ಬಹುಮುಖ ಪ್ರತಿಭೆ ಅನಾವರಣಕ್ಕೆ ಚಿತ್ರಕಲಾ ಸ್ಪಧೆ೯ ಸಹಕಾರಿ: ಡಿಸಿಎಫ್ ಬಾಸ್ಕರ್

KannadaprabhaNewsNetwork |  
Published : Dec 09, 2025, 12:30 AM IST
8ಕೆಜಿಎಲ್50 ಕೊಳ್ಳೇಗಾಲದಲ್ಲಿ ಕನ್ನಡಪ್ರಭ, ಸುವಣ೯ನ್ಯೂಸ್ ವಾಹಿನಿ ವತಿಯಿಂದ ಅಯೋಜಿಸಲಾಗಿದ್ದ ಚಿತ್ರಕಲಾ ಸ್ಪಧೆ೯ಯನ್ನು ಮಲೆಮಹದೇಶ್ವರ ವನ್ಯಧಾನದ ಡಿಸಿಎಫ್ ಬಾಸ್ಕರ್ ಉದ್ಘಾಟಿಸಿದರು. ಡಾ.ದತ್ತೇಶ್ ಕುಮಾರ್, ಗುರುಶಾಂತಪ್ಪ ಬೆಳ್ಳುಂಡಗಿ, ಶಂಕರ್, ರಂಗಸ್ವಾಮಿ, ಮಂಜುಳ ಇನ್ನಿತರಿದ್ದರು. | Kannada Prabha

ಸಾರಾಂಶ

ಮುಂದಿನ ಪೀಳಿಗೆಗೆ ಪರಿಸರ ಉಳಿಯುವಂತಾಗಬೇಕು, ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತಮ್ಮ ಗುರುತರ ಜವಾಬ್ದಾರಿ ಅರಿಯಬೇಕು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ವಿದ್ಯಾರ್ಥಿಗಳಲ್ಲಿ ಅಡಕವಾಗಿರುವ ಬಹುಮುಖ ಪ್ರತಿಭೆಯ ಅನಾವರಣಕ್ಕೆ ಕನ್ನಡಪ್ರಭ , ಸುವರ್ಣನ್ಯೂಸ್ ನಡೆಸುತ್ತಿರುವ ಚಿತ್ರಕಲಾ ಸ್ಪರ್ಧೆ ಸಹಕಾರಿಯಾಗಿದೆ ಎಂದು ಮಲೆಮಹದೇಶ್ವರ ವನ್ಯಧಾಮದ ಉಪಸಂರಕ್ಷಣಾಧಿಕಾರಿ ಬಾಸ್ಕರ್ ಹೇಳಿದರು.

ಅವರು ಕನ್ನಡಪ್ರಭ- ಸುವರ್ಣವಾಹಿನಿ, ಅರಣ್ಯ ಇಲಾಖೆ, ಚಿತ್ರಕಲಾ ಪರಿಷತ್ ಸಹಯೋಗದಲ್ಲಿ ಪಟ್ಟಣದ ಮಾನಸ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಚಿತ್ರಕಲಾ ಸ್ಪರ್ಧೆಯನ್ನು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಪರಿಸರ ಉಳಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ತರವಾದುದು, ಮಾನವನ ಅತಿಯಾಸೆಯಿಂದಾಗಿ ಪರಿಸರ ನಶಿಸುತ್ತಿದ್ದು, ಈ ನಿಟ್ಟಿನಲ್ಲಿ ಎಲ್ಲರೂ ಪರಿಸರ ಕಾಳಜಿ ಹೊಂದಬೇಕು, ಪ್ರತಿಯೊಬ್ಬರೂ ಅರಣ್ಯ ಉಳಿಸುವ ಮೂಲಕ ವನ್ಯಸಂಪತ್ತು ಸಂರಕ್ಷಿಸುವ ಗುರುತರ ಜವಾಬ್ದಾರಿ ಅರಿಯಬೇಕು ಎಂದರು.

