ವಿವಾಹವಾಗಿ ನಾಲ್ಕು ತಿಂಗಳಿಗೆ ದಂಪತಿ ಆತ್ಮಹತ್ಯೆ

KannadaprabhaNewsNetwork | Updated : May 16 2024, 12:47 AM IST

ಸಾರಾಂಶ

ಪ್ರೀತಿಸಿ ನಾಲ್ಕು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ನವ ಜೋಡಿ ಮಂಗಳವಾರ ತಡರಾತ್ರಿ ನೇಣಿಗೆ ಶರಣಾದ ಘಟನೆ ನಗರದ ಶ್ರೀ ಸಿದ್ದೇಶ್ವರ ಬಡಾವಣೆಯಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಪ್ರೀತಿಸಿ ನಾಲ್ಕು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ನವ ಜೋಡಿ ಮಂಗಳವಾರ ತಡರಾತ್ರಿ ನೇಣಿಗೆ ಶರಣಾದ ಘಟನೆ ನಗರದ ಶ್ರೀ ಸಿದ್ದೇಶ್ವರ ಬಡಾವಣೆಯಲ್ಲಿ ನಡೆದಿದೆ.

ನಗರದ ಮನೋಜಕುಮಾರ ಪೋಳ (30), ಈತನ ಪತ್ನಿ ರಾಖಿ (25) ಆತ್ಮಹತ್ಯೆಗೆ ಶರಣಾದ ನವ ವಿವಾಹಿತ ಜೋಡಿ. ಊರಿಗೆ ಹೋಗಿದ್ದ ಕುಟುಂಬಸ್ಥರು ಬುಧವಾರ ಬೆಳಗಿನ ಜಾವ ಮನೆಗೆ ಬಂದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.ಸಣ್ಣ-ಪುಟ್ಟ ಜಗಳ ಕಾರಣವೇ?:

ಕಳೆದ 4 ವರ್ಷಗಳಿಂದ ಮನೋಜಕುಮಾರ ಮತ್ತು ರಾಖಿ ಪ್ರೀತಿಸುತ್ತಿದ್ದರು. ನಂತರ ನಾಲ್ಕು ತಿಂಗಳ ಹಿಂದಷ್ಟೆ ತಮ್ಮ ಕುಟುಂಬದವರ ಅನುಮತಿಯೊಂದಿಗೆ ಅದ್ಧೂರಿಯಾಗಿ ರಿಸೆಪ್ಷನ್‌ ಮಾಡಿಕೊಂಡು ಕುಟುಂಬ ನಡೆಸುತ್ತಿದ್ದರು. ಕೆಲ ದಿನಗಳಿಂದ ದಂಪತಿ ನಡುವೆ ಸಣ್ಣ ಪುಟ್ಟ ಜಗಳ ನಡೆದಿದ್ದವು. ಹೇಳಿಕೊಳ್ಳುವಂತ ತಕರಾರು ಏನೂ ಇರಲಿಲ್ಲ ಎನ್ನಲಾಗಿದೆ.

ಆದರೆ, ಮಂಗಳವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಇಬ್ಬರ ನಡುವಿನ ಜಗಳ ತಾರಕಕ್ಕೇರಿತ್ತು ಎನ್ನಲಾಗಿದೆ. ಬಳಿಕ ಮನೋಜ್‌ ಚಿಕ್ಕಪ್ಪ ಮನೆಗೆ ಬಂದು ಇಬ್ಬರಿಗೂ ಸಮಾಧಾನಪಡಿಸಿದ್ದರು. ಅಲ್ಲದೇ ರಾತ್ರಿ ಮುಂದೆ ಕುಳಿತು ಊಟ ಮಾಡಿಸಿ ಹೋಗಿದ್ದರು. ಆದ್ರೆ ತಡರಾತ್ರಿ ಇಬ್ಬರ ನಡುವೆ ಅದೇನಾಯಿತೋ ಗೊತ್ತಿಲ್ಲ. ಬೆಳಗ್ಗೆ ಕುಟುಂಬಸ್ಥರು ಮನೆಗೆ ವಾಪಸಾದಾಗ ಕೋಣೆಯಲ್ಲಿ ಇಬ್ಬರೂ ಶವವಾಗಿ ಪತ್ತೆಯಾಗಿದ್ದಾರೆ. ಹಗ್ಗ ಕಟ್‌ ಆಗಿ ಮನೋಜ್‌ ಶವ ಕೆಳಗೆ ಬಿದ್ದಿದ್ದರೆ, ರಾಖಿ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮುಂದುವರಿದ ತನಿಖೆ:

