ಅಕ್ಷರದ ಅಂಗಳದಲ್ಲಿ ಆಹಾರದ ಪಾಠ !

KannadaprabhaNewsNetwork |  
Published : Nov 25, 2024, 01:00 AM IST
11 | Kannada Prabha

ಸಾರಾಂಶ

ಸ್ನೇಹ ಶಾಲೆಯ ಆಟದ ಬಯಲಿನ ನೀರು ತುಂಬುವ ಅರ್ಧಭಾಗದಲ್ಲಿ ಹೊಸದಾಗಿ ಜೆಸಿಬಿ ಮತ್ತು ಟಿಲ್ಲರ್ ಬಳಸಿ ಸಮತಟ್ಟು ಮಾಡಿದ್ದ ಗದ್ದೆಯಲ್ಲಿ ಜುಲೈ ೧೦ರಂದು ಬೆಳಗ್ಗೆ ತೆನೆ (ನೇಜಿ) ನೆಡುವ ಸಂಭ್ರಮ ತುಂಬಿತ್ತು. ಶಿಕ್ಷಕರಿಗೂ ಮಕ್ಕಳಿಗೂ ಇದು ಅದ್ಭುತವಾದ ಅನುಭೂತಿ.

ಕನ್ನಡಪ್ರಭ ವಾರ್ತೆ ಸುಳ್ಯ

ಮರಗಿಡಗಳಿಂದ ತುಂಬಿದ ಸಹಜ ಅರಣ್ಯ ಮತ್ತು ಔಷಧೀಯ ಸಸ್ಯಗಳಿರುವುದರಿಂದ ‘ಹಸಿರು ಶಾಲೆ’ ಎಂದೇ ಗುರುತಿಸಲ್ಪಟ್ಟಿರುವ ಸುಳ್ಯದ ಸ್ನೇಹ ಶಾಲೆಯಲ್ಲಿ, ಭತ್ತದ ಗದ್ದೆ ಮಾಡಬೇಕೆಂಬ ಅಧ್ಯಕ್ಷರ ಕನಸು ಸಾಕಾರಗೊಂಡಿದೆ.

ಸ್ನೇಹ ಶಾಲೆಯ ಆಟದ ಬಯಲಿನ ನೀರು ತುಂಬುವ ಅರ್ಧಭಾಗದಲ್ಲಿ ಹೊಸದಾಗಿ ಜೆಸಿಬಿ ಮತ್ತು ಟಿಲ್ಲರ್ ಬಳಸಿ ಸಮತಟ್ಟು ಮಾಡಿದ್ದ ಗದ್ದೆಯಲ್ಲಿ ಜುಲೈ ೧೦ರಂದು ಬೆಳಗ್ಗೆ ತೆನೆ (ನೇಜಿ) ನೆಡುವ ಸಂಭ್ರಮ ತುಂಬಿತ್ತು. ಶಿಕ್ಷಕರಿಗೂ ಮಕ್ಕಳಿಗೂ ಇದು ಅದ್ಭುತವಾದ ಅನುಭೂತಿ. ಈವರೆಗೆ ಗದ್ದೆಗಿಳಿದು ಕೆಲಸ ಮಾಡಿದ ಅನುಭವ ಇದ್ದವರು ಒಬ್ಬರೂ ಇರಲಿಲ್ಲ. ಆದರೆ ಇಂತಹ ಒಂದು ಪ್ರಾಯೋಗಿಕ ಕೆಲಸದಲ್ಲಿ ಪಾಲ್ಗೊಳ್ಳುವ ಅಪೇಕ್ಷೆ ಕೆಸರುಗದ್ದೆ ಸಿದ್ಧವಾದಾಗಲೇ ಶಿಕ್ಷಕರಲ್ಲೂ ವಿದ್ಯಾರ್ಥಿಗಳಲ್ಲೂ ಮೂಡಿತ್ತು. ಹಾಗಾಗಿ ಕೆಸರುಗದ್ದೆಯಲ್ಲಿ ಮೊದಲಿಗೆ ಎಳೆಯ ಮಕ್ಕಳಾದಿಯಾಗಿ ಕುಣಿದು ಸಂಭ್ರಮಿಸಿದ್ದೇ ಸಂಭ್ರಮಿಸಿದ್ದು. ಬಳಿಕ ಎಲ್ಲ ಹಿರಿಯ ಮಕ್ಕಳಿಗೂ ಶಿಕ್ಷಕಿಯರಿಗೂ ನೇಜಿ ನೆಡುವ ಅವಕಾಶ ನೀಡಲಾಯಿತು.

