ಬಿಸಿ ನೀರು ಬಾವಿಗೆ ಬಿದ್ದು ಮೈಷುಗರ್‌ನಲ್ಲಿ ಹೊರಗುತ್ತಿಗೆ ನೌಕರ ಸಾವು

KannadaprabhaNewsNetwork |  
Published : Sep 10, 2026, 01:30 AM IST
೯ಕೆಎಂಎನ್‌ಡಿ-೧ಚರಣ್‌ಕುಮಾರ್, ಮೃತ ನೌಕರ | Kannada Prabha

ಸಾರಾಂಶ

ಭಾನುವಾರ ಕೆಲಸಕ್ಕೆ ಆಗಮಿಸಿದ ನೌಕರರ ಹಾಜರಾತಿಯನ್ನು ಖಚಿತಪಡಿಸಿಕೊಳ್ಳಲು ಕಾರ್ಖಾನೆಯೊಳಗೆ ತೆರಳಿ ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ಬಿಸಿನೀರು ಸಂಸ್ಕರಣಾ ಘಟಕದ ಮೇಲ್ಭಾಗದಲ್ಲಿ ಮರದ ಹಲಗೆ ಹಾಕಿದ್ದು ಅದರ ಕೆಳಭಾಗದ ಕಬ್ಬಿಣ ತುಕ್ಕು ಹಿಡಿದಿತ್ತು ಎನ್ನಲಾಗಿದೆ. ಚರಣ್‌ಕುಮಾರ್ ಪರಿಶೀಲನೆ ನಡೆಸುವ ವೇಳೆ ಹಲಗೆಯ ಮೇಲೆ ಕಾಲಿಟ್ಟಾಗ ಕೆಳಭಾಗದ ಕಬ್ಬಿಣ ತುಂಡಾದ ಪರಿಣಾಮ ಆಯತಪ್ಪಿ ಬಿಸಿನೀರು ಸಂಸ್ಕರಣಾ ಘಟಕದೊಳಗೆ ಬಿದ್ದಿದ್ದಾರೆ ಎನ್ನಲಾಗಿದೆ. ಬಿಸಿನೀರು ಸಂಸ್ಕರಣಾ ಘಟಕದ ಬಳಿ ಸೂಕ್ತ ರಕ್ಷಣಾ ವ್ಯವಸ್ಥೆ ಇಲ್ಲದಿರುವುದೇ ದುರಂತಕ್ಕೆ ಕಾರಣ ಎಂದು ಆರೋಪಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮೈಷುಗರ್ ಕಾರ್ಖಾನೆಯ ಬಿಸಿ ನೀರು ಸಂಸ್ಕರಣಾ ಘಟಕಕ್ಕೆ ಭಾನುವಾರ ಬೆಳಗ್ಗೆ ಆಯತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಹೊರಗುತ್ತಿಗೆ ನೌಕರನೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮದ್ದೂರು ತಾಲೂಕಿನ ಶೆಟ್ಟಹಳ್ಳಿ ಗ್ರಾಮದ ಎಸ್.ಬಿ. ಹನುಮಂತೇಗೌಡ ಮತ್ತು ಚಿಕ್ಕತಾಯಮ್ಮ ದಂಪತಿ ಪುತ್ರ ಚರಣ್‌ಕುಮಾರ್ (೩೫) ಮೃತ ವ್ಯಕ್ತಿ. ಶೇ.೭೫ರಷ್ಟು ಸುಟ್ಟಗಾಯಗಳಾಗಿದ್ದ ಚರಣ್‌ಕುಮಾರ್ ಮೂರು ದಿನಗಳಿಂದ ಸಾವು- ಬದುಕಿನ ನಡುವೆ ಹೋರಾಟ ನಡೆಸಿ ಕೊನೆಯುಸಿರೆಳೆದಿದ್ದಾರೆ.

ಕಳೆದೆರೆಡು ವರ್ಷಗಳಿಂದ ಮೈಷುಗರ್ ಸಕ್ಕರೆ ಕಾರ್ಖಾನೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಮಿಕರ ಹಾಜರಾತಿ ಪುಸ್ತಕ ನಿರ್ವಹಣೆ ಮಾಡುತ್ತಿದ್ದರು. ಕಾರ್ಮಿಕರು ಕರ್ತವ್ಯಕ್ಕೆ ಹಾಜರಾದ ಮೇಲೆ ಕಾರ್ಮಿಕರ ಕೆಲಸದ ನಿರ್ವಹಣೆ ಪರಿಶೀಲನೆ ನಡೆಸಲು ಹೋದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ಮೃತ ಚರಣ್‌ಕುಮಾರ್ ಶವವನ್ನು ಕೆ.ಆರ್.ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ.

