ತನ್ನದೇ ಅಂಗಡಿಲಿ ಕದ್ದು ಸಿಕ್ಕಿಬಿದ್ದ ಮಾಲೀಕ...!

KannadaprabhaNewsNetwork |  
Published : Jul 19, 2026, 04:15 AM IST
ತನ್ನದೇ ಅಂಗಡಿಯಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದ ಮಾಲೀಕ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ಬಂಗಾರದ ಅಂಗಡಿಯಲ್ಲಿ ಭಾರೀ ಕಳ್ಳತನವಾಗಿದೆ ಎಂದು ಪೊಲೀಸರಿಗೆ ದೂರು ನೀಡಿ ಕಳ್ಳತನದ ನಾಟಕವಾಡಿದ್ದ ಅಂಗಡಿ ಮಾಲೀಕನನ್ನೇ ಖಡೇಬಜಾರ್ ಪೊಲೀಸರು ಬಂಧಿಸಿರುವ ಅಪರೂಪದ ಘಟನೆ ಬೆಳಗಾವಿ ನಗರದಲ್ಲಿ ಬೆಳಕಿಗೆ ಬಂದಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬಂಗಾರದ ಅಂಗಡಿಯಲ್ಲಿ ಭಾರೀ ಕಳ್ಳತನವಾಗಿದೆ ಎಂದು ಪೊಲೀಸರಿಗೆ ದೂರು ನೀಡಿ ಕಳ್ಳತನದ ನಾಟಕವಾಡಿದ್ದ ಅಂಗಡಿ ಮಾಲೀಕನನ್ನೇ ಖಡೇಬಜಾರ್ ಪೊಲೀಸರು ಬಂಧಿಸಿರುವ ಅಪರೂಪದ ಘಟನೆ ಬೆಳಗಾವಿ ನಗರದಲ್ಲಿ ಬೆಳಕಿಗೆ ಬಂದಿದೆ.

ಆರಂಭದಲ್ಲಿ ದುಷ್ಕರ್ಮಿಗಳು ಅಂಗಡಿಗೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿದ್ದಾರೆ ಎಂಬ ರೀತಿಯಲ್ಲಿ ಪ್ರಕರಣ ದಾಖಲಾಗಿದ್ದರೂ, ಸೂಕ್ಷ್ಮ ತನಿಖೆ ನಡೆಸಿದ ಪೊಲೀಸರು ದೂರುದಾರನೇ ಕಳ್ಳತನದ ಕಥೆಯ ಸೂತ್ರಧಾರ ಎಂಬುದನ್ನು ಪತ್ತೆಹಚ್ಚಿದ್ದಾರೆ. ಆರೋಪಿಯಿಂದ ಒಟ್ಟು ₹65.95 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ಆಭರಣ, ನಗದು ಹಾಗೂ ದ್ವಿಚಕ್ರ ವಾಹನವನ್ನು ಜಪ್ತಿ ಮಾಡಿದ್ದಾರೆ. ತಿಳಕವಾಡಿಯ ಸಾವರ್ಕರ್ ರಸ್ತೆಯ ನಿವಾಸಿ ಕೃಷ್ಣಾನಂದ ವಿಶ್ವನಾಥ ವೇರ್ಣೇಕರ್ ಬಂಧಿತ ಆರೋಪಿ. ಈತ ರಾಮದೇವ ಗಲ್ಲಿಯ ವಿ.ಪಿ.ವೇರ್ಣೇಕರ್ ಆ್ಯಂಡ್ ಸನ್ಸ್ ಬಂಗಾರದ ಅಂಗಡಿಯ ಮಾಲೀಕ.

ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ₹45 ಸಾವಿರ ಮೌಲ್ಯದ ದ್ವಿಚಕ್ರ ವಾಹನ, 519.8 ಗ್ರಾಂ ತೂಕದ ₹62.60 ಲಕ್ಷ ಮೌಲ್ಯದ ಚಿನ್ನಾಭರಣ, 31 ಗ್ರಾಂ ತೂಕದ ₹6 ಸಾವಿರ ಮೌಲ್ಯದ ಬೆಳ್ಳಿ ಆಭರಣ ಹಾಗೂ ₹2.83 ಲಕ್ಷ ನಗದು ಸೇರಿ ಒಟ್ಟು ₹65.95 ಲಕ್ಷ ಮೌಲ್ಯದ ಸ್ವತ್ತನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣವನ್ನು ಭೇದಿಸುವಲ್ಲಿ ಖಡೇಬಜಾರ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಎಂ.ಕೆ.ಧಾಮಣ್ಣವರ ನೇತೃತ್ವದ ತಂಡ ಪ್ರಮುಖ ಪಾತ್ರ ವಹಿಸಿದೆ. ಪೊಲೀಸ್ ಸಿಬ್ಬಂದಿ ಹಾಗೂ ತಾಂತ್ರಿಕ ವಿಭಾಗದ ಸಹಕಾರದಿಂದ ಅಲ್ಪಾವಧಿಯಲ್ಲೇ ಪ್ರಕರಣವನ್ನು ಭೇದಿಸಿ ಆರೋಪಿಯನ್ನು ಬಂಧಿಸಲಾಗಿದೆ. ಈ ಯಶಸ್ವಿ ಕಾರ್ಯಾಚರಣೆಗೆ ಪೊಲೀಸ್ ಆಯುಕ್ತರು ತನಿಖಾ ತಂಡವನ್ನು ಅಭಿನಂದಿಸಿದ್ದಾರೆ.

