ಮೆರವಣಿಗೆ ಸಂದರ್ಭದಲ್ಲಿ ಅತಿರೇಕದ ವರ್ತನೆ ಸಹಿಸಲ್ಲ: ಎಸ್ಪಿ ಖಡಕ್‌ ಎಚ್ಚರಿಕೆ

KannadaprabhaNewsNetwork |  
Published : Aug 12, 2025, 12:30 AM IST
ಗೌರಿ ಗಣೇಶ ಹಾಗೂ ಈದ್‌ ಮಿಲಾದ್‌ ಆಚರಣೆಯ ಹಿನ್ನಲೆಯಲ್ಲಿ ಚಿಕ್ಕಮಗಳೂರು ಜಿಪಂ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಜಿಲ್ಲಾಧಿಕಾರಿ ಮೀನಾ ನಾಗರಾಜ್‌, ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್‌.ಎಸ್‌. ಕೀರ್ತನಾ ಇದ್ದರು. | Kannada Prabha

ಸಾರಾಂಶ

ಚಿಕ್ಕಮಗಳೂರುಧಾರ್ಮಿಕ ಕಾರ್ಯಕ್ರಮದ ಮೆರವಣಿಗೆ ಸಂದರ್ಭದಲ್ಲಿ ಸೂಕ್ಷ್ಮ ಸ್ಥಳಗಳಲ್ಲಿ ಅತಿರೇಕದ ವರ್ತನೆ ಇರಬಾರದು. ಸಂಘಟಕರು ಇದರ ಜವಾಬ್ದಾರಿ ತೆಗೆದುಕೊಳ್ಳಬೇಕೆಂದು ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ ಹೇಳಿದರು.

- ಸಂಘಟಕರು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು, ಸೂಕ್ಷ್ಮ ಸ್ಥಳಗಳಲ್ಲಿ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು । ಗಣೇಶ ಚತುರ್ಥಿ - ಈದ್‌ ಮಿಲಾದ್‌ ಹಿನ್ನಲೆಯಲ್ಲಿ ಶಾಂತಿ ಸಭೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಧಾರ್ಮಿಕ ಕಾರ್ಯಕ್ರಮದ ಮೆರವಣಿಗೆ ಸಂದರ್ಭದಲ್ಲಿ ಸೂಕ್ಷ್ಮ ಸ್ಥಳಗಳಲ್ಲಿ ಅತಿರೇಕದ ವರ್ತನೆ ಇರಬಾರದು. ಸಂಘಟಕರು ಇದರ ಜವಾಬ್ದಾರಿ ತೆಗೆದುಕೊಳ್ಳಬೇಕೆಂದು ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ ಹೇಳಿದರು.

ಗೌರಿ ಗಣೇಶ ಹಾಗೂ ಈದ್‌ ಮಿಲಾದ್‌ ಹಬ್ಬಗಳ ಹಿನ್ನಲೆಯಲ್ಲಿ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿ, ಜಿಲ್ಲಾಡಳಿತ ಹೊರಡಿಸುವ ಆದೇಶ ಹಾಗೂ ಇತರೆ ಇಲಾಖೆಗಳಲ್ಲಿ ಜಾರಿಯಲ್ಲಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದರು.ಆಗಸ್ಟ್‌ 26 ಹಾಗೂ 27 ರಂದು ಗೌರಿ ಗಣೇಶ ಹಬ್ಬ ನಡೆಯಲಿದೆ. ಸೆ. 5 ರಿಂದ ಈದ್‌ ಮಿಲಾದ್‌ ನಡೆಯಲಿದೆ. ಈ ಎರಡು ಹಬ್ಬಗಳು ಈ ಬಾರಿಯೂ ಒಟ್ಟಿಗೆ ಬಂದಿವೆ. ಎಲ್ಲರೂ ಕೂಡ ಅವರವರ ಸಂಪ್ರದಾಯದಂತೆ ಅರ್ಥಪೂರ್ಣವಾಗಿ ಆಚರಿಸ ಬೇಕೆಂಬ ಅಪೇಕ್ಷೆಯಿರುತ್ತದೆ. ಈ ಬಾರಿ ಜಿಲ್ಲೆಯಲ್ಲಿ 1800 ಕಡೆಗಳಲ್ಲಿ ಸಾರ್ವಜನಿಕ ಗಣಪತಿಗಳನ್ನು ಪ್ರತಿಷ್ಠಾಪಿಸಲು ಉದ್ದೇಶಿ ಸಲಾಗಿದೆ. 27 ಕಡೆಗಳಲ್ಲಿ ಈದ್‌ ಮಿಲಾದ್‌ ಮೆರವಣಿಗೆ ನಡೆಯಲಿವೆ. ಈ ಸಂದರ್ಭಗಳಲ್ಲಿ ಬೇರೆ ಧರ್ಮಕ್ಕೆ ದಕ್ಕೆ, ಪರಿಸರಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಕಾನೂನು ಜಾರಿಗೆ ಬರುತ್ತವೆ ಎಂದು ಎಚ್ಚರಿಕೆ ನೀಡಿದರು.

ಮೆರವಣಿಗೆ ಸಂದರ್ಭದಲ್ಲಿ ಅತಿರೇಕದ ವರ್ತನೆ ಇರಬಾರದು. ಅಂತಹ ಸಂದರ್ಭದಲ್ಲಿ ಸಂಘಟಕರು ಜವಾಬ್ದಾರಿ ತೆಗೆದು ಕೊಳ್ಳಬೇಕು. ಸ್ವಯಂ ಸೇವಕರನ್ನು ನೇಮಿಸಿಕೊಳ್ಳಬೇಕು. ಪೆಂಡಾಲ್‌ಗಳಲ್ಲಿ ಕಡ್ಡಾಯವಾಗಿ ಸಿಸಿ ಟಿವಿ ಕ್ಯಾಮರಾ ಅಳವಡಿಸಬೇಕು. ರಾತ್ರಿ 10 ಗಂಟೆಯಿಂದ ಮರು ದಿನ ಬೆಳಿಗ್ಗೆ 6 ಗಂಟೆ ‍ಅವಧಿಯೊಳಗೆ ಕರ್ಕಶ ಶಬ್ಧ ಬರುವ ಸೌಂಡ್‌ ಸಿಸ್ಟಮ್‌ಗಳನ್ನು ಬಳಸಬಾರದು. ಈ ಸಂಬಂಧ ಸುಪ್ರಿಂ ಕೋರ್ಟ್‌ ಹೊರಡಿಸಿರುವ ಆದೇಶ ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದರು.ಹದ್ದಿನ ಕಣ್ಣು: ಸೋಶಿಯಲ್‌ ಮೀಡಿಯಾದಲ್ಲಿ ಹಬ್ಬಗಳಿಗೆ ಸಂಬಂಧಿಸಿದಂತೆ ಬರುವ ತಪ್ಪು ಮಾಹಿತಿಗಳ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳಬಾರದು. ಅಂತಹದೇನಾದರೂ ಕಂಡು ಬಂದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು. ಇಲಾಖೆಯೂ ಅವುಗಳ ಮೇಲೆ ಕಣ್ಣಿಟ್ಟಿದೆ ಎಂದು ಎಸ್ಪಿ ಡಾ. ವಿಕ್ರಂ ಅಮಟೆ ಹೇಳಿದರು.

ಬೈಕ್‌ ಓಡಿಸುವ ಸಂದರ್ಭದಲ್ಲಿ ಕರ್ಕಶ ಧ್ವನಿ ಬರುವ ರೀತಿ ಬೈಕಿನ ಸೈಲೆನ್ಸರ್‌ ಬದಲಾಯಿಸುತ್ತಾರೆ. ಅಂತಹ ಗ್ಯಾರೇಜ್‌ ಗಳನ್ನು ಗುರುತಿಸಿ ಈಗಾಗಲೇ ನೋಟೀಸ್‌ ಜಾರಿ ಮಾಡಲಾಗಿದೆ. ಸಂಘಟಕರು, ಅಂತಹ ಬೈಕ್‌ಗಳ ಮೇಲೆ ನಿಗಾ ಇಡಬೇಕು ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್‌, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್‌.ಎಸ್‌. ಕೀರ್ತನಾ ಹಾಗೂ ಜಿಲ್ಲೆಯ ಹಿರಿಯ ಪೊಲೀಸ್‌ ಅಧಿಕಾರಿಗಳು ಉಪಸ್ಥಿತರಿದ್ದರು.--- ಬಾಕ್ಸ್‌ -----ಸಿಂಗಲ್‌ ವಿಂಡೋ ಸಿಸ್ಟಮ್‌ಸಾರ್ವಜನಿಕ ಸ್ಥಳಗಳಲ್ಲಿ ಗೌರಿ ಗಣೇಶ ಪ್ರತಿಷ್ಠಾಪನೆ ಹಾಗೂ ಮೆರವಣಿಗೆ, ಈದ್‌ ಮಿಲಾದ್‌ ಹಿನ್ನಲೆಯಲ್ಲಿ ನಡೆಯಲಿರುವ ಮೆರವಣಿಗೆಗೆ ಸಂಘಟಕರು ಸ್ಥಳೀಯ ಸಂಸ್ಥೆಗಳು, ಪೊಲೀಸ್‌ ಇಲಾಖೆಯ ಅನುಮತಿ ಪಡೆಯಬೇಕು. ಹಾಗಾಗಿ ಸಿಂಗಲ್‌ ವಿಂಡೋ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಆ.16 ರಿಂದ 22 ರೊಳಗೆ ಗಣೇಶ ಹಬ್ಬದ ಆಚರಣೆಗೆ ಅನುಮತಿ ನೀಡಲಾಗುವುದು. ಆ.26 ರಿಂದ ಸೆ. 2 ರವರೆಗೆ ಈದ್‌ ಮಿಲಾದ್‌ ಮೆರವಣಿಗೆಗೆ ಸಂಬಂಧಿಸಿದಂತೆ ಸಿಂಗಲ್‌ ವಿಂಡ್‌ನಲ್ಲಿ ಅನುಮತಿ ನೀಡಲಾಗುವುದು ಎಂದು ಡಾ. ವಿಕ್ರಂ ಅಮಟೆ ಹೇಳಿದರು.

---ಮೆರವಣಿಗೆಯಲ್ಲಿ ಡೀಜೆ ಬಳಸದಿರಲು ತೀರ್ಮಾನ ?ಈದ್ ಮಿಲಾದ್‌ ಮೆರವಣಿಗೆ ಸಂದರ್ಭದಲ್ಲಿ ಡೀಜೆ ಬಳಸದಿರಲು ಉದ್ದೇಶಿಲಾಗಿದೆ. ಈ ಸಂಬಂಧ ಚಿಕ್ಕಮಗ‍ಳೂರಿನ ಅಂಜು ಮನ್‌ ಸಂಸ್ಥೆ ಸಭೆಯಲ್ಲಿ ಪ್ರಸ್ತಾಪ ಮಾಡಲಾಗಿದೆ ಎಂದು ಸಭೆಯಲ್ಲಿದ್ದ ಮುಸ್ಲಿಂ ಮುಖಂಡರು ಹೇಳಿದರು.

ಇದಕ್ಕೆ ಅಧಿಕಾರಿಗಳು ಹಾಗೂ ಸಭೆಯಲ್ಲಿದ್ದ ಕೆಲವು ಮಂದಿ ಉತ್ತಮ ಬೆಳವಣಿಗೆ ಎಂದು ಹೇಳುತ್ತಿದ್ದಂತೆ ಡೀಜೆಗೆ ಅನುಮತಿ ಕೊಡಬೇಡಿ ಎಂದು ಕೆಲವರು ಹೇಳುತ್ತಿದ್ದಂತೆ ಒತ್ತಾಯ ಪೂರ್ವಕವಾಗಿ ನಾವು ಹೇಳಲು ಬರುವುದಿಲ್ಲ. ಡೀಜೆ ಬಳಸುವುದಿಲ್ಲ ಎಂಬುದಾದರೆ ನಮ್ಮ ಜಿಲ್ಲೆ ಮಾದರಿಯಾಗಲಿ ಎಂದು ಜಿಲ್ಲಾ ರಕ್ಷಣಾಧಿಕಾರಿ ಹೇಳಿದರು.

---ಈದ್‌ ಮಿಲಾದ್‌ ಒಂದು ತಿಂಗಳು ಆಚರಣೆಪ್ರವಾದಿ ಮುಹಮ್ಮದ್‌ ಅವರ ಜನ್ಮ ದಿನವನ್ನು ಈದ್‌ ಮಿಲಾದ್‌ ಹಬ್ಬವನ್ನಾಗಿ ಮುಸ್ಲಿಂ ಸಮುದಾಯದವರು ಆಚರಿಸುತ್ತಾರೆ. ಈ ಬಾರಿ ಈ ಹಬ್ಬದ ಆಚರಣೆಗೆ 1500 ವರ್ಷದ ಹಿನ್ನಲೆ ಇರುವುದರಿಂದ ಚಿಕ್ಕಮಗಳೂರಿನ ಉಪ್ಪಳ್ಳಿಯಲ್ಲಿ ಒಂದು ತಿಂಗಳ ಕಾಲ ವಿವಿಧ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಇವುಗಳ ಬಗ್ಗೆ ಮಾಹಿತಿ ನೀಡಲಾಗುವುದು. ನಗರದಲ್ಲೆಡೆ ದೀಪಾಲಂಕಾರ ಮಾಡಲಾಗುವುದು ಎಂದು ಯೂಸೂಫ್‌ ಹಾಜಿ ಹೇಳಿದರು.

-----11 ಕೆಸಿಕೆಎಂ 1ಗೌರಿ ಗಣೇಶ ಹಾಗೂ ಈದ್‌ ಮಿಲಾದ್‌ ಆಚರಣೆ ಹಿನ್ನಲೆಯಲ್ಲಿ ಚಿಕ್ಕಮಗಳೂರು ಜಿಪಂ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಜಿಲ್ಲಾಧಿಕಾರಿ ಮೀನಾ ನಾಗರಾಜ್‌, ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್‌.ಎಸ್‌. ಕೀರ್ತನಾ ಇದ್ದರು.

PREV

Recommended Stories

ಸೆಂಚುರಿ ಕ್ಲಬ್‌ ಸೇರಿಯೇ ಬಿಟ್ಟಿತು ಸು ಫ್ರಂ ಸೋ
ಶ್ರೀಕೃಷ್ಣನೆಂಬ ನಿತ್ಯ ಸತ್ಯನಿಗೆ ಜನ್ಮಾಷ್ಟಮೀ