ಡೆಲ್ಲಿ ಮಂಜು
ಪಹಲ್ಗಾಂ (ಜಮ್ಮು &ಶ್ರೀನಗರ) : ಕಳೆದ 22 ದಿನಗಳ ಹಿಂದೆ ರಕ್ತಸಿಕ್ತ ಇತಿಹಾಸದ ಪುಟಕ್ಕೆ ಸಾಕ್ಷಿಯಾಗಿದ್ದ ಕಾಶ್ಮೀರದ ಪಹಲ್ಗಾಂ ಪ್ರದೇಶ ಇದೀಗ ಸಹಜ ಸ್ಥಿತಿಗೆ ಬರುತ್ತಿದೆ. ಆದರೆ ಪ್ರವಾಸಿಗರು ಇಲ್ಲದೆ ಖಾಲಿ ಖಾಲಿ ಅನ್ನೋ ಹಣೆಪಟ್ಟಿಯಿಂದ ಹೊರ ಬಂದಿಲ್ಲ.
ಪಾಕಿಸ್ತಾನದ ಉಗ್ರರು ಅಮಾಯಕ ಪ್ರವಾಸಿಗರ ಮೇಲೆ ಮಾಡಿದ ದಾಳಿ ನೇರವಾಗಿ ಕಾಶ್ಮೀರ ಕಣಿವೆಯ ಜನರ ಬದುಕಿನ ಮೇಲೆ ದುಷ್ಪರಿಣಾಮ ಬಿದ್ದಿದ್ದು, ಸ್ಥಳೀಯ ನಿವಾಸಿಗಳು ಆರ್ಥಿಕ ಹೊಡೆತಕ್ಕೆ ಸಿಲುಕಿದ್ದಾರೆ. ಪಹಲ್ಗಾಂ, ಬೈಸರನ್ ಎಂದು ಹೆಸರು ಕೇಳಿದರೆ ಸಾಕು ಆತಂಕ ಶುರುವಾಗುತ್ತದೆ. ಇನ್ನು ಪ್ರವಾಸಿಗರು ಬರುವುದು ಎಲ್ಲಿಂದ. ಈ ಗಾಯ ಮಾಯುವ ತನಕ ನಮ್ಮ ಬದುಕು ಅಷ್ಟಕಷ್ಟೆ ಎಂದು ಸ್ಥಳೀಯರು ಅಳಲು ತೊಡಿಕೊಂಡಿದ್ದಾರೆ.
ಬಿಕೋ ಎನ್ನುತ್ತಿದೆ ಟ್ಯಾಕ್ಸಿ ನಿಲ್ದಾಣ:
ಪಹಲ್ಗಾಂ ಟ್ಯಾಕ್ಸಿ ನಿಲ್ದಾಣದಿಂದ ಪ್ರತಿನಿತ್ಯ 700 ಟ್ಯಾಕ್ಸಿಗಳು ಕಾರ್ಯನಿರ್ವಹಿಸುತ್ತವೆ. ಕಳೆದ 22 ದಿನಗಳಿಂದ ಒಂದೇ ಒಂದು ಟ್ಯಾಕ್ಸಿ ಹೊರಗಡೆ ಬಂದಿಲ್ಲ. ಇದನ್ನೇ ನಂಬಿ ಬದುಕುವ ಜನರಿಗೆ ಭಾರಿ ಹೊಡೆತ ಬಿದ್ದಿದ್ದು, ಇಡೀ ಟ್ಯಾಕ್ಸಿ ನಿಲ್ದಾಣ ಪ್ರವಾಸಿಗರು ಬರದೇ ಖಾಲಿ ಖಾಲಿಯಾಗಿದೆ. ಅಮರನಾಥ ಯಾತ್ರೆಗೆ ಈ ಬಾರಿ ಹೆಚ್ಚು ಯಾತ್ರಾರ್ಥಿಗಳು ಬರುವುದು ಅನುಮಾನ ಎಂದು ಟ್ಯಾಕ್ಸಿ ಚಾಲಕ ವಸೀಂ ಅಲವತ್ತುಕೊಂಡಿದ್ದಾರೆ. ನಮ್ಮಿಂದ ಮೂರು ಪ್ರವಾಸಿ ತಾಣಗಳಿಗೆ ಹೋಗಬಹುದು. ಜೊತೆಗೆ ಲೇಹ್, ಲಡಾಕ್‌ಗೆ ಟ್ಯಾಕ್ಸಿ ಸೇವೆ ಒದಗಿಸುತ್ತೇವೆ ಎಂದು ವಾಸೀಂ ತಿಳಿಸಿದ್ದಾರೆ.
