ಕುಕ್ಕೆ, ಒಡಿಯೂರು, ಮಾಣಿಲ ಕ್ಷೇತ್ರದಲ್ಲಿ ಪದ್ಮರಾಜ್‌ ಪ್ರಾರ್ಥನೆ

KannadaprabhaNewsNetwork | Published : Apr 21, 2024 2:28 AM

ಸಾರಾಂಶ

ಚಂದಳಿಕೆ ವೆಂಕಟೇಶ್ವರ ಕ್ಯಾಶ್ಯೂ ಪ್ರಾಸೆಸಿಂಗ್, ಉಕ್ಕುಡ ಶ್ರೀ ಶಾರದಾ ಪ್ರಾಸೆಸರ್ಸ್ ಗೇರುಬೀಜ ಸಂಸ್ಕರಣಾ ಘಟಕ ಹಾಗೂ ನೆಹರು ನಗರ ಮಾಸ್ಟರ್ ಪ್ಲಾನರಿಗೆ ಪದ್ಮರಾಜ್ ಆರ್. ಪೂಜಾರಿ ಹಾಗೂ ಶಾಸಕ ಅಶೋಕ್ ಕುಮಾರ್ ರೈ ಭೇಟಿ ನೀಡಿ ಸಿಬ್ಬಂದಿ ಜೊತೆ ಮಾತುಕತೆ ನಡೆಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್‌ ಆರ್‌. ಪೂಜಾರಿ ಅವರು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯ, ಒಡಿಯೂರು, ಶ್ರೀಧಾಮ ಮಾಣಿಲ ಮತ್ತಿತರ ಕ್ಷೇತ್ರಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ, ಸ್ವಾಮೀಜಿಗಳಿಂದ ಆಶೀರ್ವಾದ ಪಡೆದುಕೊಂಡರು.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ಪದ್ಮರಾಜ್‌, ಸ್ವಾಮೀಜಿಯವರ ಆಶೀರ್ವಾದ ಪಡೆದರು. ಒಡಿಯೂರು ಸಂಸ್ಥಾನಕ್ಕೆ ಭೇಟಿ ನೀಡಿ ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ಆಶೀರ್ವಾದ ಪಡೆದುಕೊಂಡರು. ಬಳಿಕ ಶ್ರೀ ಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರಕ್ಕೆ ಭೇಟಿ ನೀಡಿ, ಶ್ರೀ ಮೋಹನದಾಸ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.

ಪೋಷಕರ ಆಶಯ ಈಡೇರಿಸೋಣ:

ಪುತ್ತೂರಿನ ಪುರುಷರಕಟ್ಟೆ, ಮುಂಡೂರು, ತಿಂಗಳಾಡಿಯಲ್ಲಿ ಮತ ಯಾಚನೆ ಬಳಿಕ ಕುಂಬ್ರದಲ್ಲಿ ಕಾಂಗ್ರೆಸ್‌ನ ಬೃಹತ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಪದ್ಮರಾಜ್‌ ಪೂಜಾರಿ, ದಕ್ಷಿಣ ಕನ್ನಡದ ಶಕ್ತಿ ಕೇಂದ್ರ ಮಂಗಳೂರಿನಲ್ಲಿ ಉದ್ಯೋಗ ಸೃಷ್ಟಿಸಬೇಕು ಎಂಬ ಯೋಜನೆ ಇಟ್ಟುಕೊಂಡು ಚುನಾವಣೆ ಎದುರಿಸಲಿದ್ದೇವೆ. ಇದರಿಂದ ಮಾನವ ಸಂಪನ್ಮೂಲದ ಸದ್ಬಳಕೆ ಮಾಡಿದಂತಾಗುತ್ತದೆ. ಸಂಧ್ಯಾ ಕಾಲದಲ್ಲಿ ಮಕ್ಕಳು ತಮ್ಮ ಜತೆಗಿರಬೇಕು ಎಂಬ ಪೋಷಕರ ಆಶಯವೂ ಈಡೇರಿದಂತಾಗುತ್ತದೆ ಎಂದು ಹೇಳಿದರು.