ಕನ್ನಡಪ್ರಭ ಮತ್ತು ಸುವರ್ಣವಾಹಿನಿ ನಿರಂತರವಾಗಿ ಅರಣ್ಯ ಉಳಿಸುವ ಕೆಲಸವನ್ನು ಮಾಡುತ್ತಲೇ ಬಂದಿದೆ. ಅದೇ ರೀತಿಯಲ್ಲಿ ವಿದ್ಯಾರ್ಥಿಗಳಲ್ಲಿ ಪರಿಸರ ಹಾಗೂ ವನ್ಯಜೀವಿ ಸಂರಕ್ಷಣೆ ಕುರಿತ ಈ ಸ್ಪರ್ಧೆಯೂ ಸಹ ಮಹತ್ತರ ಪಾತ್ರವಹಿಸುವ ಜೊತೆ ವಿದ್ಯಾರ್ಥಿಗಳಲ್ಲಿ ಅರಣ್ಯ, ಪರಿಸರದ ಬಗ್ಗೆ ಆಸಕ್ತಿ ಮೂಡಿಸುವಲ್ಲಿ ಮುಂದಾಗಿರುವುದು ಹೆಮ್ಮೆಯ ವಿಷಯ, ತಾಲೂಕು, ಜಿಲ್ಲೆ ಹಂತದಲ್ಲಿ ಸ್ಪರ್ಧೆ ನಡೆಸಿ ಇಲ್ಲಿ ಆಯ್ಕೆಯಾದ ಮಕ್ಕಳನ್ನು ರಾಜ್ಯಮಟ್ಟದಲ್ಲಿ ಸ್ಪರ್ಧೆ ನಡೆಸಿ ರಾಜ್ಯದಲ್ಲಿ 9 ಲಕ್ಷಕ್ಕೂ ಅಧಿಕ ಮೊತ್ತದ ನಗದು ಬಹುಮಾನ ನೀಡುತ್ತಿರುವುದು ಸಂತಸದ ವಿಚಾರ ಎಂದರು.

ಮಾನಸ ಶಿಕ್ಷಣ ಸಂಸ್ಥೆ ಶಿಸ್ತು ಬದ್ಧ ಸಂಸ್ಥೆಯಾಗಿದ್ದು, ಗ್ರಾಮಾಂತರ ಪ್ರದೇಶಗಳ ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡುತ್ತಿರುವುದು ಹೆಮ್ಮೆಯ ಸಂಗತಿ, ಚಾ.ನಗರ ಜಿಲ್ಲೆ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ವನ್ಯಜೀವಿಗಳ

ಸಂರಕ್ಷಕ ಪ್ರದೇಶವಾಗಿದೆ ಎಂದರು.

ಮಾನಸ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿಗಳಾದ ಡಾ.ದತ್ತೇಶ್ ಕುಮಾರ್ ಮಾತನಾಡಿ, ಮುಂದಿನ ಪೀಳಿಗೆಗೆ ಪರಿಸರ ಉಳಿಯುವಂತಾಗಬೇಕು, ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತಮ್ಮ ಗುರುತರ ಜವಾಬ್ದಾರಿ ಅರಿಯಬೇಕು ಎಂದರು.

ಚಿತ್ರಕಲಾ ಸ್ಪರ್ಧೆ ಆಯೋಜಿಸುವ ಮೂಲಕ ಕನ್ನಡಪ್ರಭ ದಿನಪತ್ರಿಕೆ ಹಾಗೂ ಸುವರ್ಣ ವಾಹಿನಿ ಮಕ್ಕಳಲ್ಲಿ ಪರಿಸರದ ಬಗ್ಗೆ ಕಾಳಜಿ, ಅರಣ್ಯ ಸಂಪತ್ತು ಉಳಿಸುವಲ್ಲಿ ಸಹಕಾರಿಯಾಗಲಿದೆ. ಸಾವಿರಾರು ಮಂದಿ ಬರವಣಿಗೆ ಮೂಲಕ ವ್ಯಕ್ತಪಡಿಸಲಾಗದ ಅಂಶವನ್ನು ಕಲೆಯೊಂದರ ಮೂಲಕ ಅನಾವರಣಗೊಳಿಸುವ ಶಕ್ತಿ ಚಿತ್ರಕಲೆಗಿದೆ ಎಂದರು.

