ಹೊಸಪೇಟೆ: ಹಂಪಿ ಕನ್ನಡ ವಿಶ್ವವಿದ್ಯಾಲಯದ 48 ಹೊರಗುತ್ತಿಗೆ ನೌಕರರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಹಂಪಿ ಕನ್ನಡ ವಿಶ್ವವಿದ್ಯಾಲಯ ಹೊರಗುತ್ತಿಗೆ ನೌಕರರ ಸಂಘದಿಂದ ಮಂಗಳವಾರ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರತಿಭಟನೆ ನಡೆಸಿ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಹಾಗೂ ಕುಲಸಚಿವ ಡಾ. ವಿರೂಪಾಕ್ಷಿ ಪೂಜಾರಹಳ್ಳಿ ಅವರಿಗೆ ಮನವಿ ಸಲ್ಲಿಸಲಾಯಿತು.
ಈಗಾಗಲೇ ಹೊರಸಂಪನ್ಮೂಲ ಏಜೆನ್ಸಿಗಾಗಿ ಟೆಂಡರ್ ಕರೆದು 5 ತಿಂಗಳಾಗಿವೆ. ತಕ್ಷಣ ನಿಯಮಾನುಸಾರ ಹೊಸ ಏಜೆನ್ಸಿ ಆಯ್ಕೆ ಮಾಡಿ ಕಾರ್ಯದೇಶ ನೀಡಬೇಕು. ಕಳೆದ 24 ವರ್ಷಗಳಿಂದ ದಿನಗೂಲಿಗಳಾಗಿ, ಹೊರಗುತ್ತಿಗೆ ನೌಕರರಾಗಿ ದುಡಿಯುತ್ತಿರುವ 48 ಜನರಿಗೆ ಕೆಲಸದ ಭದ್ರತೆ ನೀಡಬೇಕು ಮತ್ತು ಖಾಯಂ ಮಾಡಬೇಕು.
ಕಳೆದ 9 ವರ್ಷಗಳಿಂದಲೂ ಹೊರಸಂಪನ್ಮೂಲ ಏಜೆನ್ಸಿಯಾಗಿ ಕಾರ್ಯನಿರ್ವಹಿಸಿದ ಮೇ. ಕೌಶಲ್ಯ ಸೆಕ್ಯೂರಿಟಿ ಸರ್ವಿಸ್ ಕಲಬುರ್ಗಿ ಮತ್ತು ಮೆಣಣ ಕವನ ಪಾಟೀಲ್ ಸೆಕ್ಯೂರಿಟಿ ಸರ್ವಿಸ್ ಕಲಬುರ್ಗಿ ಅವರು ನೌಕರರಿಗೆ ಕನಿಷ್ಠ ವೇತನ ಪಾವತಿ ಮಾಡದೆ ಪಿಎಫ್, ಇಎಸ್ಐ. ಸರಕಾರಕ್ಕೆ ಪಾವತಿ ಮಾಡದೆ ವಂಚನೆ ಮಾಡಿರುವ ಬಗ್ಗೆ ಸರಕಾರದ ’ಆಡಿಟ್’ ವರದಿ ಹಿನ್ನೆಲೆಯಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು ಎನ್ನುವ ವಿಷಯಗಳನ್ನು ಹೊಂದಿರುವ ಮನವಿ ಪತ್ರವನ್ನು ಕುಲಪತಿಗಳಿಗೆ ಮತ್ತು ಕುಲಸಚಿವರಿಗೆ ಸಲ್ಲಿಸಲಾಯಿತು.ಹಂಪಿ ಕನ್ನಡ ವಿಶ್ವವಿದ್ಯಾಲಯದ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಮರಡಿ ಜಂಬಯ್ಯ ನಾಯಕ, ಡಿ.ಎಚ್.ಎಸ್. ಜಿಲ್ಲಾ ಉಪಾಧ್ಯಕ್ಷ ಬಿ. ತಾಯಪ್ಪ ನಾಯಕ, ಸಮಿತಿಯ ಮುಖಂಡರಾದ ಸೂರ್ಯನಾರಾಯಣ, ನಿಂಗಪ್ಪ, ಈರಣ್ಣ, ಭುವನೇಶ್ವರಿ, ಗಾಯತ್ರಿ, ಶ್ರುತಿ, ಪದ್ಮಾವತಿ, ನಾಗರತ್ನಾ, ದಿವಾಕರ್, ಕರಿಬಸಪ್ಪ ಬಸವರಾಜ, ಮಾರೆಪ್ಪ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಪ್ರತಿಭಟನಾಕಾರರು ಕನ್ನಡ ವಿಶ್ವವಿದ್ಯಾಲಯಕ್ಕೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಪ್ರತಿಭಟನಾಕಾರರನ್ನು ವಿಶ್ವವಿದ್ಯಾಲಯದ ಹೊರಗಡೆ ತಡೆದು ನಿಲ್ಲಿಸಲು ಯತ್ನಿಸಿದರು. ಪ್ರತಿಭಟನೆಕಾರರು ಪೊಲೀಸರನ್ನು ಲೆಕ್ಕಿಸದೇ ವಿಶ್ವವಿದ್ಯಾಲಯಕ್ಕೆ ನುಗ್ಗಿ ಪ್ರತಿಭಟನೆ ನಡೆಸಿದರು.ಪ್ರತಿಭಟನಾಕಾರರು ಮತ್ತು ವಿಶ್ವವಿದ್ಯಾಲಯದ ಕುಲಪತಿ ಮತ್ತು ಕುಲಸಚಿವರು ಸೇರಿದಂತೆ ಇತರೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. 48 ಹೊರಗುತ್ತಿಗೆ ನೌಕರರಿಗೆ ತಕ್ಷಣ 11 ತಿಂಗಳ ಬಾಕಿ ಸಂಬಳ ಪಾವತಿ ಮಾಡಲೇ ಬೇಕು ಎಂದು ಪ್ರತಿಭಟನಾಕಾರರು ಪಟ್ಟುಹಿಡಿದರು. ಸದ್ಯ ಮೂರು ತಿಂಗಳ ಸಂಬಳ ನೀಡಲಾಗುವುದು. ನಂತರ ಹಂತ ಹಂತವಾಗಿ ಉಳಿದ ಸಂಬಳವನ್ನು ನೀಡಲಾಗುವುದು ಎಂದು ಕುಲಪತಿಗಳು ಹೇಳಿದ ನಂತರ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.