ಶಿವಮೊಗ್ಗ ಅಸಂಘಟಿತ ವಲಯದಲ್ಲಿ ದುಡಿಯುವ ಲಕ್ಷಾಂತರ ಕಾರ್ಮಿಕರಿಗೂ ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆ ಹಾಗೂ ಗೌರವಯುತ ಜೀವನವನ್ನು ಖಾತ್ರಿಪಡಿಸುವ ಉದ್ದೇಶದಿಂದ ಪ್ರಧಾನಿ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಟಲ್ ಪಿಂಚಣಿ ಯೋಜನೆ (APY) ದೇಶಾದ್ಯಂತ ವ್ಯಾಪಕವಾಗಿ ವಿಸ್ತರಿಸುತ್ತಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿಯೂ ಗಮನಾರ್ಹ ಸ್ಪಂದನೆ ದೊರೆತಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಅಸಂಘಟಿತ ವಲಯದಲ್ಲಿ ದುಡಿಯುವ ಲಕ್ಷಾಂತರ ಕಾರ್ಮಿಕರಿಗೂ ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆ ಹಾಗೂ ಗೌರವಯುತ ಜೀವನವನ್ನು ಖಾತ್ರಿಪಡಿಸುವ ಉದ್ದೇಶದಿಂದ ಪ್ರಧಾನಿ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಟಲ್ ಪಿಂಚಣಿ ಯೋಜನೆ (APY) ದೇಶಾದ್ಯಂತ ವ್ಯಾಪಕವಾಗಿ ವಿಸ್ತರಿಸುತ್ತಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿಯೂ ಗಮನಾರ್ಹ ಸ್ಪಂದನೆ ದೊರೆತಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು. ಅಟಲ್ ಪಿಂಚಣಿ ಯೋಜನೆಯ ಅನುಷ್ಠಾನ, ಫಲಾನುಭವಿಗಳ ಸಂಖ್ಯೆ, ಮಹಿಳೆಯರ ಭಾಗವಹಿಸುವಿಕೆ, ಯೋಜನೆಯ ಆರ್ಥಿಕ ಬಲ ಹಾಗೂ ಕರ್ನಾಟಕ ಮತ್ತು ಜಿಲ್ಲಾವಾರು ಮಾಹಿತಿಯನ್ನು ಕೋರಿ ಸಂಸತ್ತಿನಲ್ಲಿ ಶ್ರೀ ಬಿ.ವೈ. ರಾಘವೇಂದ್ರ ಅವರು ಕೇಳಿದ ಪ್ರಶ್ನೆಗೆ ಕೇಂದ್ರ ಸರ್ಕಾರ ನೀಡಿರುವ ಉತ್ತರವು ಯೋಜನೆಯ ವ್ಯಾಪಕ ವಿಸ್ತರಣೆಯನ್ನು ಅಂಕಿಅಂಶಗಳ ಮೂಲಕ ತೋರಿಸಿದೆ.ಕೇಂದ್ರ ಸರ್ಕಾರದ ಉತ್ತರದ ಪ್ರಕಾರ, 2026ರ ಜೂನ್ 30ರ ವೇಳೆಗೆ ದೇಶಾದ್ಯಂತ 9,29,47,723 ಮಂದಿ ಅಟಲ್ ಪಿಂಚಣಿ ಯೋಜನೆಗೆ ಸೇರ್ಪಡೆಯಾಗಿದ್ದು, ಅವರಲ್ಲಿ 4,56,98,133 ಮಹಿಳೆಯರು ಸೇರಿದ್ದಾರೆ. ಯೋಜನೆಯಡಿ ಸುಮಾರು ₹57,296 ಕೋಟಿಯಷ್ಟು ನಿಧಿಯನ್ನು ನಿರ್ವಹಿಸಲಾಗುತ್ತಿದ್ದು, ಇದು ಯೋಜನೆಯ ಮೇಲಿನ ಜನರ ವಿಶ್ವಾಸ ಹಾಗೂ ಅದರ ವಿಸ್ತಾರವನ್ನು ಪ್ರತಿಬಿಂಬಿಸುತ್ತದೆ.