ಇಂದು ನಾವು ನಮ್ಮ ದುರಾಸೆಗಾಗಿ , ಸ್ವಾರ್ಥಕ್ಕಾಗಿ ಪರಿಸರ ನಾಶಕ್ಕೆ ಮುಂದಾಗಿದ್ದೇವೆ, ಇದರಿಂದಾಗಿ ತಾಪಮಾನ ಹೆಚ್ಚಳವಾಗಿದೆ, ದೆಹಲಿಯಲ್ಲಿ ವಾಯಮಾಲಿನ್ಯ ಸಂಕಷ್ಟ ಅನುಭವಿಸುವಂತಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಅರ್ಥೈಸಿಕೊಳ್ಳಬೇಕು, ಹೆಚ್ಚು ಮೊಬೈಲ್ ಬಳಕೆಯಿಂದಲೂ ಸಾಕಷ್ಟು ತೊಂದರೆಯಾಗುತ್ತಿದೆ ಎಂದರು.

ರಾಜ್ಯ ಹಂತದಲ್ಲಿ ನಡೆಸಲಾಗುತ್ತಿರುವ ಈ ಸ್ಪರ್ಧೆಗೆ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳೇ ಚಾಲನೆ ನೀಡಿದ್ದಾರೆ, ಈ ಸ್ಪರ್ಧೆ ಯಶಸ್ವಿಯಾಗಲಿ ಎಂದು ಶುಭಕೋರಿದರು.

ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿ ಗುರುಶಾಂತಪ್ಪ ಬೆಳ್ಳುಂಡಗಿ ಅವರು ಮಾತನಾಡಿ, ಚಿತ್ರ ಬಿಡಿಸುವ ಕಲೆ ಪಠ್ಯೇತರ ಚಟುವಟಿಕೆಯಾಗಿದೆ. ಈ ಕಲೆಯೂ ಸಹ ಅತ್ಯಂತ ಮಹತ್ವದ ಕಲೆಯಾಗಿದೆ. ಚಿತ್ರಕಲೆ ಪ್ರಸ್ತುತ ದಿನಗಳಲ್ಲಿ ಯಾವುದಕ್ಕೂ ಕಡಿಮೆ ಇಲ್ಲ, ವಿಶ್ವದ ಹಲವಾರು ಕಡೆ ಈ ಕಲೆ ಬೆಳೆದಿದೆ. ಆದಿ ಮಾನವರಿಂದಲೂ ಚಿತ್ರಬಿಡಿಸುವ ಕಲೆ ಜೀವಂತವಾಗಿತ್ತು. ಇಂದಿನ ಚಿತ್ರಕಲಾ ಸ್ಪರ್ಧೆ ಯಶಸ್ವಿಯಾಗಲಿ ಎಂದು ಶುಭಹಾರೈಸಿದರು.

ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ಉಪನಿರ್ದೇಶಕ ಚಂದ್ರಪಾಟೀಲ್, ಮಾನಸ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ನಾಗರಾಜು, ಕ್ಷೇತ್ರಶಿಕ್ಷಣಾಧಿಕಾರಿ ಮಂಜುಳ, ಮುಖ್ಯಶಿಕ್ಷಕ ಶಂಕರ್, ಉದ್ಯಮಿ ಅಶೋಕ್, ಹಿರಿಯ ಪತ್ರಕರ್ತರುಗಳಾದ ಎನ್. ರಾಜೇಶ್, ದೇವರಾಜನಾಯ್ಡು, ನಾಗೇಂದ್ರಸ್ವಾಮಿ, ಅಕ್ಷರ ದಾಸೋಹದ ರಂಗಸ್ವಾಮಿ, ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಚಿಕ್ಕರಾಜು, ಮುಖ್ಯಶಿಕ್ಷಕ ಶಂಕರ್, ಶಿಕ್ಷಕರುಗಳಾದ ಶಿಲ್ಪ, ಅನಿತಾ, ಮಾನಸ ಸಂಸ್ಥೆಯ ಡಾ. ಚನ್ನಶೆಟ್ಟಿ, ಸಂಯೋಜನಾಧಿಕಾರಿ ನಾಗಭೂಷಣ್, ತೀರ್ಪುಗಾರರುಗಳಾದ ಆದರ್ಶ ಶಾಲೆಯ ಸ್ಯಾಮುವೇಲು, ನಿಸರ್ಗ ಶಾಲೆಯ ಪ್ರಶಾಂತ್, ಕಲಾವಿದ ಮಾಂಬಳ್ಳಿ ಕೃಷ್ಣಮೂರ್ತಿ, ಮಾನಸ ಬಾಬು ಇನ್ನಿತರರು ಹಾಜರಿದ್ದರು.

-----

ಚಿತ್ರಕಲೆಯಿಂದಲೂ ಬದುಕು ಕಟ್ಟಿಕೊಳ್ಳಬಹುದು, ಈ ಕಲೆಗೆ ಅಂತ್ಯವಿಲ್ಲ: ಡಿಡಿಪಿಐ ಚಂದ್ರಪಾಟೀಲ್

ಚಿತ್ರಕಲೆ ಎಂಬುದು ಎಂದಿಗೂ ನಶಿಸದ, ಜೀವನ ರೂಪಿಸುವಲ್ಲಿ ಸಹಕರಿಸುವ ಅತ್ಯಂತ ಮಹತ್ವದ ಕಲೆಯಾಗಿದ್ದು, ಈ ಕಲೆಯಿಂದಲೂ ಸಹ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಚಾ.ನಗರ ಡಿಡಿಪಿಐ ಚಂದ್ರಪಾಟೀಲ್ ಹೇಳಿದರು.

ಅವರು ಕನ್ನಡಪ್ರಭ- ಸುವರ್ಣವಾಹಿನಿ ಅರಣ್ಯ. ಇಲಾಖೆ, ಚಿತ್ರಕಲಾ ಪರಿಷತ್ ಸಹಯೋಗದಲ್ಲಿ ಮಾನಸ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.

ಇಂದು ಈ ಸ್ಪರ್ಧೆಯಲ್ಲಿ ಪಾಲ್ಗೊಂಡು ಪರಿಸರ ಸಂರಕ್ಷಣೆ ಮತ್ತು ವನ್ಯಜೀವಿ ಸಂರಕ್ಷಣೆ ಕುರಿತಂತೆ ತಮ್ಮ ಕಲೆಯನ್ನು ಚಿತ್ರದಲ್ಲಿ ಅರಳಿಸಿದ ಪ್ರತಿಯೊಬ್ಬ ವಿದ್ಯಾರ್ಥಿಗಳು ಸಹ ಪರಿಸರ ಪ್ರೇಮಿಗಳೇ ಆಗಿದ್ದಾರೆ, ಪರಿಸರ ಉಳಿಸುವಲ್ಲಿ ಯುವ ಪೀಳಿಗೆ ಪಾತ್ರ ಮಹತ್ತರವಾದುದು, ಈ ನಿಟ್ಟಿನಲ್ಲಿ ಕನ್ನಡಪ್ರಭ, ಸುವರ್ಣವಾಹಿನಿ ನಡೆಸುತ್ತಿರುವ ಈ ಸ್ಪರ್ಧೆ ಅತ್ಯಂತ ಪ್ರಶಂಸಾರ್ಹ ಎಂದರು.

