ಭರದಿಂದ ಸಾಗಿದ ಭತ್ತ ನಾಟಿ ಕಾರ್ಯ

KannadaprabhaNewsNetwork |  
Published : Jul 27, 2025, 12:01 AM IST
ಕೃಷಿ ಭೂಮಿಯಲ್ಲಿ ಸಂಪ್ರದಾಯಿಕ ಭತ್ತ ನಾಟಿ ಕಾರ್ಯದಲ್ಲಿ ತೊಡಗಿರುವ ಕೃಷಿ ಕಾರ್ಮಿಕರು. | Kannada Prabha

ಸಾರಾಂಶ

ತಾಲೂಕಿನಾದ್ಯಂತ ಹಲವು ವರ್ಷಗಳ ಮಳೆ ಕೊರತೆಯಿಂದ ಮೆಕ್ಕೆಜೋಳ, ಶೇಂಗಾ, ಹತ್ತಿ ಬೆಳೆಯುವ ರೈತರು ಉತ್ತಮ ಮಳೆ ನೆಚ್ಚಿಕೊಂಡು ಭತ್ತ ನಾಟಿಗೆ ಮುಂದಾಗಿದ್ದಾರೆ

ಮಾರುತಿ ಶಿಡ್ಲಾಪೂರ ಹಾನಗಲ್ಲ

ಬೆಂಬಿಡದ ಮಳೆಗೆ ಬಿತ್ತಿದ ಗೋವಿನ ಜೋಳ ಕೆಂಪಾಗಿ ಪೈರು ಬರುವ ಲಕ್ಷಣಗಳೇ ಕುಸಿದು ಹೋಗಿದ್ದು ಒಂದಾದರೆ, ಭತ್ತದ ನಾಟಿಗೆ ಉತ್ತಮ ವಾತಾವರಣವಿರುವುದರಿಂದ ನಾಟಿ ಕಾರ್ಯ ಭರದಿಂದ ಸಾಗಿದೆ.

ತಾಲೂಕಿನಲ್ಲಿ ಸುರಿಯುತ್ತಿರುವ ಮಳೆ ಭತ್ತ ನಾಟಿ ಕಾರ್ಯಕ್ಕೆ ಉತ್ತಮ ಅನುಕೂಲ ಮಾಡಿಕೊಟ್ಟಿದೆ. ಭತ್ತದ ನಾಡಿನಲ್ಲಿ ಸಂಪ್ರದಾಯಿಕವಾಗಿ ಭತ್ತ ನಾಟಿ ಮಾಡುವ ಚಟುವಟಕೆಗಳು ಗರಿಗೆದರಿವೆ.

ತಾಲೂಕಿನಲ್ಲಿ ೯೭೩೫ ಹೆಕ್ಟರ್ ಭೂಮಿಯಲ್ಲಿ ಪ್ರತಿ ವರ್ಷ ಇದೇ ಸಮಯದಲ್ಲಿ ಭತ್ತ ನಾಟಿ ಕಾರ್ಯ ನಡೆಯುತ್ತದೆ. ಈ ಸಾರಿ ಭತ್ತ ನಾಟಿ ಕ್ಷೇತ್ರ ಸಾವಿರಾರು ಹೆಕ್ಟೇರ್ ವಿಸ್ತರಣೆಯಾಗಿದೆ. ಮುಂಗಾರು ಪೂರ್ವ ಮಳೆಗಳು ವಿಳಂಬವಾಗಿ ಮುಂಗಾರು ಮಳೆಯೊಂದಿಗೆ ಕೂಡಿಕೊಂಡಿದ್ದರಿಂದ ಹಲವು ಭಾಗದಲ್ಲಿ ರೈತರಿಗೆ ಭೂಮಿ ಸಿದ್ಧತೆ ಮುಗಿಯುತ್ತಿದ್ದು ಭತ್ತದ ನಾಟಿ ಭರದಿಂದ ಸಾಗಿದೆ.