ಅಡಕೆ ಆಮದು ಏಕೆ:

ಅಡಕೆ, ರಬ್ಬರ್ ಬೆಳೆಗಾರರು ಯಾವ ರೀತಿಯ ಸಂಕಷ್ಟ ಅನುಭವಿಸುತ್ತಿದ್ದಾರೆ ಎನ್ನುವುದು ನಮಗೆ ತಿಳಿದಿದೆ‌. ನಮ್ಮೂರಲ್ಲೇ ಸಾಕಷ್ಟು ಬೆಳೆ ಬೆಳೆಯುತ್ತಿದ್ದರೂ ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿರುವುದು ಯಾಕೆ ಎಂದು ಪ್ರಶ್ನಿಸಿದ ಅವರು, ರೈತರಿಗೆ ಬೆಂಬಲ ನೀಡಲು ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಘೋಷಿಸಿದೆ. ಇದನ್ನು ಬಿಜೆಪಿಗರು ಸುಳ್ಳು ಭರವಸೆ ಎಂದು ಹೇಳುವಂತಿಲ್ಲ. ಕಾಂಗ್ರೆಸ್ ಸರ್ಕಾರ ಜನರಿಗೆ ಭದ್ರತೆಯ ಭಾವನೆ ನೀಡಿದೆ‌ ಎಂದರು.

ಶಾಸಕ ಅಶೋಕ್‌ ಕುಮಾರ್‌ ರೈ, ಚುನಾವಣಾ ಉಸ್ತುವಾರಿ ಕಾವು ಹೇಮನಾಥ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ವಿಶ್ವನಾಥ್ ರೈ, ಅನಿತಾ ಹೇಮನಾಥ ಶೆಟ್ಟಿ ಮತ್ತಿತರರು ಇದ್ದರು.ವಿಟ್ಲದಲ್ಲಿ ಮತಪ್ರಚಾರ:

ವಿಟ್ಲದ ವಿವಿಧ ಕಡೆಗಳಿಗೆ ಭೇಟಿ ನೀಡಿ ಪ್ರಚಾರ ನಡೆಸಿದ ಪದ್ಮರಾಜ್‌, ಕುಕ್ಕಾಜೆ ಶ್ರೀ ಕಾಳಿಕಾಂಬಾ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಪೆರುವಾಯಿ ಚರ್ಚ್‌ಗೆ ಭೇಟಿ ನೀಡಿದರು. ಕಂಬಳಬೆಟ್ಟುವಿನಲ್ಲಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಆತ್ಮೀಯ ಮಾತುಕತೆ ನಡೆಸಿದರು.ಮಾಸ್ಟರ್ ಪ್ಲಾನರಿ, ಕ್ಯಾಶ್ಯೂ ಫ್ಯಾಕ್ಟರಿ ಭೇಟಿ:

ಚಂದಳಿಕೆ ವೆಂಕಟೇಶ್ವರ ಕ್ಯಾಶ್ಯೂ ಪ್ರಾಸೆಸಿಂಗ್, ಉಕ್ಕುಡ ಶ್ರೀ ಶಾರದಾ ಪ್ರಾಸೆಸರ್ಸ್ ಗೇರುಬೀಜ ಸಂಸ್ಕರಣಾ ಘಟಕ ಹಾಗೂ ನೆಹರು ನಗರ ಮಾಸ್ಟರ್ ಪ್ಲಾನರಿಗೆ ಪದ್ಮರಾಜ್ ಆರ್. ಪೂಜಾರಿ ಹಾಗೂ ಶಾಸಕ ಅಶೋಕ್ ಕುಮಾರ್ ರೈ ಭೇಟಿ ನೀಡಿ ಸಿಬ್ಬಂದಿ ಜೊತೆ ಮಾತುಕತೆ ನಡೆಸಿದರು.

Share this article