ತುಂಬಾ ಕಷ್ಟವೆಂದು ಭಾವಿಸಿದ್ದ ನೇಜಿ ನೆಡುವ ಕೆಲಸ ಹಗುರಾಗಿ ಇಷ್ಟವಾಯಿತು. ಭತ್ತ ಬೆಳೆಸುವಲ್ಲಿ ನುರಿತವರಾದ ಗುಂಡ್ಯದ ನಿತ್ಯಾನಂದ ಗೌಡರೂ ಹಾಗೂ ಉಳಿಯ ಬಾಲಕೃಷ್ಣ ಗೌಡರು ಸ್ವತಃ ಗದ್ದೆಗಿಳಿದು ದಪ್ಪದ ಉದ್ದಕೋಲನ್ನು ಎಳೆದು ಕೆಸರನ್ನು ಸಮತಟ್ಟು ಮಾಡಿದರು. ಅವರಿಗೆ ಶಾಲಾ ನೌಕರರಾದ ನಾರಾಯಣ ಪೆರ್ಲ ಮತ್ತು ಸತೀಶ ತೋಡಿಕಾನ ಇವರು ಸಹಾಯ ಮಾಡಿದರು. ಅಂದು ಮನೆಗೆ ಮರಳಿದಾಕ್ಷಣ ಹೇಳಲು ಅನುಭವ ಕಥನದ ಬುತ್ತಿಯೇ ಮಕ್ಕಳಲ್ಲಿತ್ತು.

ಭತ್ತ ಕೊಯ್ಲಿನ ಖುಷಿ: ನವೆಂಬರ್ ೯ರಂದು ಬೆಳೆದು ನಿಂತ ಪೈರನ್ನು ಕಟಾವು ಮಾಡಲಾಯಿತು. ಈ ಕಾರ್ಯದಲ್ಲಿ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಅಲೆಟ್ಟಿ ಘಟಕದವರು ನೆರವು ನೀಡಿದರು. ಸ್ನೇಹ ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ತೆನೆಯನ್ನು ಹೊರುವ ಹಾಗೂ ಪಡಿಮಂಚಕ್ಕೆ ಸೂಡಿಗಳನ್ನು ಹೊಡೆದು ಭತ್ತ ಬೇರ್ಪಡಿಸುವ ಕೆಲಸದಲ್ಲಿ ಸಹಭಾಗಿಗಳಾದರು. ಇದೇ ಸಂದರ್ಭದಲ್ಲಿ ಹಿಂದಿನ ವಾರ ಕೊಯ್ದು ಮಾಡಿದ ಭತ್ತವನ್ನು ಕುಟ್ಟುವುದರ ಮೂಲಕ ಭತ್ತದಿಂದ ಅಕ್ಕಿಯನ್ನು ಬೇರ್ಪಡಿಸುವ ಪ್ರಕ್ರಿಯೆಯ ಪ್ರಾತ್ಯಕ್ಷಿಕೆಯನ್ನು ನೀಡಲಾಯಿತು. ಕಲ್ಲಿನಲ್ಲಿ ಮಾಡಿರುವ ಸಣ್ಣ ಹೊಂಡಕ್ಕೆ ಭತ್ತವನ್ನು ಸುರಿದು ಮೂರು ನಾಲ್ಕು ಮಂದಿ ಸರದಿಯಂತೆ ಒನಕೆಯಿಂದ ಕುಟ್ಟುತ್ತಿದ್ದ ಹಿರಿಯರ ಕೌಶಲವು ಅಚ್ಚರಿಗೊಳಿಸಿತು.

