ಮಂಗಳೂರು: ದ.ಕ. ಜಿಲ್ಲೆಯಲ್ಲಿ ತಳಮಟ್ಟದಲ್ಲಿ ಪಕ್ಷವನ್ನು ಸಂಘಟಿಸಿ, ಮತ್ತೆ ಕಾಂಗ್ರೆಸ್ ಗೆಲವಿನ ಗತವೈಭವ ಮರುಕಳಿಸುವಂತೆ ಮಾಡುವ ಕಾರ್ಯಯೋಜನೆಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷ ಪದ್ಮರಾಜ್ ಆರ್.ಪೂಜಾರಿ ಹೇಳಿದರು.
1992ರಿಂದ 2023ರ ವರೆಗೆ ಸಾಮಾನ್ಯ ಕಾಂಗ್ರೆಸ್ ಕಾರ್ಯಕರ್ತನಾಗಿ ಕಾರ್ಯನಿರ್ವಹಿಸಿದ್ದೇನೆ. 2023ರಲ್ಲಿ ಕೆಪಿಸಿಸಿ ಕಾರ್ಯದರ್ಶಿಯಾಗಿ ಪಕ್ಷ ನನ್ನನ್ನು ಆಯ್ಕೆ ಮಾಡಿದೆ, ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿಯೂ ಪಕ್ಷ ಆಯ್ಕೆ ಮಾಡಿದೆ. ಪಕ್ಷ ನೀಡಿದ ಜವಾಬ್ದಾರಿಯನ್ನು ಸಮನ್ವಯದೊಂದಿಗೆ ಸಮರ್ಥವಾಗಿ ನಿಭಾಯಿಸಿದ್ದು, ಈಗ ಕಾರ್ಯಕರ್ತರ ಅಭಿಲಾಷೆಯಂತೆ ಜಿಲ್ಲಾಧ್ಯಕ್ಷನಾಗಿಯೂ ಆಯ್ಕೆಯಾಗಿದ್ದೇನೆ. ಸ್ವಪಕ್ಷದ ನಾಯಕರು ಮಾತ್ರವಲ್ಲದೆ ಬಿಜೆಪಿ, ಜೆಡಿಎಸ್ ಪಕ್ಷದ ಕಾರ್ಯಕರ್ತರೂ ನನ್ನನ್ನು ಅಭಿನಂದಿಸಿರುವುದು ವಿಶೇಷ ಎಂದರು.
ಹಲವು ಕಾರಣಗಳಿಂದ ದ.ಕ. ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ. ಈ ಸೋಲಿನ ಪುನರ್ ವಿಮರ್ಶೆ ನಡೆಸಿ ಮತ್ತೆ ಪಕ್ಷ ಸಂಘಟಿಸುವ ಕಾರ್ಯ ನಡೆಸಲಾಗುವುದು, ಜಿಲ್ಲೆಯ ಎಲ್ಲ ಹಿರಿಯ, ಕಿರಿಯ ನಾಯಕರನ್ನೂ ವಿಶ್ವಾಸಕ್ಕೆ ಪಡೆದು ಪ್ರತೀ ಗ್ರಾಮ, ಬೂತ್ ಮಟ್ಟದ ಕಾರ್ತಕರ್ತರನ್ನು ಭೇಟಿಯಾಗಿ ಪಕ್ಷಸಂಘಟನೆ ಮಾಡಲಾಗುವುದು ಎಂದರು.ಕಾಂಗ್ರೆಸ್ ಪಕ್ಷ ನನ್ನ ಹೆಗಲಿಗೆ ನೀಡಿರುವ ಜಿಲ್ಲಾಧ್ಯಕ್ಷ ಹುದ್ದೆಯು ಕೇವಲ ಅಧಿಕಾರ ಅಥವಾ ಕುರ್ಚಿಯಲ್ಲ, ಇದು ಕಠಿಣ ಸವಾಲುಗಳ ನಡುವೆಯೂ ಕಾಂಗ್ರೆಸ್‌ನ ತ್ರಿವರ್ಣ ಧ್ವಜವನ್ನು ಎತ್ತಿಹಿಡಿದು ನಿಂತ ಪ್ರತಿಯೊಬ್ಬ ನಿಸ್ವಾರ್ಥ ಕಾರ್ಯಕರ್ತನ ಪರಿಶ್ರಮ ಮತ್ತು ಬೆವರಿಗೆ ಸಂದ ಗೌರವ. ನಾನು ಎಂದಿಗೂ ವೇದಿಕೆಯ ನಾಯಕನಾಗಿರಲು ಬಯಸುವುದಿಲ್ಲ. ಪಕ್ಷಕ್ಕಾಗಿ ದುಡಿಯುವ ಕಾರ್ಯಕರ್ತರ ಹೆಜ್ಜೆಯೊಂದಿಗೆ ಹೆಜ್ಜೆ ಹಾಕಿ ಸಾಮಾನ್ಯ ಸೇವಕನಾಗಿ ಮುಂದುವರಿಯುತ್ತೇನೆ ಎಂದರು.
ಜಿಲ್ಲೆಯ ಕಟ್ಟಕಡೆಯ ಗ್ರಾಮದ, ಕೊನೆಯ ಬೂತ್ ಮಟ್ಟದ ಕಾರ್ಯಕರ್ತನ ಧ್ವನಿಯೂ ನಾಯಕತ್ವವನ್ನು ಮುಟ್ಟುವಂತೆ ಮಾಡುವುದೇ ನನ್ನ ಪ್ರಥಮ ಆದ್ಯತೆ. ಕಾರ್ಯಕರ್ತರು ಹಾಗೂ ಪಕ್ಷದ ನಾಯಕರು ನನ್ನ ಮೇಲಿಟ್ಟಿರುವ ವಿಶ್ವಾಸಕ್ಕೆ ಎಂದಿಗೂ ಚ್ಯುತಿ ಬಾರದಂತೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತೇನೆ. ಇದು ಕೇವಲ ಒಬ್ಬ ವ್ಯಕ್ತಿಯ ಜಯವಲ್ಲ, ನಮ್ಮ ಒಗ್ಗಟ್ಟಿನ ಸಂಘಟನಾ ಶಕ್ತಿಗೆ ಸಂದ ಜಯ. ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ತಳಮಟ್ಟದಿಂದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಗ್ಗಟ್ಟಿನಿಂದ ಶ್ರಮಿಸಲಿದ್ದೇವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮರಳಿ ಅಜೇಯ ಶಕ್ತಿಯನ್ನಾಗಿ ಕಟ್ಟಿಬೆಳೆಸುವುದೇ ನಮ್ಮ ಮುಂದಿನ ಸಂಕಲ್ಪ ಎಂದರು.ನಮ್ಮ ಹಿರಿಯ ಮುಖಂಡರ ಮಾರ್ಗದರ್ಶನ ಹಾಗೂ ಯುವ ಸಮೂಹದ ಉತ್ಸಾಹವನ್ನು ಜೊತೆಗೂಡಿಸಿ, ಸೌಹಾರ್ದತೆ, ಸಮಾನತೆ ಮತ್ತು ಅಭಿವೃದ್ಧಿಯ ಕಾಂಗ್ರೆಸ್ ಸಿದ್ಧಾಂತವನ್ನು ಪ್ರತಿ ಮನೆ-ಮನಗಳಿಗೂ ತಲುಪಿಸುವ ಕಾರ್ಯವನ್ನು ಮಾಡಲಿದ್ದೇನೆ ಎಂದರು.