ಮನೋಜಕುಮಾರ ಹಾಗೂ ರಾಖಿ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಧಾವಿಸಿದ ಜಲನಗರ ಠಾಣೆ ಪೊಲೀಸರು ಆತ್ಮಹತ್ಯೆಗೆ ಕಾರಣ ಏನಿರಬಹುದು ಎಂಬುದನ್ನು ಹುಡುಕುತ್ತಿದ್ದಾರೆ. ಪೊಲೀಸರ ತಂಡ ನೆರೆಹೊರೆಯವರು ಹಾಗೂ ಸಂಬಂಧಿಕರ ಬಳಿ ಮಾಹಿತಿ ಕಲೆಹಾಕುತ್ತಿದೆ. ಘಟನೆ ಕುರಿತು ಜಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿರೋಧದ ನಡುವೆ ಮದುವೆ:

ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮನೋಜಕುಮಾರ ಹಾಗೂ ರಾಖಿ ಕಳೆದ 4 ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರ ಜಾತಿ ಬೇರೆ ಬೇರೆಯಾಗಿದ್ದರಿಂದ ಕುಟುಂಬಸ್ಥರ ವಿರೋಧದ ನಡುವೆಯೂ ಕಳೆದ 2 ವರ್ಷಗಳ ಹಿಂದೆ ಸಬ್‌ರಿಜಿಸ್ಟರ್‌ ಮದುವೆಯಾಗಿದ್ದರು. ಆದರೆ 4 ತಿಂಗಳ ಹಿಂದೆ ಕುಟುಂಬಸ್ಥರ ಮನವೊಲಿಕೆ ಮಾಡಿ ಅಧಿಕೃತ ಸಂಸಾರಕ್ಕೆ ಕಾಲಿಟ್ಟಿದ್ದರು. ಅದ್ಧೂರಿಯಾಗಿ ರಿಸೆಪ್ಷನ್‌ ಕೂಡ ಮಾಡಿಕೊಂಡು ಬಂಧು-ಬಳಗಕ್ಕೆ ಊಟ ಹಾಕಿಸಿದ್ದರು.

ಸೋಷಿಯಲ್‌ ಮೀಡಿಯಾದಲ್ಲೂ ಆಕ್ಟಿವ್‌:

ಇಬ್ಬರ ನಡುವೆ ಪ್ರೀತಿ ಯಾವ ಮಟ್ಟಿಗೆ ಇತ್ತೆಂದರೆ ಇಬ್ಬರೂ ಡಬ್‌ಸ್ಮಾಶ್‌, ರೀಲ್ಸ್‌ಗಳನ್ನು ಮಾಡಿ ಅಪ್ಲೋಡ್‌ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ಆಕ್ಟಿವಾಗಿದ್ದರು. ಲವ್‌ ಸಾಂಗ್‌ಗಳಿಗೆ ಡಾನ್ಸ್‌ ಮಾಡಿ ರೀಲ್ಸ್‌ ಮಾಡುತ್ತಿದ್ದರು. ಇನ್‌ಸ್ಟಾಗ್ರಾಂ, ಫೇಸ್ಬುಕ್‌ ಸೇರಿದಂತೆ ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ವಿಡಿಯೋಗಳನ್ನು ಅಪ್ಲೋಡ್‌ ಮಾಡುತ್ತಿದ್ದರು. ಈ ಜೋಡಿ ಸಾವಿಗೆ ಶರಣಾಗಿರೋದು ಅಚ್ಚರಿ ಮೂಡಿಸಿದೆ.

Share this article