ದಾವಣಗೆರೆ: ಕೊಯ್ಲು ಮಾಡಿದ ರೈತರು ಮಳೆಯಿಂದಾಗಿ ಭತ್ತ ಒಣಗಿಸಲು ಸಾಧ್ಯವಾಗದೇ, ಕೈಗೆ ಸಿಕ್ಕ ದರಕ್ಕೆ ಮಾರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರಿಗೆ ಆಸರೆ ಆಗಬೇಕಿದ್ದ ಭತ್ತ ಖರೀದಿ ಕೇಂದ್ರ ಶನಿವಾರ ಮುಚ್ಚಿದೆ. ಇದ್ದರಿಂದಾಗಿ ರೈತರು ಪರದಾಡಬೇಕಾಯಿತು ಎಂದು ಜಿಲ್ಲಾ ರೈತರ ಒಕ್ಕೂಟ ಮುಖಂಡ ಬಿ.ಎಂ. ಸತೀಶ ಕೊಳೇನಹಳ್ಳಿ ಆರೋಪಿಸಿದ್ದಾರೆ.
ಹಿಂಗಾರು/ಬೇಸಿಗೆ ಹಂಗಾಮಿನಲ್ಲಿ ಬೆಳೆದ ಭತ್ತ ಖರೀದಿ ಮಾಡುವುದಾಗಿ ರಾಜ್ಯ ಸರ್ಕಾರ ತಿದ್ದುಪಡಿ ಆದೇಶ ಹೊರಡಿಸಿದೆ. ಆದರೆ ಲಾಗಿನ್ (ಸಾಫ್ಟ್‌ವೇರ್)ನಲ್ಲಿ ತಿದ್ದುಪಡಿ ಮಾಡದ ಕಾರಣಕ್ಕೆ ಜಿಲ್ಲೆಯಲ್ಲಿ ಒಬ್ಬ ರೈತನ ಹೆಸರೂ ನೋಂದಣಿಯಾಗಿಲ್ಲ. ಇಂದು ನೋಂದಣಿ- ಖರೀದಿ ಪ್ರಕ್ರಿಯೆ ಕಡೆ ದಿನವಾಗಿದ್ದರೂ ನೋಂದಣಿ- ಖರೀದಿ ಕೇಂದ್ರ ಮುಚ್ಚಿದ್ದು ಯಾಕೆ? ಎಂದು ಪ್ರಶ್ನಿಸಿದ್ದಾರೆ.
ನೋಂದಣಿಗಾಗಿ ಬಂದಿದ್ದ ರೈತರು ನಿರಾಸೆಯಿಂದ ಊರುಗಳಿಗೆ ಮರಳಿದ್ದಾರೆ. ಸುಮಾರು 1 ತಿಂಗಳಿಂದ ಭತ್ತ ಬೆಳೆದ ರೈತರು ಬೀದಿಗೀಳಿದು ಹೋರಾಟ ಮಾಡುತ್ತಿದ್ದಾರೆ. ಸಚಿವರು, ಸಂಸದರು ಮಾತ್ರ ಸ್ಪಂದಿಸದೇ, ದಿವ್ಯ ಮೌನ ವಹಿಸಿದ್ದಾರೆ. ರೈತಪರ ಕಾಳಜಿ, ಹಿತಾಸಕ್ತಿ ಆಳುವವರಿಗೆ ಇಲ್ಲವಾಗಿದೆ ಎಂದು ಕಿಡಿಕಾರಿದ್ದಾರೆ.- - -
-31ಕೆಡಿವಿಜಿ4: ಬಿ.ಎಂ.ಸತೀಶ.