ಗುತ್ತಿಗೆದಾರರಿಂದ ರಾತ್ರೋರಾತ್ರಿ ಕಾಮಗಾರಿ; ಗ್ರಾಮಸ್ಥರ ವಿರೋಧ

KannadaprabhaNewsNetwork | Published : May 16, 2024 12:47 AM

ಸಾರಾಂಶ

ಗುತ್ತಿಗೆದಾರರನ್ನು ಕರೆಸಿ ಆಗಿರುವ ಸಮಸ್ಯೆಯನ್ನು ಸರಿಪಡಿಸುವ ಕೆಲಸ ಮಾಡುತ್ತೇವೆ ಎಂದು ಸಾತನೂರು ಪೊಲೀಸರು ಒಂದು ದಿನ ಕಾಲಾವಕಾಶ ಕೇಳಿದ್ದರು. ಆದರೆ, ಮೂರು ದಿನ ಕಳೆದರೂ ಯಾವ ಗುತ್ತಿಗೆದಾರರೂ ಬಂದು ಇಲ್ಲಿನ ಜನರ ಸಮಸ್ಯೆಗಳನ್ನು ಕೇಳಲಿಲ್ಲ, ಹಣ ಬಿಡುಗಡೆ ಮಾಡಿಕೊಳ್ಳಲು ರಾತ್ರೋರಾತ್ರಿ ಬಂದು ತರಾತುರಿಯಲ್ಲಿ ಕಾಮಗಾರಿ ಮಾಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಕನಕಪುರ

ಅನುದಾನ ಬಿಡುಗಡೆ ಮಾಡಿಕೊಳ್ಳಲು ರಾತ್ರೋ ರಾತ್ರಿ ಕಳಪೆ ಹಾಗೂ ಅವೈಜ್ಞಾನಿಕವಾಗಿ ರಸ್ತೆ ಹಾಗೂ ಪೈಪ್ ಲೈನ್ ಅಳವಡಿಕೆ ಕಾಮಗಾರಿ ಮಾಡಿ ಗುತ್ತಿಗೆದಾರರು ಕೈ ತೊಳೆದುಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದು ಬೊಮ್ಮನಹಳ್ಳಿ ಹಾಗೂ ಅಚ್ಚಲು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.ತಾಲೂಕಿನ ಸಾತನೂರು ಹೋಬಳಿಯ ಅಚ್ಚಲು ಗ್ರಾಮದ ಬಳಿ ಬೆಂಗಳೂರಿಗೆ ಕುಡಿಯುವ ನೀರು ಪೂರೈಸಲು ಕೈಗೊಂಡಿರುವ ಪೈಪ್ ಲೈನ್ ಅಳವಡಿಕೆ ಕಾಮಗಾರಿ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿ ಅವೈಜ್ಞಾನಿಕ ಹಾಗೂ ಕಳಪೆಯಾಗಿದ್ದು,ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರೂ ಸಹ ಹಣ ಬಿಡುಗಡೆ ಮಾಡಿಕೊಳ್ಳಲು ರಾತ್ರೋ ರಾತ್ರಿ ಕಾಮಗಾರಿ ನಡೆಸುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು.

ಬಿಜೆಪಿ ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ಕುಮಾರಸ್ವಾಮಿ ಮಾತನಾಡಿ, ಅಚ್ಚಲು ಗ್ರಾಮದ ಬಳಿ ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಕೆ ಕಾಮಗಾರಿ ಕೈಗೊಂಡಿದ್ದಾರೆ, ಆದರೆ ರಾಷ್ಟ್ರೀಯ ಹೆದ್ದಾರಿ ಕೆಳಗೆ ಆಳವಾಗಿ ಪೈಪ್ ಲೈನ್ ಅಳವಡಿಕೆ ಮಾಡಬೇಕಾದ ಗುತ್ತಿಗೆದಾರರು, ರಸ್ತೆಗಿಂತಲೂ ಎತ್ತರವಾಗಿ ಅವೈಜ್ಞಾನಿಕವಾಗಿ ಪೈಪ್ಲೈನ್ ಅಳವಡಿಸಿದ್ದಾರೆ. ಇದು ವಾಹನ ಸವಾರರಿಗೆ ಕಂಟಕವಾಗಿ ಪರಿಣಮಿಸಿದೆ, ಅಲ್ಲದೇ ರಸ್ತೆ ಪಕ್ಕದಲ್ಲಿ ಎತ್ತರವಾಗಿ ಪೈಪ್ ಲೈನ್ ಅಳವಡಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಚರಂಡಿ ಸಹ ನಿರ್ಮಾಣ ಮಾಡಿಲ್ಲ, ಇದರಿಂದ ಮಳೆ ನೀರು ರಸ್ತೆ ಪಕ್ಕದಲ್ಲಿರುವ ಮನೆಗಳಿಗೆ ನುಗ್ಗುತ್ತದೆ. ಈ ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿಯನ್ನು ವಿರೋಧಿಸಿ ಗ್ರಾಮಸ್ಥರು ಕಳೆದ ಮೂರು ದಿನಗಳ ಹಿಂದೆಯೂ ಪ್ರತಿಭಟನೆ ನಡೆಸಿದ್ದರು ಎಂದು ತಿಳಿಸಿದರು.

ಗುತ್ತಿಗೆದಾರರನ್ನು ಕರೆಸಿ ಆಗಿರುವ ಸಮಸ್ಯೆಯನ್ನು ಸರಿಪಡಿಸುವ ಕೆಲಸ ಮಾಡುತ್ತೇವೆ ಎಂದು ಸಾತನೂರು ಪೊಲೀಸರು ಒಂದು ದಿನ ಕಾಲಾವಕಾಶ ಕೇಳಿದ್ದರು. ಆದರೆ, ಮೂರು ದಿನ ಕಳೆದರೂ ಯಾವ ಗುತ್ತಿಗೆದಾರರೂ ಬಂದು ಇಲ್ಲಿನ ಜನರ ಸಮಸ್ಯೆಗಳನ್ನು ಕೇಳಲಿಲ್ಲ, ಹಣ ಬಿಡುಗಡೆ ಮಾಡಿಕೊಳ್ಳಲು ರಾತ್ರೋರಾತ್ರಿ ಬಂದು ತರಾತುರಿಯಲ್ಲಿ ಕಾಮಗಾರಿ ಮಾಡುತ್ತಿದ್ದಾರೆ. ಈ ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿಯನ್ನು ಸ್ಥಗಿತಗೊಳಿಸಿ ರಸ್ತೆ ಅಕ್ಕ ಪಕ್ಕದಲ್ಲಿರುವ ಮನೆಗಳಿಗೆ ನೀರು ನುಗ್ಗದಂತೆ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಿಸುವ ವಾಹನ ಸವಾರರಿಗೆ ಯಾವುದೇ ತೊಂದರೆ ಆಗದಂತೆ ಉತ್ತಮ ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು. ಇಲ್ಲದಿದ್ದರೆ ರಸ್ತೆ ತಡೆದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಗ್ರಾಮಸ್ಥರಾದ ರವಿ, ಕಿರಣ್, ಶ್ರೀನಿವಾಸ್, ಶಿವರಾಜು, ಬೂಕಿಗೌಡ, ದೇಸಿ ಗೌಡ, ವರದರಾಜು ಸೇರಿ ಗ್ರಾಮಸ್ಥರು ಉಪಸ್ಥಿತರಿದ್ದರು.

Share this article