ಏನಾಯ್ತು?:

ಭಾನುವಾರ ಕೆಲಸಕ್ಕೆ ಆಗಮಿಸಿದ ನೌಕರರ ಹಾಜರಾತಿಯನ್ನು ಖಚಿತಪಡಿಸಿಕೊಳ್ಳಲು ಕಾರ್ಖಾನೆಯೊಳಗೆ ತೆರಳಿ ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ಬಿಸಿನೀರು ಸಂಸ್ಕರಣಾ ಘಟಕದ ಮೇಲ್ಭಾಗದಲ್ಲಿ ಮರದ ಹಲಗೆ ಹಾಕಿದ್ದು ಅದರ ಕೆಳಭಾಗದ ಕಬ್ಬಿಣ ತುಕ್ಕು ಹಿಡಿದಿತ್ತು ಎನ್ನಲಾಗಿದೆ. ಚರಣ್‌ಕುಮಾರ್ ಪರಿಶೀಲನೆ ನಡೆಸುವ ವೇಳೆ ಹಲಗೆಯ ಮೇಲೆ ಕಾಲಿಟ್ಟಾಗ ಕೆಳಭಾಗದ ಕಬ್ಬಿಣ ತುಂಡಾದ ಪರಿಣಾಮ ಆಯತಪ್ಪಿ ಬಿಸಿನೀರು ಸಂಸ್ಕರಣಾ ಘಟಕದೊಳಗೆ ಬಿದ್ದಿದ್ದಾರೆ ಎನ್ನಲಾಗಿದೆ. ಬಿಸಿನೀರು ಸಂಸ್ಕರಣಾ ಘಟಕದ ಬಳಿ ಸೂಕ್ತ ರಕ್ಷಣಾ ವ್ಯವಸ್ಥೆ ಇಲ್ಲದಿರುವುದೇ ದುರಂತಕ್ಕೆ ಕಾರಣ ಎಂದು ಆರೋಪಿಸಲಾಗಿದೆ.

ಬಿಸಿನೀರು ಸಂಸ್ಕರಣಾ ಘಟಕಕ್ಕೆ ಆಯತಪ್ಪಿ ಪರಿಣಾಮ ಚರಣ್‌ಕುಮಾರ್ ದೇಹದ ಶೇ.೭೫ ರಷ್ಟು ಭಾಗಕ್ಕೆ ಸುಟ್ಟ ಗಾಯಗಳಾಗಿತ್ತು. ಸ್ಥಳದಲ್ಲಿದ್ದ ಕಾರ್ಮಿಕರು ಚರಣ್‌ಕುಮಾರ್ ಅವರನ್ನು ತಕ್ಷಣವೇ ಮೇಲಕ್ಕೆ ಎತ್ತಿ ಮಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ. ಮಿಮ್ಸ್ ಆಸ್ಪತ್ರೆ ವೈದ್ಯರ ಸಲಹೆ ಮೇರೆಗೆ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಚರಣ್‌ಕುಮಾರ್ ಅವರನ್ನು ಚಿಕಿತ್ಸೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಸಂಜೆ ಸುಮಾರು ೫.೩೦ಕ್ಕೆ ಸಾವನ್ನಪ್ಪಿದ್ದಾರೆ.

ಹಾಜರಾತಿ ಪುಸ್ತಕ ನಿರ್ವಹಣೆ:

ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ಉತ್ತರ ಪ್ರದೇಶದವರಾಗಿದ್ದು, ಚರಣ್‌ಕುಮಾರ್ ಹಿಂದಿ ಹಾಗೂ ಇಂಗ್ಲಿಷ್ ಭಾಷೆಯನ್ನು ನಿರರ್ಗಳವಾಗಿ ಮಾತನಾಡುತ್ತಿದ್ದರಿಂದ ಕೆಲಸ ಸುಲಭವಾಗಲಿದೆ ಎಂಬ ಕಾರಣಕ್ಕೆ ಹಾಜರಾತಿ ಪುಸ್ತಕ ನಿರ್ವಹಣೆಗೆ ನಿಯೋಜಿಸಿದ್ದರು.

