ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯೆ ಬಲ್ಕಿಸ್ ಬಾನು ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನಪ್ರಿಯತೆಗೆ ಹೆದರಿ ಬಿಜೆಪಿ ಜೆಡಿಎಸ್ ಮೈತ್ರಿಕೂಟ ಅವರನ್ನು ಅಧಿಕಾರದಿಂದ ಕೆಳಗಿಸಲು ಷಡ್ಯಂತ್ರ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಶಿವಪ್ಪ ನಾಯಕ ವೃತ್ತದಲ್ಲಿ ಕರ್ನಾಟಕ ಶೋಷಿತ ವರ್ಗಗಳ ಮಹಾಒಕ್ಕೂಟದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರ ಮೇಲೆ ಸುಳ್ಳು ಆರೋಪ ಹೊರಿಸಲಾಗುತ್ತಿದೆ. ಈಗಾಗಲೇ ವಾಲ್ಮೀಕಿ ನಿಗಮದ ಹಗರಣ ತನಿಖೆಯ ಹಂತದಲ್ಲಿದೆ. ತಪ್ಪಿತಸ್ತರಿಗೆ ಶಿಕ್ಷೆಯಾಗಲಿದೆ. ಆದರೆ, ಸಿದ್ದರಾಮಯ್ಯನವರ ಆಡಳಿತಕ್ಕೆ ಹೆದರಿ, ಬಿಜೆಪಿಯವರು ಕುತಂತ್ರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಮೊದಲು ಬಿಜೆಪಿಯ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಪುತ್ರರ ಅಕ್ರಮ ಆಸ್ತಿಗಳ ಬಗ್ಗೆ ತನಿಖೆಯಾಗಲಿ. ರೈಸ್‌ಮಿಲ್ ಗುಮಾಸ್ತನಾದ ಯಡಿಯೂರಪ್ಪನವರ ಆಸ್ತಿ ಈಗ ಕೋಟ್ಯಾಂತರ ಆಗಿದೆ. ಅದು ದಲಿತರ ಹಿಂದುಳಿದವರ ಮತ್ತು ರಾಜ್ಯದ ದುರ್ಬಲ ವರ್ಗದವರ ಹಣ ಕಿಡಿಕಾರಿದರು.
ಹಿಂದುಳಿದ ವರ್ಗಗಳ ನಾಯಕ ಕಲಗೋಡು ರತ್ನಾಕರ್ ಮಾತನಾಡಿ, ಸಿದ್ದರಾಮಯ್ಯನವರನ್ನು ಮುಟ್ಟಲು ಹೋದರೆ ರಾಜ್ಯದ ಜನ ತಕ್ಕ ಪಾಠ ಕಲಿಸುತ್ತಾರೆ ಎಂದರು
ಐಟಿ ಮತ್ತು ಇಡಿ ದಾಳಿ ನಡೆಸಿ ಕಾಂಗ್ರೆಸ್ ನಾಯಕರನ್ನು ಬಗ್ಗು ಬಡೆಯಲು ಯತ್ನಿಸಲಾಗುತ್ತಿದೆ. ಕೇಂದ್ರ ಸರ್ಕಾರದ ವಿರುದ್ಧವು ಕೂಡ ದೇಶಾದ್ಯಂತ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಆರ್.ಪ್ರಸನ್ನ ಕುಮಾರ್, ಪ್ರಮುಖರಾದ ಎಸ್.ಕೆ.ಮರಿಯಪ್ಪ. ಕಲೀಮ್ ಪಾಷಾ ಅಲ್ತಾಫ್ ಪರ್ವೀಜ್ ಗಿರೀಶ್ ಶರತ್ ಮರಿಯಪ್ಪ. ತಂಗರಾಜ್. ಚಾವಡಿ ಲೋಕೇಶ್. ಚಂದ್ರ ಭೂಪಾಲ್ ,ನಾಜೀಮ ಚಿನ್ನಪ್ಪ ದೇವಿ ಕುಮಾರ್ ವಿಶ್ವನಾಥ್ ಕಾಶಿ ಡಾ.ಶ್ರೀನಿವಾಸ ಕರಿಯಣ್ಣ, ಜಿ.ಡಿ.ಮಂಜುನಾಥ್. ಪಾಲಾಕ್ಷಿ. ರಂಗನಾಥ್ ರೇಖಾ ರಂಗನಾಥ್. ನವಲೆ ಮಂಜುನಾಥ್ ನಾಗರಾಜ್ ಕಂಕಾರಿ, ಸ್ಟೆಲ್ಲಾ ಮಾರ್ಟಿನ್ ಮೊದಲಾದವರಿದ್ದರು.