ಪತ್ನಿಯ ಆಸ್ಪತ್ರೆ ವೆಚ್ಚ ಭರಿಸಲಾಗದೆ ಪಾಡುಪಡುತ್ತಿರುವ ‘ಪದ್ಮಶ್ರೀ’ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ್

KannadaprabhaNewsNetwork | Updated : Feb 08 2025, 11:34 AM IST

ಸಾರಾಂಶ

ಅಮೈ ಮಹಾಲಿಂಗ ನಾಯ್ಕರ ಪತ್ನಿ ಏಕಾಏಕಿ ತಲೆಯ ನರದ ಸಮಸ್ಯೆಗೆ ಒಳಗಾಗಿದ್ದಾರೆ. ಮೊದಲಿಗೆ ವಾರಗಳ ಕಾಲ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಆದರೆ ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಿದ್ದಾರೆ.  

 ಮಂಗಳೂರು :  ಇವರು ‘ಪದ್ಮಶ್ರೀ’ ಪುರಸ್ಕೃತರು, ಸುರಂಗ ಕೊರೆದು ಜಮೀನಿಗೆ ನೀರು ಹಾಯಿಸಿದ್ದನ್ನು ದೇಶವೇ ನೋಡಿ ಬೆರಗು ಪಟ್ಟಿತು. ಆದರೆ ಈಗಲೂ ಸಾಮಾನ್ಯ ಜೀವನ ನಡೆಸುತ್ತಿದ್ದಾರೆ. ಸದ್ಯ ದೈನೇಸಿ ಸ್ಥಿತಿಯಲ್ಲಿರುವ ಇವರು ಪತ್ನಿಯ ಆಸ್ಪತ್ರೆಯ ವೆಚ್ಚ ಭರಿಸಲಾಗದೆ ಪಾಡುಪಡುತ್ತಿದ್ದಾರೆ.

ಇದು ಪ್ರಗತಿಪರ ಕೃಷಿಕರಾಗಿ ದೇಶದ ಅತ್ಯುನ್ನತ ಪ್ರಶಸ್ತಿ ‘ಪದ್ಮಶ್ರೀ’ಗೆ ಭಾಜನರಾದ, 2018ರಲ್ಲಿ ಕನ್ನಡಪ್ರಭ ವರ್ಷದ ವ್ಯಕ್ತಿ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕರ ಸದ್ಯದ ಪಾಡು. ಇಳಿವಯಸ್ಸು ದೇಹದ ಕಸುವು ಕುಂದಿದೆ. ಕೃಷಿಯ ಉತ್ಪತ್ತಿಯಲ್ಲಿಯೇ ದಿನ ದೂಡುತ್ತಿದ್ದಾರೆ. ಇದೇ ಸಮಯದಲ್ಲೇ ಅಮೈ ಮಹಾಲಿಂಗ ನಾಯ್ಕರ ಪತ್ನಿ ಏಕಾಏಕಿ ತಲೆಯ ನರದ ಸಮಸ್ಯೆಗೆ ಒಳಗಾಗಿದ್ದಾರೆ. ಮೊದಲಿಗೆ ವಾರಗಳ ಕಾಲ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಆದರೆ ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಿದ್ದಾರೆ.

ಅದರಂತೆ ಮಂಗಳೂರು ಹೊರವಲಯದ ಅಡ್ಯಾರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈಗಾಗಲೇ ಕೈಯಲ್ಲಿರುವ ದುಡ್ಡು, ಅವರಿವರಲ್ಲಿ ಕಾಡಿಬೇಡಿ 2.65 ಲಕ್ಷ ರು. ಚಿಕಿತ್ಸೆಯ ವೆಚ್ಚ ಭರಿಸಿದ್ದಾರೆ. ಮತ್ತೆ ಚಿಕಿತ್ಸೆಯ ವೆಚ್ಚ 2.50 ಲಕ್ಷ ರು. ಭರಿಸಬೇಕಿದೆ. ಈ ನಡುವೆ ತಲೆಯ ಸರ್ಜರಿ ಕೂಡ ನಡೆಸಲಾಗಿದೆ. ಕೈಯಲ್ಲಿ ಬಿಡಿಗಾಸು ಇಲ್ಲದ ಅಮೈ ಮಹಾಲಿಂಗ ನಾಯ್ಕರು ಇದರಿಂದ ಕಂಗಾಲಾಗಿದ್ದಾರೆ.

ಗುಡ್ಡದಲ್ಲೇ ಸುರಂಗ ತೋಡಿ ನೀರಿನ ಕೋಡಿಯನ್ನೇ ಹರಿಸಿದ್ದ ಅಮೈ ಮಹಾಲಿಂಗ ನಾಯ್ಕರು ಆಸ್ಪತ್ರೆ ವೆಚ್ಚ ಭರಿಸಲಾಗದೆ ಪರದಾಟ ನಡೆಸುತ್ತಿದ್ದಾರೆ. ದಾನಿಗಳು ಇವರ ಸಹಾಯಕ್ಕೆ ಧಾವಿಸಬೇಕಿದೆ. ಪದ್ಮಶ್ರೀ ಪುರಸ್ಕೃತನ ಸಂಕಷ್ಟಕ್ಕೆ ಕೈಜೋಡಿಸಬೇಕಾಗಿದೆ.

ಬ್ಯಾಂಕ್‌ ಖಾತೆ ವಿವರ:

ಮಹಾಲಿಂಗ ನಾಯ್ಕ, ಕೆನರಾ ಬ್ಯಾಂಕ್‌ ವಿಟ್ಲ ಶಾಖೆ, ಖಾತೆ ಸಂಖ್ಯೆ-110037237088, IFSC Code-CNRB0010141, ಮೊಬೈಲ್‌-9449981747

Share this article