- ಸಚಿವ ನಾಗೇಂದ್ರಗೆ ಸಂಪುಟದಿಂದ ವಜಾಕ್ಕೆ ಬಿಜೆಪಿ ತಾಕೀತು
- - -
ಕನ್ನಡಪ್ರಭ ವಾರ್ತೆ ದಾವಣಗೆರೆಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಪ್ರಕರಣದ ಕಳಂಕಿತ ಬಿ.ನಾಗೇಂದ್ರ ಅವರನ್ನು ಸಚಿವ ಸಂಪುಟದಿಂದ ವಜಾಗೆ ಒತ್ತಾಯಿಸಿ ಬಿಜೆಪಿ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಧರಣಿ ವೇಳೆ ರಸ್ತೆ ತಡೆ ನಡೆಸುತ್ತಿದ್ದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ವಿಪ ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿ ಸ್ವಾಮಿ, ಮಾಜಿ ಶಾಸಕ ಎಚ್.ಪಿ.ರಾಜೇಶ ಸೇರಿದಂತೆ 50ಕ್ಕೂ ಹೆಚ್ಚು ಮುಖಂಡರು, ಕಾರ್ಯಕರ್ತರನ್ನು ಪೊಲೀಸರು ಶುಕ್ರವಾರ ವಶಕ್ಕೆ ಪಡೆದರು. ತಾಸಿನ ಬಳಿಕ ಬಿಡುಗಡೆಗೊಳಿಸಿದರು.
ಧರಣಿ ಸ್ಥಳದಲ್ಲಿದ್ದ ಮುಖಂಡರು, ಕಾರ್ಯಕರ್ತರು ಏಕಾಏಕಿ ಹಳೆ ಪಿ.ಬಿ. ರಸ್ತೆಯ ಎರಡೂ ಬದಿಗೆ ಅಡ್ಡಲಾಗಿ ಕುಳಿತು ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದರಲ್ಲದೇ, ಕಳಂಕಿತ ಸಚಿವ ಬಿ.ನಾಗೇಂದ್ರಗೆ ಸಂಪುಟದಿಂದ ವಜಾ ಮಾಡಬೇಕು. ವಾಲ್ಮೀಕಿ ನಿಗಮದ ಹಣ ದುರುಪಯೋಗದಲ್ಲಿ ಪ್ರಮುಖವಾಗಿ ಹೆಸರು ಕೇಳಿಕೊಂಡು ಬಂದರೂ ತಮ್ಮನ್ನು ರಕ್ಷಿಸಿಕೊಳ್ಳಲು ಈಗ ಅದಕ್ಕೆ ಜಾತಿಯ ಬಣ್ಣ ಬಳಿಯಲು ಮುಂದಾಗಿದ್ದಾರೆಂದು ಆರೋಪಿಸಿ ಘೋಷಣೆಗಳನ್ನು ಕೂಗ ತೊಡಗಿದರು.
ಇದೇ ವೇಳೆ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ನೂರಾರು ಕೋಟಿ ರು. ದುರ್ಬಳಕೆ ಮಾಡಿಕೊಂಡಿರುವ ಪ್ರಕರಣದಲ್ಲಿ ಸಚಿವ ಬಿ.ನಾಗೇಂದ್ರ ಮೇಲೂ ಕಳಂಕವಿದೆ. ನಾಗೇಂದ್ರ ವಜಾಗೆ ಒತ್ತಾಯಿಸಿ ಬಿಜೆಪಿ ರಾಜ್ಯ ನಾಯಕರು, ವಿಪಕ್ಷ ನಾಯಕರ ನೇತೃತ್ವದಲ್ಲಿ ಸದನದ ಒಳಗೆ ಮತ್ತು ಹೊರಗೆ ಹೋರಾಟ ನಡೆದಿದೆ. ರಾಜ್ಯವ್ಯಾಪಿ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ನಾವು ಹೋರಾಟ ನಡೆಸುತ್ತಿದ್ದೇವೆ. ಪೊಲೀಸರನ್ನು ಬಳಸಿ ನಮ್ಮ ಹೋರಾಟವನ್ನು ಹತ್ತಿಕ್ಕುವ ದುಸ್ಸಾಹಸಕ್ಕೆ ಕಾಂಗ್ರೆಸ್ ಸರ್ಕಾರ ಹೈಹಾಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ರೇಣುಕಾಚಾರ್ಯ, ಸಚೇತಕ ಡಾ. ಎ.ಎಚ್. ಶಿವಯೋಗಿಸ್ವಾಮಿ, ಎಚ್.ಪಿ.ರಾಜೇಶ, ಲೋಕಿಕೆರೆ ನಾಗರಾಜ, ಧನಂಜಯ ಕಡ್ಲೇಬಾಳು, ಆರ್.ಲಕ್ಷ್ಮಣ, ಅನಿಲಕುಮಾರ ನಾಯ್ಕ, ಐರಣಿ ಅಣ್ಣೇಶ, ಅಕ್ಕಿ ಪ್ರಭು ಕಲ್ಬುರ್ಗಿ, ಎಚ್.ಎಂ.ರುದ್ರಮುನಿಸ್ವಾಮಿ, ಶಾಮ ನೂರು ಹರೀಶ, ಗೌತಮ್ ಜೈನ್, ಶಿವನಗೌಡ ಪಾಟೀಲ, ತಾರೇಶ ನಾಯ್ಕ, ಕೆಟಿಜೆ ನಗರ ಲೋಕೇಶ, ನಿಂಗರಾಜ ರೆಡ್ಡಿ, ರಾಜು ನೀಲಗುಂದ, ಪ್ರವೀಣ ಜಾಧವ್, ಎಚ್.ಪಿ.ವಿಶ್ವಾಸ, ರಾಕೇಶ ಭಜರಂಗಿ, ಪಂಜು ಪೈಲ್ವಾನ್, ರಾಜು ವೀರಣ್ಣ ಸೇರಿದಂತೆ ದಾವಣಗೆರೆ ಉತ್ತರ, ದಕ್ಷಿಣ, ಮಾಯಕೊಂಡ, ಚನ್ನಗಿರಿ, ಹರಿಹರ, ಜಗಳೂರು ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಬಿಜೆಪಿ ರಾಜ್ಯಾಧ್ಯಕ್ಷರ ಸೂಚನೆ ಮೇರೆಗೆ ಶುಕ್ರವಾರಕ್ಕೆ ಬಿಜೆಪಿ ಅನಿರ್ದಿಷ್ಟಾವಧಿ ಸತ್ಯಾಗ್ರಹ ಮುಕ್ತಾಯಗೊಳಿಸಿದೆ.
-20ಕೆಡಿವಿಜಿ1: ದಾವಣಗೆರೆ ಎಸಿ ಕಚೇರಿ ಎದುರು ಬಿಜೆಪಿ ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹದಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿದರು.