ಕನ್ನಡಪ್ರಭ ವಾರ್ತೆ ಬೇಲೂರು
ಗ್ರಾಮದ ರೇವಯ್ಯ ಎಂಬುವವರು ತಮ್ಮ ಮೂರು ಎಕರೆ ಜಮೀನಿನಲ್ಲಿ ಭತ್ತ ಬೆಳೆದಿದದ್ದರು. ಇತ್ತೀಚಿನ ದಿನಗಳಲ್ಲಿ ಈ ಭಾಗದಲ್ಲಿ ಕಾಡಾನೆಗಳ ಹಾವಳಿಯಿಂದ ರೋಸಿ ಹೋಗಿದ್ದ ರೈತರು ತಮ್ಮ ಬೆಳೆಗಳನ್ನು ರಾತ್ರಿ ಕಾದು ತಮ್ಮ ಬೆಳೆಯನ್ನು ರಕ್ಷಿಸಿಕೊಂಡಿದ್ದರು. ಎರಡು ದಿನಗಳ ಹಿಂದಷ್ಟೇ ಭತ್ತ ಕಟಾವು ಮಾಡಿ ಒಕ್ಕಣೆ ಮಾಡಲು ಒಣವೆ ಹಾಕಿದ್ದರು. ಆದರೆ ರಾತ್ರೋರಾತ್ರಿ ಕಿಡಿಗೇಡಿಗಳು ಭತ್ತದ ಬಣವೆಗೆ ಬೆಂಕಿ ಹಾಕಿದ ಕಾರಣ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.
ಈ ವೇಳೆ ತನ್ನ ಅಳಲನ್ನು ತೋಡಿಕೊಂಡ ರೈತ ರೇವಯ್ಯ, ಕೂಲಿ ಮಾಡಿಕೊಂಡು ಕಷ್ಟಪಟ್ಟು ತಮಗಿದ್ದ ಜಮೀನಿನಲ್ಲಿ ಭತ್ತದ ಬೆಳೆ ಮಾಡಿದ್ದೆವು. ಈ ಭಾಗದಲ್ಲಿ ಆನೆಗಳ ಹಾವಳಿಯಿಂದ ಎಷ್ಟೇ ಕಷ್ಟ ಇದ್ದರೂ ಬೆಳೆ ಮಾಡಿದ್ದೆವು. ಕೈಗೆ ಬಂದ ತುತ್ತನ್ನು ಯಾರೋ ಕಿಡಿಗೇಡಿಗಳು ರಾತ್ರೋರಾತ್ರಿ ಬೆಂಕಿ ಹಾಕಿ ಸುಟ್ಟುಹಾಕಿದ್ದಾರೆ. ಇದರಿಂದ ನಮಗೆ ಸುಮಾರು ೪ ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ. ನಾನು ಯಾರ ಬಳಿ ಹೋಗಿ ಕೇಳಲಿ ಎಂದು ಕಣ್ಣೀರು ಹಾಕಿದರಲ್ಲದೆ, ನಮಗಾದ ನಷ್ಟಕ್ಕೆ ಪರಿಹಾರ ನೀಡಿ ಎಂದು ನೊಂದ ರೈತ ದಂಪತಿ ವಿನಂತಿಸಿಕೊಂಡರು.ವಿಷಯ ತಿಳಿದು ಸ್ಥಳಕ್ಕೆ ದಂಡಾಧಿಕಾರಿ ಎಂ ಮಮತಾ, ಅಧಿಕಾರಿಗಳಾದ ಪ್ರಕಾಶ್ ಹಾಗೂ ಮೈತ್ರಿ , ಅರೇಹಳ್ಳಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.