ಗೋಕರ್ಣ:
ಸ್ವಚ್ಛತೆಗಾಗಿ ಕಳೆದ 9 ವರ್ಷಗಳಿಂದ ವಿವಿಧ ಕಾರ್ಯಚಟುವಟಿಕೆ ನಡೆಸುತ್ತಿರುವ ಅಂಕೋಲಾದ ಪಹರೆ ವೇದಿಕೆ ಪ್ರವಾಸಿ ತಾಣ ಗೋಕರ್ಣದಲ್ಲೂ ಘಟಕ ಆರಂಭಿಸಿ ಸ್ವಚ್ಛತಾ ಕಾರ್ಯದ ಮೂಲಕ ಸುಂದರ ಪರಿಸರಕ್ಕಾಗಿ ಕೈಜೋಡಿಸಲಿದೆ. ಮಾ. 10ರಂದು ಅಂಕೋಲಾದಿಂದ ಪಾದಯಾತ್ರೆ ಮೂಲಕ ಇಲ್ಲಿಗೆ ಆಗಮಿಸಿ ಸ್ವಚ್ಛತಾ ಕಾರ್ಯದೊಂದಿಗೆ ವಿಧ್ಯುಕ್ತವಾಗಿ ಚಾಲನೆಗೊಳ್ಳಲಿದೆ ಎಂದು ಪಹರೆ ಸಂಘಟನೆ ಅಧ್ಯಕ್ಷ, ವಕೀಲ ನಾಗರಾಜ ನಾಯಕ ಬಾಸಗೋಡ ತಿಳಿಸಿದ್ದಾರೆ.ಈ ಕುರಿತು ಇಲ್ಲಿನ ಶಂಕರಮಠದಲ್ಲಿ ಗುರುವಾರ ಹನೇಹಳ್ಳಿ, ನಾಡುಮಾಸ್ಕೇರಿ, ತೊರ್ಕೆ ಗ್ರಾಪಂ ಪ್ರತಿನಿಧಿಗಳು ಹಾಗೂ ಈ ಭಾಗದ ನಾಗರಿಕರೊಂದಿಗೆ ಪೂರ್ವಭಾವಿ ಸಭೆ ನಡೆಸಿ ವಿವರಿಸಿದ್ದಾರೆ.ವಿಶ್ವ ಹಾಗೂ ದೇಶದ ಯಾವುದೇ ಕಡೆ ಹೋದರು ಉತ್ತರ ಕನ್ನಡ ಎಂದರೆ ತಿಳಿಯದು. ಬದಲಿಗೆ ಗೋಕರ್ಣ ಎಂದರೆ ಗುರುತು ಹಿಡಿಯುತ್ತಾರೆ. ಹೀಗೆ ಜಿಲ್ಲೆಯ ನಿಶಾನೆಯಾಗಿರುವ ಪುಣ್ಯ ಕ್ಷೇತ್ರದ ಸ್ವಚ್ಛತೆಗೆ ನಮ್ಮ ಸಂಘಟನೆ ಬೆಂಬಲ ನೀಡುತ್ತದೆ. ಈ ಕಾರ್ಯಕ್ಕೆ ಇಲ್ಲಿನ ಜನಪ್ರತಿನಿಧಿಗಳು, ವಿವಿಧ ಸಂಘಟನೆ ಮತ್ತು ಜನರು ಸಹಕಾರ ನೀಡಬೇಕು ಎಂದು ವಿನಂತಿಸಿದರು. ವಾರಕೊಮ್ಮೆ ನಿಗದಿತ ಸ್ಥಳ ಗುರುತಿಸಿ ಸ್ವಚ್ಛತಾ ಕಾರ್ಯ ಮಾಡುವ ಮೂಲಕ ಪರಿಸರ ಸುಂದರವಾಗಿಡಲು ತಿಳಿವಳಿಕೆ ನೀಡಿ ಜಾಗೃತಗೊಳಿಸಬೇಕು ಎಂದರು.ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸಮುನಾ ಗೌಡ, ಆನಂದು ಕವರಿ, ಸಣ್ಣು ಗೌಡ, ಸದಸ್ಯರಾದ ರಾಜೇಶ ನಾಯಕ, ಪ್ರಭಾಕರ ಪ್ರಸಾದ, ಮಹೇಶ ಶೆಟ್ಟಿ, ಹರೀಶ ಗೌಡ ಮಾತನಾಡಿ, ಸ್ವಚ್ಛತಾ ಕಾರ್ಯಕ್ಕೆ ಕೈಗೊಳ್ಳಬಹುದಾದ ಕ್ರಮ ವಿವರಿಸಿ ನಾವೆಲ್ಲರೂ ಜತೆಯಾಗಿ ಸಹಕಾರ ನೀಡುತ್ತೇವೆ ಎಂದರು.
ಸಭೆಯಲ್ಲಿ ಗ್ರಾಪಂ ಸದಸ್ಯರಾದ ರಮೇಶ ಪ್ರಸಾದ, ಮಂಜುನಾಥ ಶೆಟ್ಟಿ, ಭಾರತೀ ದೇವತೆ, ಲಕ್ಷ್ಮೀಶ ಗೌಡ, ಮೋಹನ ಮೂಡಂಗಿ, ಕುಮಾರ ಮರ್ಕಾಂಡೆ, ವಸಂತ ಶೆಟ್ಟಿ, ರವಿ ಗುನಗ, ಪಹರೆ ವೇದಿಕೆ ಕಾರವಾರದ ಸದಾನಂದ ಮಾಂಜ್ರೇಕರ, ಎಲ್.ಎಸ್. ಫರ್ನಾಂಡಿಸ್, ರಾಜೇಶ ದೇವಕಾರ, ಅಜಯ ಸಾವಕಾರ್ ಉಪಸ್ಥಿತರಿದ್ದರು.