6ನೇ ವರ್ಷದ ಬತ್ತ ನಾಟಿ ಕಾರ್ಯಕ್ರಮ ನಡೆಯಿತು. ಮಾಜಿ ಸಚಿವ ಅಪ್ಪಚ್ಚು ರಂಜನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಇಲ್ಲಿನ ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ ವತಿಯಿಂದ ಸಮೀಪದ ಗೌಡಳ್ಳಿ ಗ್ರಾಮದ ರಾಜು ಅವರ ಗದ್ದೆಯಲ್ಲಿ 6ನೇ ವರ್ಷದ ಬತ್ತ ನಾಟಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಅಪ್ಪಚ್ಚು ರಂಜನ್, ಇತ್ತೀಚಿನ ದಿನಗಳಲ್ಲಿ ಯುವ ಜನಾಂಗ ಪಟ್ಟಣಕ್ಕೆ ಹೋಗುವುದು ಮಾಮೂಲಾಗಿದೆ. ಪಟ್ಟಣಗಳಲ್ಲಿ ಬದುಕು ಕಟ್ಟಿಕೊಂಡರೂ ಸಹ ನಮ್ಮ ಮೂಲ ನೆಲೆಯ ಸಂಪರ್ಕವನ್ನು ಕಡಿದುಕೊಳ್ಳಬಾರದು. ಕೃಷಿ ಭೂಮಿಯನ್ನು ಬರಡಾಗಿಸದೇ ವ್ಯವಸಾಯ ಮಾಡಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ಬತ್ತದ ಗದ್ದೆಗಳು ಪಾಳು ಬೀಳುತ್ತಿರುವುದು ಕಳವಳಕಾರಿ. ಈ ನಿಟ್ಟಿನಲ್ಲಿ ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್‍ನಿಂದ ಪ್ರತಿ ವರ್ಷ ಬತ್ತ ನಾಟಿಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮ ಆಯೋಜಿಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಎಚ್. ಎನ್. ರವೀಂದ್ರ ಮಾತನಾಡಿ, ಕೃಷಿ ಭೂಮಿಯ ಉಳಿವಿಗೆ ಎಲ್ಲರೂ ಮನಸ್ಸು ಮಾಡಬೇಕಿದೆ. ಮಿಶ್ರ ಬೇಸಾಯ ಪದ್ಧತಿಯಿಂದ ಲಾಭ ಗಳಿಸಬಹುದು. ಕೃಷಿ ಭೂಮಿ ಎಂದಿಗೂ ರೈತರನ್ನು ಕೈ ಬಿಡುವುದಿಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಸೋಸಿಯೇಷನ್ ಅಧ್ಯಕ್ಷ ಶ್ರೀನಿಧಿ ಲಿಂಗಪ್ಪ ಮಾತನಾಡಿ, ಪ್ರಸ್ತುತ ಕೊಡಗಿನ ಕೃಷಿಕರನ್ನು ಸಿ. ಮತ್ತು ಡಿ. ಜಾಗದ ಸಮಸ್ಯೆ, ಕಸ್ತೂರಿ ರಂಗನ್ ವರದಿ ಅನುಷ್ಠಾನದ ಸಮಸ್ಯೆಗಳು ಬಹುವಾಗಿ ಕಾಡುತ್ತಿದೆ. ಜಿಲ್ಲೆಯ ಕೃಷಿ ಹಾಗೂ ಕೃಷಿಕರ ಉಳಿವಿಗಾಗಿ ನಡೆಯುವ ಹೋರಾಟಕ್ಕೆ ಸಂಘವು ಬೆಂಬಲ ನೀಡುತ್ತಾ ಬಂದಿದೆ. ಇದೀಗ ಸುಪ್ರೀಂ ಕೋರ್ಟ್‍ನಲ್ಲಿರುವ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮರುಪರಿಶೀಲನಾ ಅರ್ಜಿ ಸಲ್ಲಿಸಿ, ಕೃಷಿಕರನ್ನು ಒಕ್ಕಲೆಬ್ಬಿಸದಂತೆ ತಡೆಯಬೇಕಿದೆ ಎಂದು ಅಭಿಪ್ರಾಯಿಸಿದರು.
ಗೌಡಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಎಚ್. ಆರ್. ಸುರೇಶ್, ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಅರುಣ್ ಕಾಳಪ್ಪ, ಗ್ರಾ. ಪಂ. ಸದಸ್ಯ ನವೀನ್ ಅಜ್ಜಳ್ಳಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಪ್ರಗತಿ ಪರ ಕೃಷಿಕ ಪೊನ್ನಂಪೇಟೆಯ ರವಿಶಂಕರ, ಗ್ರಾ. ಪಂ. ಅಧ್ಯಕ್ಷ ನಾಗರಾಜ್, ಕಾಫಿ ಮಂಡಳಿ ಅಧಿಕಾರಿ ಲಕ್ಷ್ಮೀಕಾಂತ್, ಗೌಡಳ್ಳಿ ಪ್ಯಾಕ್ಸ್ ಉಪಾಧ್ಯಕ್ಷೆ ಮಮತ, ಬಿಜಿಎಸ್ ಶಾಲೆಯ ಪ್ರಾಂಶುಪಾಲೆ ರತ್ನ, ರೋಟರಿ ಅಧ್ಯಕ್ಷ ಜೆ.ಕೆ. ಪೊನ್ನಪ್ಪ, ಪ್ರಣವ್ ಫೌಂಡೇಷನ್ ಅಧ್ಯಕ್ಷ ರಾಕೇಶ್ ರೈ, ಗದ್ದೆ ಮಾಲೀಕ ಜಿ.ಎಸ್. ರಾಜು, ಇಫಾ ಸಂಸ್ಥೆ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬಿಜಿಎಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಅತಿಥಿಗಳು ಗದ್ದೆಯಲ್ಲಿ ನಾಟಿ ಮಾಡುವ ಮೂಲಕ ಬತ್ತ ಕೃಷಿಯ ಬಗ್ಗೆ ಜಾಗೃತಿ ಮೂಡಿಸಿದರು. ಇದಕ್ಕೂ ಮುನ್ನ ಕೆಸರು ಗದ್ದೆಯಲ್ಲಿ ವಿವಿಧ ಕ್ರೀಡಾಕೂಟಗಳನ್ನು ನಡೆಸಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.