ಕಳೆದ ಎರಡು ದಶಕಗಳಲ್ಲಿ ಗದ್ದೆಗಳನ್ನು ಅಡಕೆ ತೋಟ ಮಾಡಿದ ಬಳಿಕ ಈಗ ಈ ಕೌಶಲ ಮರೆಯಾಗುತ್ತಿದೆ. ಅಲೆಟ್ಟಿಯ ಕೃಷಿಕ ಮಹಿಳೆಯರಿಗೂ ಭತ್ತ ಕುಟ್ಟಿದ ಅನುಭವ ಇಲ್ಲದೆ ದಶಕಗಳೇ ಕಳೆದಿದ್ದುವು. ಆದರೂ ಅವರು ಉತ್ಸಾಹದಿಂದಲೇ ಭತ್ತ ಕುಟ್ಟಿ ಅಕ್ಕಿ ತಯಾರಿಸಿ ಕೊಟ್ಟರು. ಸಹಕಾರ ನೀಡಿದ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯೆಯರಿಗೆ ಪುಸ್ತಕ ಸ್ಮರಣಿಕೆಯನ್ನು ಅಧ್ಯಕ್ಷರು ನೀಡಿದರು. ಹೀಗೆ ವಿದ್ಯಾರ್ಥಿಗಳಿಗೆ ನೇಜಿ ನೆಡುವಲ್ಲಿಂದ ಅಕ್ಕಿಯಾಗುವ ತನಕ ಎಲ್ಲ ಘಟ್ಟಗಳ ಪ್ರಾಯೋಗಿಕ ಶಿಕ್ಷಣವನ್ನು ನೀಡಲಾಯಿತು. ಕೊನೆಯಲ್ಲಿ ಹೊಸ ಅಕ್ಕಿ ಊಟವನ್ನೂ ಮಾಡಿ ಸಂಭ್ರಮಿಸಿದರು.

...............

ಮಳೆಗಾಲದಲ್ಲಿ ನೀರು ನಿಂತು ಆಡಲು ಅನುಪಯುಕ್ತವಾಗಿದ್ದ ಅಂಗಳದ ಮೌಲ್ಯವರ್ಧನೆಯಾಗಿದೆ. ವಿದ್ಯಾರ್ಥಿಗಳಿಗೆ ಅಕ್ಕಿ ಎಲ್ಲಿ ಹುಟ್ಟುತ್ತದೆ ಎಂಬುದು ತಿಳಿಯಿತು. ಭತ್ತದ ಗದ್ದೆ ಮಾಡುವುದು ಹೇಗೆ ಎಂಬುದರ ಪ್ರತ್ಯಕ್ಷ ಅನುಭವ ದೊರಕಿತು. ಭತ್ತವನ್ನು ಬೆಳೆಸುವುದು ಹೇಗೆ ಮತ್ತು ಭತ್ತದ ಗದ್ದೆ ಹೇಗಿರುತ್ತದೆಂಬ ಚಿತ್ರಣ ಮಕ್ಕಳಿಗೆ ಸಿಕ್ಕಿತು.

- ಜಯಲಕ್ಷ್ಮೀ ದಾಮ್ಲೆ, ಶಾಲಾ ಮುಖ್ಯ ಶಿಕ್ಷಕಿ----ಶಾಲೆಗೆ ಬರುತ್ತಿದ್ದಂತೆ ಮಕ್ಕಳು ಗದ್ದೆಯ ಬಳಿಗೆ ಓಡಿ ತೆನೆಗಳ ಬೆಳವಣಿಗೆಯನ್ನು ಅವಲೋಕಿಸುತ್ತಿದ್ದರು. ಇಂತಹ ಅವಲೋಕನ ಮತ್ತು ಅರಿವು ಪ್ರತ್ಯಕ್ಷ ಕಲಿಕೆಯ ಒಂದು ಪ್ರಯೋಜನ.ಇಂತಹ ಪ್ರಾಯೋಗಿಕ ಶಿಕ್ಷಣಕ್ಕೆ ವೆಚ್ಚ ತುಂಬಾ ಬರುತ್ತದೆ. ಆದರೆ ವಿದ್ಯಾರ್ಥಿಗಳಿಗೆ ಜೀವನದುದ್ದಕ್ಕೂ ನೆನಪಿಡುವ ಅನುಭವಾತ್ಮಕ ಕಲಿಕೆಯ ಪ್ರಯೋಜನವಿದೆ

- ಡಾ. ಚಂದ್ರಶೇಖರ ದಾಮ್ಲೆ , ಸ್ನೇಹ ಶಾಲೆಯ ಅಧ್ಯಕ್ಷ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

500 ನಾಯಿಗಳಿಗೆ ಚಿಕನ್‌ ರೈಸ್ ನೀಡಲು ವರ್ಷಕ್ಕೆ 1.83 ಕೋಟಿ
ಯಲಹಂಕದಲ್ಲಿ ‘ಚೀನಾದ ಹ್ಯಾಂಗ್‌ಝೌ’ ಮಾದರಿ ರೈಲು ನಿಲ್ದಾಣ