ಮೃತ ಚರಣ್ ಕುಮಾರ್ ಪತ್ನಿ ಪಲ್ಲವಿ ಸಹ ಇದೇ ಕಾರ್ಖಾನೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದು, ಭಾನುವಾರ ಕರ್ತವ್ಯಕ್ಕೆ ಹಾಜರಾದಾಗ ಪತಿ ಬಿಸಿನೀರಿನ ಘಟಕಕ್ಕೆ ಬಿದ್ದಿರುವ ವಿಷಯ ತಿಳಿದು ಆಘಾತಗೊಂಡಿದ್ದರು.

ಮುಖ್ಯ ದ್ವಾರದಲ್ಲಿ ಕಾರ್ಖಾನೆಗೆ ಯಾರು ಒಳ ಪ್ರವೇಶಿಸುತ್ತಾರೆ, ಅವರು ಎಷ್ಟು ಗಂಟೆಗೆ ಹೊರ ಹೋಗುತ್ತಾರೆ ಮತ್ತು ಕಾರ್ಮಿಕರ ಹಾಜರಾತಿ ಪುಸ್ತಕವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು. ಕಾರ್ಮಿಕರೆಲ್ಲರನ್ನು ನಗುಮುಖದಿಂದ ಮಾತನಾಡಿಸಿ ಸಹಿ ಹಾಕಿಸಿಕೊಂಡು ಕೆಲಸಕ್ಕೆ ಕಳುಹಿಸುತ್ತಿದ್ದರು. ಎಲ್ಲರೊಂದಿಗೂ ಉತ್ತಮವಾಗಿ ಬೆರೆಯುತ್ತಿದ್ದರು ಎಂದು ತಿಳಿದುಬಂದಿದೆ.

--

ನ್ಯಾಯಕ್ಕಾಗಿ ಗ್ರಾಮಸ್ಥರ ಪ್ರತಿಭಟನೆ

ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಮೈಷುಗರ್ ಕಾರ್ಖಾನೆ ಮುಖ್ಯದ್ವಾರದ ಬಳಿ ಜಮಾಯಿಸಿ ಕಾರ್ಖಾನೆ ಆಡಳಿತ ಮಂಡಳಿಯ ದಿವ್ಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು.

ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ್, ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಮಂಗಲದಾಸ್ ಸ್ಥಳಕ್ಕೆ ಆಗಮಿಸಬೇಕು. ಮೃತ ಚರಣ್‌ಕುಮಾರ್ ಅವರ ಪತ್ನಿಗೆ ಸರ್ಕಾರಿ ಉದ್ಯೋಗ ಕಲ್ಪಿಸಿಕೊಡಬೇಕು. ಸೂಕ್ತ ಪರಿಹಾರ ಘೋಷಿಸಬೇಕು ಎಂದು ಪಟ್ಟು ಹಿಡಿದು ಕುಳಿತರು. ಬಿಸಿನೀರಿನ ಸಂಸ್ಕರಣ ಘಟಕಕ್ಕೆ ಬಿದ್ದು ಗಾಯಗೊಂಡಿದ್ದ ಕಾರ್ಮಿಕ ಚರಣ್‌ಕುಮಾರ್ ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದರೆ ಬದುಕುಳಿಯುತ್ತಿದ್ದರು. ಚರಣ್‌ಕುಮಾರ್ ಸಾವಿಗೆ ಆಡಳಿತ ಮಂಡಳಿ ದಿವ್ಯನಿರ್ಲಕ್ಷ್ಯವೇ ಕಾರಣ ಎಂದು ಸಂಬಂಧಿಕರು ಆರೋಪಿಸಿದ್ದಾರೆ.

ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ರುದ್ರೇಗೌಡ, ನಾಗಣ್ಣ, ರಘು, ಸಿದ್ದೇಗೌಡ, ಪುಟ್ಟಲಿಂಗೇಗೌಡ, ಪದ್ಮ, ವಿಶಾಲ್. ಶೋಭಾ, ಜನವಾದಿ ಮಹಿಳಾ ಸಂಘಟನೆ ಜಿಲ್ಲಾಧ್ಯಕ್ಷೆ ಲತಾ, ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಸುನಂದಾ ಜಯರಾಂ, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಕೃಷ್ಣೇಗೌಡ ಸೇರಿದಂತೆ ಮತ್ತಿತರರಿದ್ದರು.

ಬಿಗಿ ಪೊಲೀಸ್ ಬಂದೋಬಸ್ತ್:

ಗ್ರಾಮಸ್ಥರು ಕಾರ್ಖಾನೆ ಮುಖ್ಯದ್ವಾರದಲ್ಲಿ ಜಮಾಯಿಸುತ್ತಿದ್ದಂತೆ ಮುಂಜಾಗ್ರತಾ ಕ್ರಮವಾಗಿ ಕಾರ್ಖಾನೆ ಮುಂಭಾಗ ಹೆಚ್ಚಿನ ಬಿಗಿಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

---

ಲೈಸೆನ್ಸ್ ನಮ್ಮೆದುರು ಹಾಜರುಪಡಿಸಿಲ್ಲ

ಮೈಷುಗರ್ ಕಂಪನಿಗೆ ೩೩೭ ಮಂದಿ ಹೊರಗುತ್ತಿಗೆ ನೌಕರರನ್ನು ಉತ್ತರಪ್ರದೇಶದ ಗೋರಖ್‌ಪುರದ ಶ್ರೇಯಾ ಮ್ಯಾನ್‌ಪವರ್ ಕನ್ಸಲ್ಟೆಂಟ್ ಕಂಪನಿ ನೇಮಕ ಮಾಡಿಕೊಂಡಿದೆ. ಇದರ ಮಾಲೀಕರು ದಿನೋದ್ ದುಬೆ. ಮಂಡ್ಯದಲ್ಲಿ ಕಂಪನಿಯ ಉಸ್ತುವಾರಿ ವಹಿಸಿರುವವರು ಹರಿಓಂ ಪಾಂಡೆ. ೨೦ ಮಂದಿ ನೌಕರರಿಗಿಂತ ಹೆಚ್ಚು ಮಂದಿ ನೌಕರರನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಬೇಕಾದರೆ ಸಹಾಯಕ ಕಾರ್ಮಿಕ ಅಧಿಕಾರಿಯಿಂದ ಲೈಸೆನ್ಸ್ ಪಡೆದುಕೊಳ್ಳಬೇಕು. ಅದರಂತೆ ಶ್ರೇಯಾ ಮ್ಯಾನ್‌ಪವರ್ ಕನ್ಸಲ್ಟೆಂಟ್ ಕಂಪನಿಗೂ ಲೈಸೆನ್ಸ್ ಹಾಜರುಪಡಿಸುವಂತೆ ನೋಟೀಸ್ ಜಾರಿಗೊಳಿಸಿದ್ದೇವೆ. ಇದುವರೆಗೂ ಹಾಜರುಪಡಿಸಿಲ್ಲ. ಲೈಸೆನ್ಸ್ ಹಾಜರುಪಡಿಸದಿದ್ದರೆ ಕಾನೂನಾತ್ಮಕ ಕ್ರಮ ಜರುಗಿಸುತ್ತೇವೆ.

- ಸವಿತಾ, ಜಿಲ್ಲಾ ಕಾರ್ಮಿಕ ಅಧಿಕಾರಿ, ಮಂಡ್ಯ

--

ಹೊರರಾಜ್ಯದಲ್ಲಿರುವೆ, ನಾಳೆ ಬರುವೆ

ಘಟನೆ ನಡೆದ ದಿನ ಕಾರ್ಮಿಕನನ್ನು ಆಸ್ಪತ್ರೆಗೆ ದಾಖಲಿಸಿ ಮಧ್ಯರಾತ್ರಿಯವರೆಗೂ ಆತನ ಚಿಕಿತ್ಸೆಗೆ ನೆರವಾಗಿದ್ದೆ. ಆನಂತರದಲ್ಲಿ ನಾನು ಕಾರ್ಯನಿಮಿತ್ತ ಹೊರರಾಜ್ಯಕ್ಕೆ ಬಂದಿದ್ದೇನೆ. ನಾಳೆ ಮಂಡ್ಯಕ್ಕೆ ಬರುತ್ತೇನೆ. ಗುತ್ತಿಗೆ ಸಂಸ್ಥೆ ಕಡೆಯಿಂದ ನೌಕರನ ಕುಟುಂಬಕ್ಕೆ ಕಾನೂನುಬದ್ಧವಾಗಿ ನೀಡಬೇಕಾದ ಪರಿಹಾರವನ್ನು ನೀಡಲಾಗುವುದು.

