ಕನ್ನಡಪ್ರಭ ವಾರ್ತೆ ಮೈಸೂರು
ಜುಲೈ 3 ರಿಂದ ಆರಂಭಗೊಂಡಿರುವ ಈ ಉತ್ಸವವು ಜುಲೈ 12 ರವರೆಗೆ ನಡೆಯಲಿದ್ದು, ಗುಜರಾತ್ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿರುವ ಸುಮಾರು 100 ಹೆಚ್ಚು ಕರಕುಶಲ ಕಲಾವಿದರು ತಮ್ಮ ವೈವಿಧ್ಯಮಯ ಹಾಗೂ ಅಪರೂಪದ ಕೈಮಗ್ಗ, ಕರಕುಶಲ ಮತ್ತು ಸಾಂಪ್ರದಾಯಿಕ ಉತ್ಪನ್ನಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ಇಟ್ಟಿದ್ದಾರೆ.
ಪ್ರದರ್ಶನದಲ್ಲಿ ಕುಚ್ಚ್ ಕಸೂತಿ, ಕೈಮಗ್ಗ ವಸ್ತ್ರಗಳು, ಸಾಂಪ್ರದಾಯಿಕ ಆಭರಣಗಳು, ಗೃಹಾಲಂಕಾರ ವಸ್ತುಗಳು, ಪಟೋಲಾ ಸೀರೆಗಳು, ಮಣಿಗಳ ಕಲಾಕೃತಿಗಳು ಸೇರಿದಂತೆ ಅನೇಕ ವಿಶಿಷ್ಟ ಕರಕುಶಲ ಉತ್ಪನ್ನಗಳು ಸಾರ್ವಜನಿಕರ ಗಮನ ಸೆಳೆಯುತ್ತಿವೆ. ಪ್ರತಿಯೊಂದು ಮಳಿಗೆಯೂ ಗುಜರಾತ್ ನ ಶ್ರೀಮಂತ ಸಂಸ್ಕೃತಿ ಹಾಗೂ ಕಲಾ ಪರಂಪರೆಯನ್ನು ಪ್ರತಿಬಿಂಬಿಸುತ್ತಿದೆ.ಈ ಉತ್ಸವದ ಪ್ರಮುಖ ಆಕರ್ಷಣೆಯಾಗಿ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಕರಕುಶಲ ಕಲಾವಿದರು ನೇರ ಪ್ರದರ್ಶನ (ಲೈವ್ ಡೆಮೊ) ನೀಡುತ್ತಿದ್ದು, ಕಲಾಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ವಗೇಲಾ ಮಂಜುಲಾಬೆನ್ ಅವರಿಂದ ಕುಚ್ಚ್ ಕಸೂತಿ ಕಲೆಯ ನೇರ ಪ್ರದರ್ಶನ, ಮೊಹಮ್ಮದ್ ಜುಬೇರ್ ಅವರಿಂದ ಸಾಂಪ್ರದಾಯಿಕ ಮಶ್ರೂ ಸಿಲ್ಕ್ ಹಾಗೂ ಹತ್ತಿ ನೇಯ್ಗೆ ಪ್ರದರ್ಶನ, ಕಮಲ್ ಭಟ್ ಅವರಿಂದ ಅಪರೂಪದ ನೇಲ್ ಆರ್ಟ್, ಮೆಹಜಾಜಾಬೆನ್ ಪಟೇಲ್ ಅವರಿಂದ ಸಾಂಪ್ರದಾಯಿಕ ಮಣಿಗಳ ಕಲಾಕೃತಿಗಳ ಪ್ರದರ್ಶನ, ಜಿತೇಂದ್ರ ಚೌಹಾಣ್ ಅವರಿಂದ ಗುಜರಾತ್ ನ ಹೆಮ್ಮೆಯ ಪಟೋಲಾ ಸೀರೆಗಳ ಪ್ರದರ್ಶನ ಹಾಗೂ ಮಾರಾಟ ವಿಶೇಷ ಆಕರ್ಷಣೆಯಾಗಿವೆ.
ಈ ಉತ್ಸವವು ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಮಾತ್ರ ಸೀಮಿತವಾಗದೆ, ಗುಜರಾತ್ ನ ಶ್ರೀಮಂತ ಸಂಸ್ಕೃತಿ, ಕಲೆ ಹಾಗೂ ಪರಂಪರೆಯನ್ನು ಮೈಸೂರಿನ ಜನರಿಗೆ ಪರಿಚಯಿಸುವ ವೇದಿಕೆಯಾಗಿದ್ದು, ಕರಕುಶಲ ಕಲಾವಿದರಿಗೆ ಉತ್ತಮ ವ್ಯಾಪಾರ ಅವಕಾಶವನ್ನು ಕಲ್ಪಿಸಿದೆ.
-- ಬಾಕ್ಸ್-
ಇಂಡೆಕ್ಸ್ಟ್-ಸಿ ಅಧಿಕಾರಿ ಡಾ. ಸ್ನೇಹಲ್ ಮಕ್ವಾನಾ ಮಾತನಾಡಿ, 2016ರಿಂದ ಪ್ರತಿವರ್ಷ ಜೆಎಸ್‌ಎಸ್ ಮೈಸೂರು ಅರ್ಬನ್ ಹಾತ್ ನಲ್ಲಿ ಗುಜರಾತ್ ಕರಕುಶಲ ಉತ್ಸವವನ್ನು ಆಯೋಜಿಸುತ್ತಾ ಬಂದಿದ್ದೇವೆ. ಆದರೆ, 2026ರ ಉತ್ಸವವು ಇದುವರೆಗಿನ ಅತ್ಯಂತ ಯಶಸ್ವಿ ಉತ್ಸವವಾಗಿದೆ. ಮೈಸೂರಿನ ಜನರಿಂದ ದೊರೆತ ಅಭೂತಪೂರ್ವ ಬೆಂಬಲದಿಂದ ಎಲ್ಲಾ ಕರಕುಶಲ ಕಲಾವಿದರೂ ಉತ್ತಮ ವ್ಯಾಪಾರ ನಡೆಸಿದ್ದು, ಅತ್ಯಂತ ಸಂತೋಷ ವ್ಯಕ್ತಪಡಿಸಿದ್ದಾರೆ. ಈ ಉತ್ಸವವನ್ನು ಯಶಸ್ವಿಗೊಳಿಸಿದ ಜೆಎಸ್ಎಸ್ ಮಹಾವಿದ್ಯಾಪೀಠ, ಜೆಎಸ್‌ಎಸ್ ಮೈಸೂರು ಅರ್ಬನ್ ಹಾತ್ ಹಾಗೂ ಮೈಸೂರಿನ ನಾಗರಿಕರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.