ಕರ್ನಾಟಕದಲ್ಲಿ 52,72,744 ಮಂದಿ ಈ ಯೋಜನೆಗೆ ನೋಂದಾಯಿಸಿಕೊಂಡಿದ್ದು, ಅವರಲ್ಲಿ 25,10,470 ಮಹಿಳೆಯರು ಇದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ 1,58,401 ಮಂದಿ ಅಟಲ್ ಪಿಂಚಣಿ ಯೋಜನೆಯಡಿ ಸೇರ್ಪಡೆಯಾಗಿದ್ದು, ಅವರಲ್ಲಿ 79,584 ಮಹಿಳೆಯರು ಇದ್ದಾರೆ. ಇದು ಜಿಲ್ಲೆಯಲ್ಲಿಯೂ ಯೋಜನೆಗೆ ಗಣನೀಯ ಪ್ರಮಾಣದ ನೋಂದಣಿಯಾಗಿರುವುದನ್ನು ತೋರಿಸುತ್ತದೆ.ಈ ಕುರಿತು ಪ್ರತಿಕ್ರಿಯಿಸಿದ ಬಿ.ವೈ. ರಾಘವೇಂದ್ರ, ರೈತರು, ಕೂಲಿ ಕಾರ್ಮಿಕರು, ಸಣ್ಣ ವ್ಯಾಪಾರಿಗಳು, ಸ್ವಯಂ ಉದ್ಯೋಗಿಗಳು ಸೇರಿದಂತೆ ಅಸಂಘಟಿತ ವಲಯದಲ್ಲಿ ದುಡಿಯುವ ಲಕ್ಷಾಂತರ ಜನರಿಗೆ ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆ ಹಾಗೂ ಖಚಿತ ಪಿಂಚಣಿಯ ಸೌಲಭ್ಯವನ್ನು ತಲುಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಅಟಲ್ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದೆ. ದುಡಿಯುವ ಅವಧಿಯಲ್ಲಿ ನಿಯಮಿತ ಉಳಿತಾಯವನ್ನು ಪ್ರೋತ್ಸಾಹಿಸುವ ಮೂಲಕ 60 ವರ್ಷಗಳ ನಂತರ ಖಚಿತ ಆದಾಯದ ಭರವಸೆ ನೀಡುವ ಈ ಯೋಜನೆ, ಸಾಮಾನ್ಯ ಕುಟುಂಬಗಳ ಭವಿಷ್ಯವನ್ನು ಆರ್ಥಿಕವಾಗಿ ಮತ್ತಷ್ಟು ಭದ್ರಗೊಳಿಸುವ ಮಹತ್ವದ ಹೆಜ್ಜೆಯಾಗಿದೆ. ಕಳೆದ ಒಂದು ದಶಕದಲ್ಲಿ ಯೋಜನೆಗೆ ನಿರಂತರವಾಗಿ ಹೆಚ್ಚುತ್ತಿರುವ ನೋಂದಣಿ, ಯೋಜನೆಯ ಮೇಲಿನ ಜನರ ವಿಶ್ವಾಸ ಹಾಗೂ ಅದರ ವ್ಯಾಪಕ ಸ್ವೀಕಾರವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.ಅಟಲ್ ಪಿಂಚಣಿ ಯೋಜನೆಯ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಿ, ಅರ್ಹ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಯೋಜನೆಗೆ ನೋಂದಾಯಿಸಿಕೊಳ್ಳುವ ಮೂಲಕ ತಮ್ಮ ಹಾಗೂ ತಮ್ಮ ಕುಟುಂಬದ ಭವಿಷ್ಯವನ್ನು ಆರ್ಥಿಕವಾಗಿ ಭದ್ರಪಡಿಸಿಕೊಳ್ಳುವಂತೆ ಬಿ.ವೈ. ರಾಘವೇಂದ್ರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.