ತಾಲೂಕಿನಾದ್ಯಂತ ಹಲವು ವರ್ಷಗಳ ಮಳೆ ಕೊರತೆಯಿಂದ ಮೆಕ್ಕೆಜೋಳ, ಶೇಂಗಾ, ಹತ್ತಿ ಬೆಳೆಯುವ ರೈತರು ಉತ್ತಮ ಮಳೆ ನೆಚ್ಚಿಕೊಂಡು ಭತ್ತ ನಾಟಿಗೆ ಮುಂದಾಗಿದ್ದಾರೆ. ೧೧೦೩೫ ಹೆಕ್ಟರ್ ಪ್ರದೇಶದಲ್ಲಿ ಈ ಬಾರಿ ಭತ್ತ ನಾಟಿ ನಡೆಯುತ್ತಿದೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.

ಹಲವು ವರ್ಷಗಳಿಂದ ಮಳೆ ಪ್ರಮಾಣದಲ್ಲಿ ಏರಿಳಿತ, ಕೃಷಿ ಕೂಲಿ ಕಾರ್ಮಿಕರ ಕೊರತೆ, ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದೇ ರೈತರು ಭತ್ತದಿಂದ ವಿಮುಖರಾಗಿದ್ದರು. ಅತ್ಯುತ್ತಮ ಮಳೆ ಮತ್ತು ಬಾಳಂಬೀಡ, ಹಿರೆಕಾಂಸಿ, ಬಸಾಪೂರ ಮೊದಲಾದ ಏತ ನೀರಾವರಿ ಯೋಜನೆಗಳಿಂದ ಕೆರೆ ತುಂಬಿಸುವ ಕಾರ್ಯ ಭರದಿಂದ ನಡೆದಿದ್ದು, ಬಹುತೇಕ ಕರೆಗಳು ತುಂಬುತ್ತಿವೆ. ಅಲ್ಲದೆ, ನಿರಂತರವಾಗಿ ಮಳೆ ಸುರಿಯುತ್ತಿರುವುದು ಭತ್ತ ನಾಟಿಗೆ ಪೂರಕ ವಾತಾವರಣ ಒದಗಿಸಿದೆ. ಈ ಕಾರಣಕ್ಕಾಗಿ ಭತ್ತದ ಖಣಜ ಖ್ಯಾತಿಯ ಹಾನಗಲ್ಲ ಮತ್ತೆ ತನ್ನ ಗತವೈಭವಕ್ಕೆ ಮರುಳುವ ಲಕ್ಷಣಗಳು ಗೋಚರಿಸುತ್ತಿವೆ.

ಜುಲೈನಿಂದ ಆಗಸ್ಟ್ ಮೊದಲ ವಾರದ ತನಕ ತಾಲೂಕಿನಲ್ಲಿ ಭತ್ತ ನಾಟಿ ಕೆಲಸ ನಡೆಯುತ್ತದೆ. ಈಗಾಗಲೇ ಬಹುತೇಕ ಕಡೆಗಳಲ್ಲಿ ನಾಟಿ ಪೂರ್ಣಗೊಂಡಿದೆ.

ಯಾಂತ್ರೀಕೃತ ನಾಟಿಗಿಂತ ಸಂಪ್ರದಾಯಿಕ ನಾಟಿ ಪದ್ಧತಿಯನ್ನು ತಾಲೂಕಿನ ರೈತರು ನೆಚ್ಚಿಕೊಂಡಿದ್ದಾರೆ. ಉತ್ತಮ ತಾಂತ್ರಿಕತೆ ಅಳವಡಿಸಿಕೊಂಡು ರೈತರು ಹೆಚ್ಚು ಇಳುವರಿ ಪಡೆಯಬೇಕು. ಈಗ ಅನುಸರಿಸುತ್ತಿರುವ ನಾಟಿ ಪದ್ಧತಿಯಲ್ಲಿ ಸರಿಯಾದ ಆಳ, ಅಗಲ ಮತ್ತು ನಿಗದಿತ ಸಸಿ ಕಾಪಾಡಿಕೊಳ್ಳಬೇಕು ಎಂಬ ಸಲಹೆ ಕೃಷಿ ಇಲಾಖೆಯದ್ದಾಗಿದೆ.

