ಬಿ.ಎಚ್.ಎಂ.ಅಮರನಾಥ ಶಾಸ್ತ್ರಿ
ಎಮ್ಮಿಗನೂರು ಗ್ರಾಮದ ಪಬ್ಲಿಕ್ ಶಾಲೆ, ತಳವಾರಪೇಟೆಯ ಮಲ್ಲಿಕಾರ್ಜುನ ದೇಗುಲದ ಆವರಣ, ಕೆಇಬಿ ಬಳಿ ಹಾಗೂ ಸೂಗೂರು ರಸ್ತೆ ಬಳಿಯ ಘಟಕ ಸೇರಿ ಒಟ್ಟಾರೆ ನಾಲ್ಕು ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಇವುಗಳಲ್ಲಿ ಸೂಗೂರು ರಸ್ತೆ ಬಳಿಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಹೊರತುಪಡಿಸಿ ಉಳಿದ ಮೂರು ಘಟಕಗಳು ನಿರ್ವಹಣೆಯ ಕೊರತೆಯಿಂದಾಗಿ ಕೆಟ್ಟು ನಿಂತಿವೆ.
ಖಾಸಗಿ ನೀರಿನ ಘಟಕಗಳಿಗೆ ಮೊರೆ:ಗ್ರಾಮದಲ್ಲಿ ಸರ್ಕಾರಿ ಅನುದಾನದಲ್ಲಿ ನಿರ್ಮಿಸಲಾದ ಮೂರು ಶುದ್ಧ ಕುಡಿವ ನೀರಿನ ಘಟಕಗಳು ಕೆಟ್ಟು ನಿಂತಿರುವ ಪರಿಣಾಮ ಅನಿವಾರ್ಯವಾಗಿ ಜನರು ಖಾಸಗಿ ನೀರಿನ ಘಟಕಗಳಿಗೆ ತೆರಳಿ ಹೆಚ್ಚು ಹಣ ನೀಡಿ ನೀರನ್ನು ಸಂಗ್ರಹಿಸುವ ಸಂದಿಗ್ಧ ಸ್ಥಿತಿಗೆ ಸಿಲುಕಿದ್ದಾರೆ. ಈ ಕುರಿತು ಗ್ರಾಪಂ ಸದಸ್ಯರು, ಅಧಿಕಾರಿಗಳ ಗಮನಕ್ಕೆ ತಂದು ಶುದ್ಧ ನೀರಿನ ಘಟಕಗಳ ದುರಸ್ತಿಗೆ ಮುಂದಾಗುವಂತೆ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ.
ಗ್ರಾಮದಲ್ಲಿನ ಸರ್ಕಾರಿ ಶುದ್ಧ ಕುಡಿವ ನೀರಿನ ಘಟಕಗಳು ಕೆಟ್ಟು ನಿಂತಿರುವ ಹಿನ್ನೆಲೆ ಖಾಸಗಿಯವರಿಗೆ ಹೆಚ್ಚು ಹಣ ನೀಡಿ ನೀರನ್ನು ಖರೀದಿಸುವ ಸ್ಥಿತಿ ಬಂದೊದಗಿದೆ. ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಘಟಕಗಳ ದುರಸ್ತಿಗೆ ಮುಂದಾಗುವ ಮೂಲಕ ಗ್ರಾಮಸ್ಥರಿಗೆ ಅನುಕೂಲತೆ ಕಲ್ಪಿಸಿ ಕೊಡಬೇಕು ಎನ್ನುತ್ತಾರೆ ಎಮ್ಮಿಗನೂರು ಗ್ರಾಮಸ್ಥ ಬಸವರಾಜ್.