ಶಿವಮೊಗ್ಗ: ನಗರದ ಪ್ರಜ್ಞಾ ಎಜುಕೇಷನ್ ಟ್ರಸ್ಟ್‌ನಿಂದ ಮಾ.23ರಂದು ಸಂಜೆ 5.30ಕ್ಕೆ ಪೇಸ್ ಕಾಲೇಜು ಆವರಣದಲ್ಲಿರುವ ಜಯಲಕ್ಷ್ಮೀ ಈಶ್ವರಪ್ಪ ಕನ್ವನ್ಷೆನ್ ಹಾಲ್‌ನಲ್ಲಿ ಪೇಸ್ ಇಂಟರ್‌ನ್ಯಾಷನಲ್ ಸ್ಕೂಲ್‌ನ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಪ್ರಜ್ಞಾ ಎಜುಕೇಷನ್ ಟ್ರಸ್ಟ್‌ನ ಅಧ್ಯಕ್ಷ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ತಿಳಿಸಿದರು.ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪೇಸ್ ಪಿಯು ಕಾಲೇಜು ಶಿವಮೊಗ್ಗದ ಅಗ್ರ ಗಣ್ಯ ಪದವಿ ಪೂರ್ವ ಕಾಲೇಜಿನಲ್ಲಿ ಒಂದಾಗಿದ್ದು, ಇವರದೇ ಆಶ್ರಯದಲ್ಲಿ ತಲೆ ಎತ್ತುತ್ತಿರುವ ಮತ್ತೊಂದು ಶಿಕ್ಷಣ ಸಂಸ್ಥೆ ಪೇಸ್ ಇಂಟರ್‌ನ್ಯಾಷನಲ್ ಸ್ಕೂಲ್ ಆಗಿದೆ. ಇಂದಿನ ಮಕ್ಕಳಿಗೆ 21ನೇ ಶತಮಾನಕ್ಕೆ ಅಗತ್ಯವಿರುವ ಕೌಶಲ್ಯಗಳ ಜೊತೆಗೆ ಸಂಸ್ಕಾರಯುತ, ಮೌಲ್ಯಾಯುತ ಮತ್ತು ಅತ್ಯುತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವ ದುರದೃಷ್ಟಿಯಿಂದ ಈ ವಸತಿ ಶಾಲೆ ಪ್ರಾರಂಭಿಸಲಾಗುತ್ತಿದೆ ಎಂದರು.ಶಾಲೆಯ ಉದ್ಘಾಟನೆಯನ್ನು ಮೂಡಬಿದ್ರೆಯ ಪ್ರತಿಷ್ಠಿತ ಆಳ್ವಾಸ್ ಎಜುಕೇಷನ್ ಫೌಂಡೇಶನ್‌ನ ಸಂಸ್ಥಾಪಕರಾದ ಡಾ.ಎಂ.ಮೋಹನ್ ಆಳ್ವಾ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಪ್ರಜ್ಞಾ ಟ್ರಸ್ಟ್‌ನ ಅಧ್ಯಕ್ಷರಾದ ಕೆ.ಎಸ್.ಈಶ್ವರಪ್ಪ ವಹಿಸಲಿದ್ದು, ಉಪಾಧ್ಯಕ್ಷರಾದ ಪ್ರೊ.ಎಚ್.ಆನಂದ್, ಕಾರ್ಯದರ್ಶಿ ಪ್ರೊ.ಬಿ.ಎನ್.ವಿಶ್ವನಾಥಯ್ಯ, ಖಜಾಂಚಿಗಳಾದ ಕೆ.ಈ.ಕಾಂತೇಶ್ ಮತ್ತು ಶಾಲೆಯ ಪ್ರಾಂಶುಪಾಲರಾದ ಎನ್.ಆರ್.ಪವನ್‌ಕುಮಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದರು.