಣದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಂಎಲ್.ಸಿ ಯತೀಂದ್ರ ಸಿದ್ದರಾಮಯ್ಯ ಅವರಿಗೆ ರೈತರಿಗೆ ಆಗಿರುವ ಅನ್ಯಾಯದ ಬಗ್ಗೆ ದೂರು ನೀಡಲು ತೆರಳಿದರು. ದಲ್ಲಾಳಿಗಳಿಗೆ ಯಾವುದೇ ಹಣ ಕೊಡಬೇಕಿಲ್ಲದಲ್ಲಾಳಿಗಳಿಂದ ಭತ್ತ ಖರೀದಿ ಮಾಡಿದ್ದು ನಿಜ, ಖರೀದಿ ಮಾಡಿದ ಭತ್ತಕ್ಕೆ ಹಣ ನೀಡಿದ್ದೇನೆ. ರೈತರಿಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಎಂಎನ್ ಆಗ್ರೋ ಇಂಡಸ್ಟ್ರೀಸ್ ಮಾಲೀಕ ನಯೀಮುಲ್ಲಾ ಹೇಳಿದರು. ಭತ್ತದ ದಲ್ಲಾಳಿ ಟಿ.ಎಸ್. ಹರೀಶ್, ರಾಚೇಗೌಡ, ಮೋಳೇಹುಂಡಿ ಜವರಿ, ರೈತ ಮುಖಂಡರಾದ ಎಂ. ಸೀಹಳ್ಳಿ ಗುರುಮಲ್ಲಪ್ಪ, ನಗರ್ಲೆ ಕೂಸಪ್ಪ, ರವಿಕುಮಾರ್, ಅನಿಲ್ ಕುಮಾರ್, ಸುನೀಲ್ ಕುಮಾರ್, ಸತೀಶ್, ಮೋಹನ್ ಕುಮಾರ್, ಪ್ರತಾಪ್, ಶ್ರೀಧರ್, ಬಿ. ಕೃಷ್ಣಕುಮಾರ್, ರಾಮೇಗೌಡ, ರಾಮಣ್ಣ, ನಂದೀಶ್, ಸಹದೇವ ಭಾಗವಹಿಸಿದ್ದರು.