- ಸಿ.ಡಿ.ಗಂಗಾಧರ್, ಅಧ್ಯಕ್ಷರು, ಮೈಷುಗರ್ ಕಾರ್ಖಾನೆ

--------

ಅಧ್ಯಕ್ಷರು ನಾಪತ್ತೆ

ಮೈಷುಗರ್ ಕಾರ್ಖಾನೆಯಲ್ಲಿ ಹೊರಗುತ್ತಿಗೆ ಕಾರ್ಮಿಕ ಮೃತಪಟ್ಟಿದ್ದರೂ ಅಧ್ಯಕ್ಷರು ನಾಪತ್ತೆಯಾಗಿದ್ದಾರೆ. ಒಂದು ಮೂಲದ ಪ್ರಕಾರ ಗುತ್ತಿಗೆ ಸಂಸ್ಥೆಗೆ ಅಧ್ಯಕ್ಷರೇ ಬೇನಾಮಿ ಗುತ್ತಿಗೆದಾರರಾಗಿದ್ದು, ಸಂಸ್ಥೆಗೆ ಯಾವುದೇ ಲೈಸೆನ್ಸ್ ಇಲ್ಲ, ಕಾರ್ಮಿಕರಿಗೆ ಇಎಸ್‌ಐ, ಪಿಎಫ್ ವ್ಯವಸ್ಥೆ ಇಲ್ಲ, ಪರಿಹಾರ ನೀಡುವ ಮಾನದಂಡವೂ ಇಲ್ಲ. ಕಾರ್ಖಾನೆ ಹಣ ಲೂಟಿ ಹೊಡೆಯುವುದೇ ಇವರ ಕಾಯಕವಾಗಿದೆ.

- ಎಂ.ಬಿ.ನಾಗಣ್ಣಗೌಡ, ಅಧ್ಯಕ್ಷರು, ಕರುನಾಡ ಸೇವಕರು ಸಂಘಟನೆ

----

₹೩ ಲಕ್ಷ, ₹೫ ಲಕ್ಷ ಪರಿಹಾರ ಕೊಡ್ತೇವೆ ಅಂತಾರೆ..!

ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕರು ಮೊದಲಿಗೆ ₹೩ ಲಕ್ಷ ಪರಿಹಾರ ಕೊಡುತ್ತೇವೆ ಎಂದರು. ಅದನ್ನು ಒಪ್ಪದಿದ್ದಾಗ ₹೫ ಲಕ್ಷ ಕೊಡ್ತೀವಿ ಅಂತಿದ್ದಾರೆ. ಗುತ್ತಿಗೆ ಸಂಸ್ಥೆ ಅಧಿಕೃತ ಲೈಸೆನ್ಸ್ ಪಡೆದಿಲ್ಲ. ಅಧ್ಯಕ್ಷರು, ಜಿಲ್ಲಾಧಿಕಾರಿಗಳು ಇಲ್ಲಿಗೆ ಬಂದಿಲ್ಲ. ಮೃತ ನೌಕರನ ಪತ್ನಿಗೆ ಕಾಯಂ ಕೆಲಸ ನೀಡುವಂತೆ ಕೇಳಿದರೂ ಅದಕ್ಕೆ ಅವಕಾಶವಿಲ್ಲ ಎನ್ನುತ್ತಿದ್ದಾರೆ. ನಾಳೆಯಿಂದ ಕಾರ್ಖಾನೆ ಎದುರೇ ಪ್ರತಿಭಟನೆ ನಡೆಸುತ್ತೇವೆ.

- ದೇವರಾಜು, ಮೃತನ ಸಂಬಂಧಿಕ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬುದ್ಧ ಮನುಕುಲಕ್ಕೆ ನೀಡಿದ ಸಂದೇಶ ಕರುಣೆ-ಅಹಿಂಸೆ: ಡಾ. ಬೂವನಹಳ್ಳಿ ನಾಗರಾಜು
ಸೋಲೂರು ಹೋಬಳಿಯ ಸಮಗ್ರ ಅಭಿವೃದ್ದಿ: ಶಾಸಕ ಶ್ರೀನಿವಾಸ್‌