ಕನ್ನಡಪ್ರಭ ವಾರ್ತೆ ನಾಲತವಾಡ
ಬಿ-ಖಾತೆಯ ಉತಾರೆ ನೀಡುವಂತೆ ಆಗ್ರಹಿಸಿ ಪಟ್ಟಣದ ಜಗದೇವನಗರ ನಿವಾಸಿಗಳು ಬುಧವಾರ ಬೆಳಗ್ಗೆ ಪಟ್ಟಣ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಪಟ್ಟಣದ ಜಗದೇವ ನಗರದ ವಾರ್ಡ್ ನಂ.1 ಮತ್ತು 2 ನೇ ವಾರ್ಡ್‌ನಲ್ಲಿ ಸುಮಾರು ನೂರಾರು ಕುಟುಂಬಗಳು ವಾಸಿಸುತ್ತಿದ್ದು, ಸರ್ಕಾರ ಎ ಖಾತೆ ಮತ್ತು ಬಿ ಖಾತೆ ಮಾಡಿಸಿಕೊಳ್ಳಲು ಮೂರು ತಿಂಗಳ ಅವಕಾಶ ನೀಡಿದೆ. ಹೀಗಾಗಿ, ನಮಗೂ ಕೂಡ ಬಿ ಖಾತೆ ಉತಾರ ನೀಡಬೇಕು ಎಂದು ಆಗ್ರಹಿಸಿದರು. ಅದಕ್ಕಾಗಿ ಎಷ್ಟೋ ಸಲ ಕಚೇರಿಗೆ ಅಲೆದಾಡಿದರು ಅಧಿಕಾರಿಗಳು ಸಮರ್ಪಕವಾಗಿ ಯಾವದೇ ಮಾಹಿತಿಯನ್ನು ನೀಡುತ್ತಿಲ್ಲ. ಕಳೆದ 1985 ಮತ್ತು 86ರಲ್ಲಿ ಮಾಜಿ ಸಚಿವರಾದ ಜಗದೇವರಾವ ದೇಶಮುಖ ಹಾಗೂ ನಂತರದಲ್ಲಿ ಶಾಸಕರಾದ ಸಿ.ಎಸ್.ನಾಡಗೌಡ ಅಪ್ಪಾಜಿ ಅವರು ಬಡವರಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ಆಶ್ರಯ ಮನೆಗಳನ್ನು ಒದಗಿಸಿದ್ದಾರೆ. ಅವುಗಳ ಹಕ್ಕುಪತ್ರ ಸಹ ನೀಡಿದ್ದರು. ಆದರೆ ಈಗ ಆ ಹಕ್ಕುಪತ್ರಗಳು ಬಹುತೇಕರ ಬಳಿ ಇಲ್ಲ. ಇನ್ನು ಕೆಲವರು ಆಶ್ರಯ ಮನೆಗಳನ್ನು ಬೇರೊಬ್ಬರಿಗೆ ಮಾರಾಟ ಮಾಡಿದ್ದು, ಇದಕ್ಕೆ ಹೇಗೆ ಹಕ್ಕುಪತ್ರ ಬರುತ್ತದೆ. ಮತ್ತು ಸಾಕಷ್ಟು ಜನರಿಗೆ ಹಕ್ಕುಪತ್ರಗಳನ್ನೇ ಕೊಟ್ಟಿಲ್ಲ ಎಂದು ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಮನವರಿಕೆ ಮಾಡಿದರು. ಆದರೂ ಸಹ ಅಧಿಕಾರಿಗಳು ಬಿ-ಖಾತೆ ಉತಾರ ಪೂರೈಸಲು ಮುಂದಾಗುತ್ತಿಲ್ಲ. ಸರ್ಕಾರ ಮೂರು ತಿಂಗಳ ಗಡುವು ನೀಡಿದೆ. ಅದರಲ್ಲಿ ಈಗಾಗಲೆ ಒಂದು ತಿಂಗಳು ಕಳೆದಿದ್ದು, ಕೂಡಲೇ ನಮಗೆ ಉತಾರ ಪೂರೈಸಬೇಕು. ಇಲ್ಲವಾದರೆ ನಾವು ಪಟ್ಟಣ ಪಂಚಾಯಿತಿ ಕಚೇರಿ ಮುಂದೆಯೇ ಧರಣಿ ಮುಂದುವರಿಸುವುದಾಗಿ ಅಧಿಕಾರಿಗಳಿಗೆ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಅಲ್ಲದೇ, ತಮ್ಮ ಸಮಸ್ಯೆಗಳನ್ನು ಬಗೆಹರಿಸುವಂತೆ ಪ್ರತಿಭಟನಾಕಾರರು ಮುಖ್ಯಾಧಿಕಾರಿಗೆ ಮನವಿಯನ್ನು ಸಲ್ಲಿಸಿದರು.ವಾಗ್ವಾದ:ಈ ವೇಳೆ ಮನವಿ ಸ್ವೀಕರಿಸಿದ ಮುಖ್ಯಾಧಿಕಾರಿ ಈರಣ್ಣ ಕೊಣ್ಣೂರ ಮಾತನಾಡಿ, ಹಕ್ಕುಪತ್ರ ಮತ್ತು ಖರೀದಿ ಪತ್ರ ಇಲ್ಲದಿದ್ದರೆ ಯಾವುದೇ ಖಾತೆಯ ಉತಾರ ನೀಡಲು ಬರುವುದಿಲ್ಲ. ಆದ್ದರಿಂದ ನಾವು ನಿಮಗೆ ಹಕ್ಕುಪತ್ರ ತೆಗೆದುಕೊಂಡು ಬರಲು ಹೇಳಿದ್ದೇವೆ ಎಂದರು. ಇದಕ್ಕೆ ಸಿಟ್ಟಾದ ಪ್ರತಿಭಟನಾಕಾರರು ಹಾಗಾದರೆ ತಾವು 40 ವರ್ಷಗಳಿಂದ ಕರ ವಸೂಲಿ ಯಾಕೆ ಮಾಡಿಕೊಂಡಿದ್ದೀರಿ ಎಂದು ಪ್ರಶ್ನಿಸಿದರು. ಅಧಿಕಾರಿಗಳಾದವರು ಸಂಬಂಧಪಟ್ಟ ಅಧಿಕಾರಿಗಳಿಂದ ಹಕ್ಕು ಪತ್ರ ತರೆಸಿಕೊಂಡು ಪರಿಶೀಲನೆ ಮಾಡಿ ನಮಗೆ ಉತಾರ ಪೂರೈಸಿ ಎಂದು ಅಧಿಕಾರಿ ವಿರುದ್ಧ ವಾಗ್ವಾದಕ್ಕಿಳಿದರು. ವಿಷಯ ವಿಕೋಪಕ್ಕೆ ಹೋಗುತಿದ್ದಂತೆ ಪ.ಪಂ ಉಪಾಧ್ಯಕ್ಷ ಬಸವರಾಜ ಗಂಗನಗೌಡರ ಪ್ರತಿಭಟನಾಕಾರರ ಮನವೊಲಿಕೆಗೆ ಮುಂದಾದರು. ಇಂಧು ಸಭೆ ಹಮ್ಮಿಕೊಂಡಿದ್ದು, ಸಭೆಯಲ್ಲಿ ಇದರ ಬಗ್ಗೆ ಚರ್ಚೆ ಮಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತೇವೆ. ಅದಕ್ಕೆ ಸ್ವಲ್ಪ ಕಾಲಾವಕಾಶ ನೀಡಿ. ಏನಾದರು ಆಗದಿದ್ದರೆ ಮುಂದಿನ ದಿನಗಳಲ್ಲಿ ನಾನು ಕೂಡ ನಿಮ್ಮ ಜೊತೆ ಹೋರಾಟದಲ್ಲಿ ಭಾಗಿಯಾಗುತ್ತೇನೆ ಎಂದು ಭರವಸೆ ನೀಡಿದರು. ಬಳಿಕ, ಪ್ರತಿಭಟನಾಕಾರರು ಪ್ರತಿಭಟನೆಯನ್ನು ಹಿಂಪಡೆದು ಶೀಘ್ರ ಬಿ-ಖಾತೆ ಉತಾರ ಪೂರೈಸಬೇಕು ಎಂದು ಮನವಿ ಪತ್ರ ಸಲ್ಲಿಸಿದರು.ಈ ವೇಳೆ ಯುವಜನ ಸೇನೆ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ವಾಲಿ, ಪ.ಪಂ ಮಾಜಿ ಉಪಾಧ್ಯಕ್ಷ ವೀರೇಶ ಚಲವಾದಿ, ನಿವಾಸಿಗಳಾದ ಬಾಬು ತೆಗ್ಗಿನಮನಿ, ಗುರು ತಂಗಡಗಿ ಸೇರಿದಂತೆ ನಿವಾಸಿಗಳು ಇದ್ದರು.