ರಸಗೊಬ್ಬರ ಬಳಕೆಯಲ್ಲಿ ನಿರ್ಲಕ್ಷತೆ, ಅಸಮರ್ಪಕ ನೀರು ನಿರ್ವಹಣೆಯಿಂದ ಭತ್ತದ ಇಳುವರಿ ಕಡಿಮೆಯಾಗಲು ಮುಖ್ಯ ಕಾರಣವಾಗಿದೆ. ಆಧುನಿಕ ಕೃಷಿ ಪದ್ಧತಿ ಮೂಲಕ ಕೃಷಿಗೆ ರೈತರು ಮುಂದಾಗಬೇಕು ಎಂದು ಕೃಷಿ ಅಧಿಕಾರಿ ಸಂಗಮೇಶ ಹಕ್ಲಪ್ಪನವರ ತಿಳಿಸಿದ್ದಾರೆ.

ಭತ್ತದ ನಾಟಿ ಪದ್ಧತಿಯಲ್ಲಿ ಕೂರಿಗೆ ಬಿತ್ತನೆ ಹೊರತುಪಡಿಸಿ ಶ್ರೀ ಪದ್ಧತಿ, ಸಾಲು ನಾಟಿ, ಯಾಂತ್ರೀಕೃತ ನಾಟಿ ಪದ್ಧತಿ ಚಾಲ್ತಿಯಲ್ಲಿವೆ. ಆದರೆ ತಾಲೂಕಿನಲ್ಲಿ ಸಂಪ್ರದಾಯಿಕ ನಾಟಿ ಪದ್ಧತಿ ಮತ್ತೆ ಚುರುಕಾಗಿದೆ. ಉತ್ತಮ ಮಳೆ ಇರುವುದರಿಂದ ಈ ಬಾರಿ ಭತ್ತದ ನಾಟಿ ಬೆಳೆ ಚೆನ್ನಾಗಿ ಬರುವ ನಿರೀಕ್ಷೆ ಇದೆ ಎಂದು ಕೃಷಿ ನಿರ್ದೇಶಕ ಮಾರುತಿ ಅಂಗರಗಟ್ಟಿ ತಿಳಿಸಿದ್ದಾರೆ.

ಮಳೆ ಉತ್ತಮವಾದರೆ, ಭತ್ತದ ಬೆಳೆಯ ಇಳುವರಿ ಅಧಿಕವಾಗಿರುತ್ತದೆ. ಕಳೆದ ಬಾರಿಗೆ ಹೊಲಿಸಿದರೆ ಈ ಬಾರಿ ಭತ್ತ ನಾಟಿ ಮಾಡುತ್ತಿರುವ ರೈತರ ಪ್ರಮಾಣ ಹೆಚ್ಚಾಗಿದೆ. ಕಾರ್ಮಿಕರ ಕೊರತೆ, ನಾಟಿ ಮಾಡಲು ಖರ್ಚು ಕೂಡ ಕಳೆದ ವರ್ಷಕ್ಕಿಂತ ಹೆಚ್ಚಾಗುತ್ತಿದೆ ಎಂದು ಕೃಷಿಕ ಮಂಜುನಾಥ ಪರಮ್ಮನವರ ತಿಳಿಸಿದ್ದಾರೆ.

PREV

Recommended Stories

ಕಾರ್ಮಿಕರು ಒಪ್ಪಿದ್ರೆ 10 ಗಂಟೆ ಕೆಲಸಕ್ಕೆ ಓಕೆ : ಲಾಡ್‌
‘ಸಾವಿರಾರು ಶವ ಹೂಳಲು ಧರ್ಮಸ್ಥಳ ಗ್ರಾಮದಲ್ಲಿ ಮಹಾಭಾರತ ಯುದ್ಧ ನಡೆದಿಲ್ಲ’