ಈ ಪ್ರಕರಣವು ಸುಳ್ಳು ದೂರು ನೀಡಿ ಪೊಲೀಸರನ್ನು ದಿಕ್ಕುತಪ್ಪಿಸಲು ಯತ್ನಿಸುವವರ ವಿರುದ್ಧ ಕಾನೂನು ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

-------

ಬಾಕ್ಸ್

ಪ್ರಕರಣದಲ್ಲಿ ನಡೆದಿದ್ದೇನು...?

ಜು.16ರ ರಾತ್ರಿ ದುಷ್ಕರ್ಮಿಗಳು ಅಂಗಡಿಯ ಬಾಗಿಲು ಮುರಿದು ಒಳನುಗ್ಗಿ ಚಿನ್ನಾಭರಣ, ಬೆಳ್ಳಿ ಆಭರಣ ಹಾಗೂ ನಗದು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ಕೃಷ್ಣಾನಂದ ವಿಶ್ವನಾಥ ವೇರ್ಣೇಕರ್‌ ಖಡೇಬಜಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಮೇರೆಗೆ ಪೊಲೀಸರು ಬಿಎನ್‌ಎಸ್-2023ರ ಕಲಂ 331(4) ಹಾಗೂ 305(ಎ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

ಆರಂಭದಲ್ಲಿ ಇದು ಸಾಮಾನ್ಯ ಕಳ್ಳತನದಂತೆ ಕಂಡುಬಂದರೂ, ಘಟನಾ ಸ್ಥಳ ಪರಿಶೀಲನೆ ವೇಳೆ ಕೆಲವು ಅಂಶಗಳು ಪೊಲೀಸರಿಗೆ ಅನುಮಾನ ಹುಟ್ಟಿಸಿದ್ದವು. ಅಂಗಡಿಯ ಬಾಗಿಲು ಮುರಿದ ರೀತಿ, ಕಳ್ಳತನ ನಡೆದಿರುವ ಬಗ್ಗೆ ನೀಡಿದ ಮಾಹಿತಿ, ಸ್ಥಳದಲ್ಲಿದ್ದ ಸಾಕ್ಷ್ಯಗಳು ಹಾಗೂ ದೂರುದಾರನ ಹೇಳಿಕೆಯಲ್ಲಿ ಕಂಡುಬಂದ ವ್ಯತ್ಯಾಸಗಳು ತನಿಖಾಧಿಕಾರಿಗಳ ಗಮನ ಸೆಳೆದವು. ಹೀಗಾಗಿ, ಪೊಲೀಸರು ತಾಂತ್ರಿಕ ಸಾಕ್ಷ್ಯಗಳು, ಸಿಸಿಟಿವಿ ದೃಶ್ಯಗಳು ಹಾಗೂ ಇತರೆ ಮಾಹಿತಿಗಳನ್ನು ಆಧರಿಸಿ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದರು. ಬಳಿಕ, ತನಿಖೆಯ ದಿಕ್ಕು ಬದಲಾಗುತ್ತಿದ್ದಂತೆ ಪೊಲೀಸರು ದೂರುದಾರ ಕೃಷ್ಣಾನಂದ ವೇರ್ಣೇಕರ್‌ನನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಿದರು. ವಿಚಾರಣೆ ವೇಳೆ ಅಂಗಡಿಯಲ್ಲಿದ್ದ ಚಿನ್ನಾಭರಣ, ಬೆಳ್ಳಿ ಹಾಗೂ ನಗದನ್ನು ತಾವೇ ತೆಗೆದುಕೊಂಡು ತಮ್ಮ ಕೆಎ-22 ಇಡಬ್ಲ್ಯು-4822 ಸಂಖ್ಯೆಯ ದ್ವಿಚಕ್ರ ವಾಹನದಲ್ಲಿ ಸಾಗಿಸಿ, ನಂತರ ಕಳ್ಳತನ ನಡೆದಂತೆ ಪೊಲೀಸರಿಗೆ ಸುಳ್ಳು ದೂರು ನೀಡಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಮೂಲಕ ಕಳ್ಳತನ ಕಥೆಯ ಹಿಂದಿನ ನಿಜಾಂಶ ಹೊರಬಿದ್ದಿದೆ.------------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಳೆಯಾಗದಿದ್ದರೆ ತಾಲೂಕಿನಲ್ಲಿ ಕುಡಿಯುವ ನೀರಿಗೂ ತೊಂದರೆ
ಸ್ವಂತ ಕರ್ಚಿನಲ್ಲಿ ಕೆರೆಗೆ ನೀರು ಹರಿಸಿದ ಶಾಸಕ ಜಗದೀಶ ಗುಡಗುಂಟಿ