ಎಸ್.ಜಿ. ತೆಗ್ಗಿನಮನಿ
1975ನೇ ಸಾಲಿನಲ್ಲಿ ಮಲಪ್ರಭಾ ಜಲಾಶಯ ನಿರ್ಮಾಣಕ್ಕಾಗಿ ಗದಗ, ಬಾಗಲಕೋಟೆ, ಧಾರವಾಡ, ಬೆಳಗಾವಿ ಜಿಲ್ಲೆಗಳ ಕೆಲವು ತಾಲೂಕಿಗಳ ರೈತರ ಜಮೀನುಗಳಿಗೆ ಕಾಲುವೆ ಮೂಲಕ ನೀರು ಹರಿಸಲು ಸರ್ಕಾರ ಮುಂದಾಯಿತು. ಸರ್ಕಾರ ಕಾಲುವೆ ಮೂಲಕ ಜಮೀನುಗಳಿಗೆ ನೀರು ಪೂರೈಕೆ ಮಾಡಿದ್ದಕ್ಕೆ ಸರ್ಕಾರ 1 ಎಕರೆಗೆ ಇಂತಿಷ್ಟು ಎಂದು ಪ್ರತಿವರ್ಷ ನೀರಿನ ಕರ ತುಂಬಬೇಕೆಂದು ತಿಳಿಸಿತು.
ವರ್ಷಪೂರ್ತಿ ಕಾಲುವೆಗಳಿಗೆ ನೀರು ಪೂರೈಕೆ ಮಾಡಿದರೆ ಮಾತ್ರ ಸರ್ಕಾರಕ್ಕೆ ನೀರಿನ ಕರ ಕಟ್ಟುತ್ತೇವೆಂದು ರೈತರು ಹೇಳಿದರು. ಸರ್ಕಾರ ಮತ್ತು ರೈತರ ಮಧ್ಯೆ ತಿಕ್ಕಾಟ ಶುರುವಾಯಿತು. ರೈತರು ನೀರಿನ ಕರ ಕಟ್ಟದ್ದಕ್ಕೆ ಸರ್ಕಾರ ರೈತನ ಜಮೀನಿನ ಉತಾರದ 9ನೇ ಕಬ್ಜಾ ಕಾಲಂನಲ್ಲಿ ಸರ್ಕಾರವೆಂದು ನಮೂದು ಮಾಡಿತು. ಅದರ ಪರಿಣಾಮ ಈ ಭಾಗದ ನೂರಾರು ರೈತರು ಸರ್ಕಾರ ಸೌಲಭ್ಯಗಳಿಂದ ಸಂಪೂರ್ಣ ವಂಚಿತರಾದರು.ಹೋರಾಟಕ್ಕೆ ನಾಂದಿ: ಸರ್ಕಾರ ಈ ರೀತಿ ಕಬ್ಜಾ ಕಾಲಂನಲ್ಲಿ ಸರ್ಕಾರವೆಂದು ನಮೂದು ಮಾಡಿದ ನಂತರ ಈ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ನಾಲ್ಕು ಜಿಲ್ಲೆ 11 ತಾಲೂಕಿನ ರೈತರು ಸೇರಿಕೊಂಡು ಹಲವಾರು ಬಾರಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಲಿಲ್ಲ. ಮುಂದೆ ಸರ್ಕಾರ ನೀರಿನ ಕರ ಕಟ್ಟಿದ ರೈತರ ಮನೆಗಳನ್ನು ಜಪ್ತಿ ಮಾಡಲು ಪ್ರಾರಂಭಿಸಿತು.
ಅಂದಿನ ತಹಸೀಲ್ದಾರ್ ಕಾರ್ಯಾಲಯಕ್ಕೆ ಬೆಂಕಿ ಹಚ್ಚಿದ್ದರಿಂದ ವಾತಾವರಣ ಉದ್ವಿಗ್ನಗೊಂಡಿತು. ರೈತರು ಮತ್ತು ಪೊಲೀಸರ ಮಧ್ಯೆ ಘರ್ಷಣೆ ನಡೆಯಿತು. ಗೋಲಿಬಾರ್‌ನಲ್ಲಿ ತಾಲೂಕಿನ ಚಿಕ್ಕನರಗುಂದ ಗ್ರಾಮದ ರೈತ ಈರಪ್ಪ ಕಡ್ಲಕೊಪ್ಪ ಸಾವಿಗೀಡಾದರು. ಈ ಸುದ್ದಿ ಇಡೀ ರಾಜ್ಯದಲ್ಲಿ ಸಂಚಲನ ಉಂಟು ಮಾಡಿತು. ರೈತ ಸಂಘಟನೆಗಳ ಚಳವಳಿ ತಾಪಕ್ಕೆ ಅಂದಿನ ಸರ್ಕಾರ ಪತನವಾಯಿತು. ನರಗುಂದ ಬಂಡಾಯ ಎಂದು ಕರೆಸಿಕೊಂಡ ಈ ಹೋರಾಟಕ್ಕೆ ಮುಖ್ಯಮಂತ್ರಿ ಗುಂಡೂರಾವ್ ಹುದ್ದೆ ಬಿಡುವಂತಾಯಿತು.
ತಾಲೂಕಿನ ಹದಲಿ, ಭೈರನಹಟ್ಟಿ, ಗಂಗಾಪುರ, ಖಾನಾಪುರ, ರಡ್ಡೇರ- ನಾಗನೂರ ಗ್ರಾಮಗಳ 200 ರೈತರ ಉತಾರದ ಕಬ್ಜಾಂ ಕಾಲಂನಲ್ಲಿ ಸರ್ಕಾರ ಎಂಬ ಹೆಸರಿದೆ.
ಮನವಿ ಪತ್ರ: ರೈತರ ಉತಾರದಲ್ಲಿನ ಕಬ್ಜಾ ಕಾಲಂನಲ್ಲಿ ಸರ್ಕಾರ ಎನ್ನುವುದನ್ನು ಕಡಿಮೆ ಮಾಡಬೇಕೆಂದು ಮನವಿ ಪತ್ರವನ್ನು ಸರ್ಕಾರಕ್ಕೆ ರವಾನಿಸಿದ್ದೇವೆ ಎಂದು ತಹಸೀಲ್ದಾರ್ ಶ್ರೀಶೈಲ ತಳವಾರ ತಿಳಿಸಿದರು.