ಕುದುರೆ ಮಾಲೀಕರ ಬದುಕು ದುಸ್ತರ:
ಪಾಕ್ ಉಗ್ರರ ದಾಳಿಗೂ ಮೊದಲು ಬೈಸರನ್ ಕಣಿವೆ ನೋಡಲು ನಿತ್ಯ ಹಲವು ಪ್ರವಾಸಿಗರು ಬರುತ್ತಿದ್ದರು. ಇಲ್ಲಿಂದ 6 ಕಿಲೋಮೀಟರ್ ಸವಾರಿ ಮಾಡಿಸಿ ಒಂದಷ್ಟು ಹಣ ಸಂಪಾದಿಸಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೆವು. ಆದರೆ, ಈಗ ಅದಕ್ಕೂ ಪೆಟ್ಟು ಬಿದ್ದಿದ್ದು, ಬದುಕು ದುಸ್ತರವಾಗಿದೆ ಎಂದು ಕುದುರೆ ಮಾಲೀಕ ಅಹಮದ್ ಖಾಸೀಂ ತಮ್ಮ ದುಸ್ಥಿತಿ ವಿವರಿಸಿದ್ದಾರೆ.
ನಮ್ಮ ಸೇನೆಯನ್ನು ನಂಬಿ ಬನ್ನಿ:
ಪ್ರವಾಸಿಗರೇ ಇಲ್ಲ ಎನ್ನುತ್ತಿರುವಾಗ ಬೆಂಗಳೂರಿನ ಜಿಗಣಿಯಿಂದ ಪಹಲ್ಗಾಂಗೆ ಬಂದಿದ್ದ 12 ಮಂದಿ ಕನ್ನಡಿಗ ಪ್ರವಾಸಿಗರು, ಕನ್ನಡಪ್ರಭ ಜೊತೆ ಮಾತಾಡಿದ್ದು, ಭಯದ ವಾತಾವರಣ ಇಲ್ಲ. ಇಲ್ಲಿನ ಜನರು ತುಂಬಾ ಒಳ್ಳೆಯವರು. ಆದರೆ, ಪ್ರವಾಸಿ ಸ್ಥಳಗಳು ನೋಡಲು ಯಾತ್ರಿಗಳಿಗೆ ಮುಕ್ತವಾಗಿಲ್ಲ. ನಮ್ಮ ಭಾರತೀಯ ಸೇನೆ ರಕ್ಷಣೆಗೆ ಇದ್ದು, ನಂಬಿ ಬರಬಹುದು ಎಂದಿದ್ದಾರೆ.
ಕಾರ್ಯಾಚರಣೆಯಲ್ಲಿ ಕರ್ನಾಟಕದ ಸೈನಿಕರು:
ಮತ್ತೊಂದು ಕಡೆ ಪೈಶಾಚಿಕ ಕೃತ್ಯ ಮೆರೆದ ಭಯೋತ್ಪಾದಕರನ್ನು ಹುಡುಕುವ ಕೆಲಸ ನಿಂತಿಲ್ಲ. ಸಿಆರ್‌ಪಿಎಫ್ ಯೋಧರು ಕಾರ್ಯಾಚರಣೆ ನಡಸುತ್ತಲೇ ಇದ್ದಾರೆ. ವಿಶೇಷ ಎಂದರೆ ಇಲ್ಲೂ ಕರ್ನಾಟಕದ ಸೈನಿಕರು ಕಾರ್ಯಾಚರಣೆಯಲ್ಲಿದ್ದು, ಸುಮಾರು 60ಕ್ಕೂ ಹೆಚ್ಚು ಮಂದಿ ಕನ್ನಡದ ಯೋಧರು ವಿಶೇಷ ಆಪರೇಷನ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ.