ಬಸವರಾಜ ಸರೂರ
ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು ರೈತ ಹೋರಾಟಗಾರ ಹಾಗೂ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಹನುಮಂತಪ್ಪ ಕಬ್ಬಾರ ಮೊಹರಂ ಹಬ್ಬದ ಸಂದರ್ಭದಲ್ಲಿ ಪ್ರತಿ ವರ್ಷ ಹುಲಿ ವೇಷ ಧರಿಸುವವರಿಗೆ ಬಣ್ಣ ಬಳೆಯುವ ಕಾಯಕ ಮಾಡುತ್ತಾ ಬಂದಿದ್ದಾರೆ. ರಾಣಿಬೆನ್ನೂರು ತಾಲೂಕು ಮಣಕೂರ ಗ್ರಾಮದವರಾದ ಹನುಮಂತಪ್ಪ ಕಬ್ಬಾರ ಬಾಲ್ಯದಿಂದಲೇ ತನ್ನ ಸಹೋದರ ಮತ್ತು ದೊಡ್ಡಪ್ಪನವರು ಹುಲಿ ವೇಷ ಧರಿಸುವವರಿಗೆ ಬಣ್ಣ ಬಳಿಯುವುದನ್ನು ಆಸಕ್ತಿಯಿಂದ ಗಮನಿಸುತ್ತಿದ್ದನು. ಬರ ಬರುತ್ತಾ ಇದು ಹನುಮಂತಪ್ಪನನ್ನು ಆವರಿಸಿಕೊಂಡು ಬಣ್ಣ ಬಳಿಯಲು ಪ್ರೇರೇಪಿಸಿತು. ಕಳೆದ 30 ವರ್ಷಗಳಿಂದಲೂ ಈ ಕೆಲಸವನ್ನು ಮಾಡಿಕೊಂಡು ಬಂದಿರುವ ಹನುಮಂತಪ್ಪ ಇದುವರೆಗೂ ಸುಮಾರು 200ಕ್ಕೂ ಅಧಿಕ ಹುಲಿ ವೇಷ ಧರಿಸುವವರಿಗೆ ಬಣ್ಣ ಬಳಿದಿದ್ದಾರೆ. ಲಾಭದ ಆಸೆಯ ಬದಲಾಗಿ ದೇವರಿಗೆ ತಾನು ಸಲ್ಲಿಸುವ ಸೇವೆ ಎಂದುಕೊಂಡು ಈ ಕೆಲಸ ಮಾಡುತ್ತಿದ್ದಾರೆ.ದುಬಾರಿ ಬಣ್ಣ: ಪ್ರಾರಂಭದಲ್ಲಿ ₹80ಗಳ ಬಣ್ಣದಲ್ಲಿ ಮೂರರಿಂದ ನಾಲ್ಕು ಜನರಿಗೆ ಬಣ್ಣ ಬಳೆಯಲು ಸಾಧ್ಯವಾಗುತ್ತಿತ್ತು. ಆದರೆ ಬಣ್ಣದ ದರದಲ್ಲಿ ಏರಿಕೆಯಾಗಿರುವ ಕಾರಣ ಸದ್ಯ ₹.600 ಬಣ್ಣದಲ್ಲಿ ಇಬ್ಬರಿಗೆ ಬಣ್ಣ ಬರೆಯಲು ಸಾಧ್ಯವಾಗುತ್ತಿಲ್ಲ ಎನ್ನುವುದು ಹನುಮಂತಪ್ಪನ ಅಭಿಮತ.
ತಾಲೂಕಿನ ಹೊಳೆ ಆನ್ವೇರಿ, ಇಟಗಿ, ಮುದೇನೂರ, ಮುಷ್ಟೂರ, ಲಿಂಗದಹಳ್ಳಿ, ಬಸಲಿಕಟ್ಟಿ, ಮಾಗೋಡ ಗ್ರಾಮಗಳಲ್ಲಿ ಬಣ್ಣ ಬಳೆಯುವ ಕೆಲಸ ಮಾಡುತ್ತಿದ್ದಾರೆ. ಕೆಲವರು ಇವರ ಊರಿಗೆ ಬಂದು ಬಣ್ಣ ಬಳಿಸಿಕೊಂಡು ಹೋಗುತ್ತಾರೆ.ಒಬ್ಬ ವ್ಯಕ್ತಿಗೆ ಹುಲಿ ವೇಷ ಬರೆಯಲು 4-5 ತಾಸು ಸಮಯ ತಗಲುತ್ತದೆ. ಹೀಗಾಗಿ ಒಂದು ದಿನಕ್ಕೆ 3-4 ಜನರಿಗೆ ಬಣ್ಣ ಬಳಿಯುತ್ತಾರೆ. ಪ್ರಸಕ್ತ 15-20 ಜನರಿಗೆ ಬಣ್ಣ ಬಳಿಯುವುದಾಗಿ ತಿಳಿಸಿದ್ದಾರೆ.
ಹನುಮಂತಪ್ಪನ ಪ್ರಕಾರ ಹುಲಿ ವೇಷ ಧರಿಸಲು ಮುಸಲ್ಮಾನರಿಗಿಂತ ಹೆಚ್ಚಿಗೆ ಹಿಂದೂಗಳೇ ಮುಂದೆ ಬರುತ್ತಿದ್ದಾರೆ. ಮುಸಲ್ಮಾನರಲ್ಲಿ ಪಿಂಜಾರ (ನದಾಫ್) ಸಮಾಜದವರು ವೇಷ ಧರಿಸುತ್ತಾರೆ. ಹುಲಿ ವೇಷ ಧರಿಸುವವರಿಗೆ ಬಣ್ಣ ಬಳಿಯುವ ಕೆಲಸವು ನನಗೆ ತೃಪ್ತಿ ನೀಡಿದೆ. ಇದರಿಂದ ಹಣ ಗಳಿಸುವುದಕ್ಕಿಂತ ದೇವರ ಸೇವೆ ಮಾಡಿದಂತಾಗುತ್ತದೆ ಎಂದು ಹನುಮಂತಪ್ಪ ಕಬ್ಬಾರ ಹೇಳುತ್ತಾರೆ.