ಸಮಾರಂಭದ ಮುಖ್ಯ ಆಕರ್ಷಣೆಯಾಗಿ ಕರ್ನಾಟಕದ ವೈಭವಯುತ ಇತಿಹಾಸ ಮತ್ತು ಪರಂಪರೆಯನ್ನು ಸಾರುವ ಕರ್ನಾಟಕ ವೈಭವ ಎಂಬ ವಿನೂತನ ನೃತ್ಯಾರೂಪಕ ಕಾರ್ಯಕ್ರಮ ಆಯೋಜಿಸಲಾಗಿದ್ದು, ಖ್ಯಾತ ಭರತನಾಟ್ಯ ಕಲಾವಿದರಾದ ಡಾ.ಸಂಜಯ್‌ಶಾಂತರಾಮರವರ ನೇತೃತ್ವದ ಶಿವಪ್ರಿಯಾ ನಾಟ್ಯಶಾಲೆಯ ೪೦ ಕಲಾವಿದರು ಈ ನೃತ್ಯ ಪ್ರದರ್ಶನ ನೀಡಲಿದ್ದಾರೆ ಎಂದು ತಿಳಿಸಿದರು.ಜನಮನ್ನಣೆ ಗಳಿಸಿದ ಈ ನೃತ್ಯ ರೂಪಕ ದೇಶ ವಿದೇಶಗಳಲ್ಲಿ ಪ್ರದರ್ಶಿಸಲ್ಪಟ್ಟಿದ್ದು, ಶಿವಮೊಗ್ಗದ ಜನತೆ ಕುಟುಂಬ ಸಮೇತರಾಗಿ ಆಗಮಿಸಿ ಕಾರ್ಯಕ್ರಮದ ಮೆರಗು ಹೆಚ್ಚಿಸಬೇಕು. ಎಲ್ಲರಿಗೂ ನೆರವಾಗುವಂತೆ ಕಾರ್ಯಕ್ರಮದ ನಂತರ ಸೂಕ್ತ ಬಸ್ ವ್ಯವಸ್ಥೆ ಮತ್ತು ಕಾರ್ಯಕ್ರಮದಲ್ಲಿ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ವಿವರಿಸಿದರು.ಈ ಶಾಲೆಯು 2025-26ನೇ ಶೈಕ್ಷಣಿಕ ಸಾಲಿನಿಂದ ಪ್ರಾರಂಭವಾಗಲಿದೆ. ನರ್ಸರಿಯಿಂದ 8ನೇ ತರಗತಿಯವರೆಗೆ ದಾಖಲಾತಿಯನ್ನು ಪ್ರಾರಂಭಿಸಲಾಗಿದ್ದು, ಶಿಕ್ಷಣ ಇಲಾಖೆಯಿಂದ ಸೂಕ್ತ ಅನುಮತಿಯನ್ನು ಪಡೆಯಲಾಗಿದೆ. ಶಾಲೆಯ ಶಿಕ್ಷಣ ನೇಮಕಾತಿ ಪ್ರಕ್ರಿಯೆ ಕೂಡ ಪೂರ್ಣಗೊಂಡಿದ್ದು, ನುರಿತ ಮತ್ತು ಅನುಭವಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಶಾಲೆಗೆ ಅಗತ್ಯವಿರುವ ಎಲ್ಲಾ ಮೂಲಸೌಕರ್ಯಗಳನ್ನು ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.ಮಕ್ಕಳಿಗೆ ಭೌದ್ಧಿಕ, ನೈತಿಕ ಹಾಗೂ ಆಧ್ಯಾತ್ಮಿಕ ನೆಲೆಕಟ್ಟಿನಲ್ಲಿ ಸರ್ವಾಂಗೀಣ ಶಿಕ್ಷಣ ನೀಡುವ ನಿಟ್ಟಿನಲ್ಲಿ ಹಲವಾರು ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ- 2020 ರನ್ವಯ ಸಾಮರ್ಥ್ಯಾಧಾರಿತ ಮತ್ತು ಕೌಶಲ್ಯಾಧಾರಿತ ಶಿಕ್ಷಣಕ್ಕೆ ಶಾಲೆಯಲ್ಲಿ ಹೆಚ್ಚಿನ ಒತ್ತು ನೀಡಲಾಗುವುದು. ಮಕ್ಕಳ ಭೌದ್ಧಿಕ ಬುದ್ಧಿಮತ್ತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಒಲಿಂಪಿಯಾಡ್ ಪರೀಕ್ಷೆಗಳು, ಕೋಡಿಂಗ್ ತರಬೇತಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸೂಕ್ತ ಹಂತಗಳಲ್ಲಿ ತರಬೇತಿ, ಪಠ್ಯದ ಪರಿಣಾಮಕಾರಿ ಕಲಿಕೆಗಾಗಿ ಪ್ರತಿಷ್ಠಿತ ಕ್ರಿಸಾಲಿಸ್ ಸಂಸ್ಥೆಯೊಂದಿಗೆ ಸಹಯೋಗ, ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ, ಅಬಕಾಸ್, ಚೆಸ್ ತರಬೇತಿ, ಸಹಪಠ್ಯ ಚಟುವಟಿಕೆಗಳು, ಆಟೋಟ ಸ್ಪರ್ಧೆಗಳು ದೇಶೀಯ ಆಟಗಳಿಗೆ ಹೆಚ್ಚಿನ ಪ್ರಾಧ್ಯಾನ್ಯತೆ, ಸಮಾಜಮುಖ್ಯ ಕಾರ್ಯಕ್ರಮಗಳು, ಭಾರತದ ಪರಂಪರೆಯನ್ನು ಮಕ್ಕಳಿಗೆ ಪರಿಚಯಿಸುವ ನಿಟ್ಟಿನಲ್ಲಿ ಯೋಗ, ಭಗವದ್ಗೀತೆ, ಭಜನೆ, ಸಂಸ್ಕೃತ ತರಬೇತಿಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.ಪೂರ್ವ ಪ್ರಾಥಮಿಕ ಶಾಲಾ ಮಕ್ಕಳಿಗೆ ವಿಶೇಷವಾದ ಒಳಾಂಗಣ ಚಟುವಟಿಕೆ ಮತ್ತು ಆಟದ ಕೊಠಡಿಯನ್ನು ನಿರ್ಮಿಸಲಾಗಿದೆ. ಮಕ್ಕಳಲ್ಲಿ ಶಿಸ್ತು, ಸಂಯಮ ಬೆಳೆಸಿ ಭವಿಷ್ಯಕ್ಕೆ ಅಣಿಗೊಳಿಸುವ ಉದ್ದೇಶವನ್ನು ಹೊಂದಲಾಗಿದೆ.
ಮಲೆನಾಡಿನಲ್ಲಿ ರೈತರ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ವಿದ್ಯಾಭ್ಯಾಸವನ್ನು ಮೊಟಕುಗೊಳಿಸಬಾರದು, ಉನ್ನತ ಮಟ್ಟದ ಶಿಕ್ಷಣ ನೀಡಬೇಕು ಎನ್ನುವ ಉದ್ದೇಶದಿಂದ ಈ ಶಾಲೆ ಸ್ಥಾಪನೆಗೊಳಿಸುತ್ತಿದ್ದು, ಈಗಾಗಲೇ 90 ಜನ ನೋಂದಣಿ ಮಾಡಿಕೊಂಡಿದ್ದಾರೆ. ದುಡಿಮೆಗೊಸ್ಕರ ಈ ಶಾಲೆಯನ್ನು ಸ್ಥಾಪಿಸುತ್ತಿಲ್ಲ ಎಂದರು.ಪತ್ರಿಕಾಗೋಷ್ಠಿಯಲ್ಲಿ ಖಜಾಂಚಿ ಕೆ.ಈ.ಕಾಂತೇಶ್, ಪ್ರೊ.ಎಚ್.ಆನಂದ್, ಪ್ರೊ. ಬಿ.ಎನ್.ವಿಶ್ವನಾಥಯ್ಯ, ಪ್ರಾಂಶುಪಾಲ ಪವನ್‌ಕುಮಾರ್.ಕೆ.ಆರ್., ಡಾ.ಮೈತ್ರೇಯಿ ಆದಿತ್ಯ ಪ್ರಸಾದ್ ಇದ್ದರು.