ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಪಹಲ್ಗಾಮ್ ದಾಳಿಯಲ್ಲಿ 26 ಜನ ಮೃತ ಪಟ್ಟರು. ಇದು ಕೇಂದ್ರ ಸರ್ಕಾರದ ವೈಫಲ್ಯ. ಆದರೆ ನಾವು ಪ್ರಧಾನ ಮಂತ್ರಿ ರಾಜೀನಾಮೆ ಕೇಳಿದ್ದೆವೆಯೇ ? ಬೆಂಗಳೂರು ಕಾಲ್ತುಳಿತ ಪ್ರಕರಣದಲ್ಲಿಯೂ ವೈಫಲ್ಯವಾಗಿದೆ ನಿಜ. ಆದರೆ ಯಾರೂ ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಬೆಂಗಳೂರಿನಲ್ಲಿ ಸಂಭ್ರಮಾಚರಣೆಗೆ ಯಾರು ಅನುಮತಿ ಕೇಳಿದರು, ಅನುಮತಿ ನೀಡಲು ಯಾರು ನಿರಾಕರಿಸಿದರು, ಬಳಿಕ ಅನುಮತಿ ಕೊಟ್ಟವರು ಯಾರು ಎಂಬುದು ಯಾರಿಗೂ ಗೊತ್ತಿಲ್ಲ. ಇದೆಲ್ಲವೂ ಬೂದಿ ಮುಚ್ಚಿದ ಕೆಂಡದಂತಿದೆ. ಯಾರು ತಮ್ಮ ಕೆಲಸ ಸರಿಯಾಗಿ ಮಾಡಿಲ್ಲ ಎನ್ನುವುದು ತನಿಖೆಯಿಂದ ಹೊರ ಬರಬೇಕು ಎಂದರು.
ಕಮಿಷನರ್, ಡಿಸಿಪಿ, ಇನ್ಸ್‌ಪೆಕ್ಟರ್, ಪೊಲೀಸ್ ಹೀಗೆ ವಿವಿಧ ಹಂತದಲ್ಲಿ ಏನೇನು ಆಗಿದೆ ಎಂಬ ಸತ್ಯ ತನಿಖೆಯಿಂದ ಹೊರ ಬರಬೇಕು. ಬೆಂಗಳೂರು ಘಟನೆ ಬಗ್ಗೆ ಹೈಕಮಾಂಡ್ ಗೆ ಜವಾಬ್ದಾರಿ ಇದೆ. ಹೀಗಾಗಿ ದೆಹಲಿಗೆ ಕರೆಸಿ ವರದಿ ಕೇಳಬಹುದು. ಮುಂದೆ ಈ ರೀತಿ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಲು ಸೂಚನೆ ಕೊಡಬಹುದು ಎಂದು ತಿಳಿಸಿದರು.ಸಿಎಂ ಬದಲಾವಣೆ ಇದೆಯೇ ಎಂಬ ಪ್ರಶ್ನೆಗೆ ನಸುನಕ್ಕ ಸತೀಶ್ ಜಾರಕಿಹೊಳಿ, ಅದೇಗೆ ಸಿಎಂ ಬದಲಾವಣೆಯಾಗುತ್ತಾರೆ ? ನಿಮಗೆ ಹೇಳಿದ್ದು ಯಾರು ? ಸಿಎಂ ಅಧಿಕಾರಾವಧಿ ಎರಡೂವರೆ ವರ್ಷ ಎಂದು ಹೇಳಿದವರು ಯಾರು ಎಂದು ಪ್ರಶ್ನಿಸಿದ ಅವರು, ಎರಡೂವರೆ ವರ್ಷ ಎಂದು ಎಲ್ಲೂ ಇಲ್ಲ. ಈಗಲೂ ಸಿಎಂ ಸಿದ್ದರಾಮಯ್ಯ ಅವರೇ ಇದ್ದಾರೆ. ಮುಂದೆಯೂ ಅವರೇ ಇರುತ್ತಾರೆ ಎಂದು ಪ್ರತಿಕ್ರಿಯಿಸಿದರು.
ಬೆಳಗಾವಿ ವಿಭಜನೆ ಸಧ್ಯಕ್ಕಿಲ್ಲ. ಆಮೇಲೆ ವಿಭಜನೆ ಮಾಡಬಹುದು. ಬೆಳಗಾವಿ ವಿಭಜನೆ ಮಾಡುವ ಪ್ರಸ್ತಾವವೇನೋ ಇದೆ. ಆದರೆ ಅದು ಸಧ್ಯಕ್ಕಿಲ್ಲ ಎಂದು ಹೇಳಿದರು.