ಓದು ಬರಹ ಅಂಕಗಳಷ್ಟೆ ಶಿಕ್ಷಣವಲ್ಲ ಇದಕ್ಕೆ ಪೂರಕವಾಗಿ ಚಿತ್ರಕಲೆಯಂಥ ಇತರೆ ಚಟುವಟಿಕೆಗಳೂ ಸಹ ಶಿಕ್ಷಣದ ಅಂಗಗಳೇ ಆಗಿವೆ, ಇಂದು ಪ್ರತಿಯೊಬ್ಬ ಮಕ್ಕಳು ತಮ್ಮ ಚಿತ್ರಕಲೆ ಮೂಲಕ ಪರಿಸರದ ಕಾಳಜಿ ಹೊರಹೊಮ್ಮಿಸಿದ್ದು ಇಂದಿನ ಕಾರ್ಯಕ್ರಮ ನನ್ನ ಮನಸ್ಸಿಗೆ ಸಂತಸ ತಂದಿದೆ ಎಂದರು.

ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ರಂಗಸ್ವಾಮಿ ಮಾತನಾಡಿ, ದೇಶದಲ್ಲಿ ಇಂದು ಮಾನವನ ಅತಿಯಾಸೆಯಿಂದಾಗಿ ಪರಿಸರ ಲೂಟಿಯಾಗುತ್ತಿದೆ. ಚಿತ್ರಕಲೆ ಜ್ಞಾನ ಹೆಚ್ಚಿಸಿಕೊಳ್ಳಲು ಸಹ ಮಹತ್ತರ ಪಾತ್ರ ವಹಿಸಲಿದೆ, ವನ್ಯಜೀವಿ ಮತ್ತು ಪರಿಸರ ಉಳಿಸುವಲ್ಲಿ ಕನ್ನಡಪ್ರಭ ದಿನಪತ್ರಿಕೆ ಇಂತಹ ಕಾರ್ಯಕ್ರಮ ಆಯೋಜಿಸಿ ಮಕ್ಕಳಲ್ಲಿ ಚಿತ್ರಕಲಾ ಸ್ಪರ್ಧೆಯ ಆಸಕ್ತಿ ಹೆಚ್ಚುವ ನಿಟ್ಟಿನಲ್ಲಿ ಮಹತ್ತರ ಪಾತ್ರ ವಹಿಸಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳ ಅವರು ಮಾತನಾಡಿ, ಚಿತ್ರಕಲೆ ವಿದ್ಯಾರ್ಥಿಗಳ ಮನಸ್ಸಿನಲ್ಲಿನ ಭಾವನೆಗಳ ಸಂಗಮವಾಗಿದ್ದು ಕನ್ನಡಪ್ರಭ ನಾಡಿನ ಹೆಸರಾಂತ ದಿನಪತ್ರಿಕೆಯಾಗಿದ್ದು, ಇಂದಿನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಬಹುಮಾನ ದೊರೆಯಲಿಲ್ಲ ಎಂದು ನಿರಾಶರಾಗಬಾರದು, ಇಂತಹ ಸ್ಫರ್ಧೆಗಳ ಮೂಲಕ ವಿದ್ಯಾರ್ಥಿಗಳಲ್ಲಿನ ಅಂತರಂಗದ ಕಲೆ ಅರಳುವಂತಾಗಲಿ, ಯಾವುದೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಮೂಲಕ ನಿಮ್ಮ ಸಾಮರ್ಥ್ಯ ಪ್ರದರ್ಶಿಸುವಲ್ಲಿ ಮುಂದಾಗಿ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಲ್ಲರಿಗೂ ಸಮಾನತೆ ತಂದು ಕೊಟ್ಟ ಮಹಾನ್ ವ್ಯಕ್ತಿ ಅಂಬೇಡ್ಕರ್: ಲಿಂಗರಾಜಮೂರ್ತಿ
ಜೇಸಿ ಸಂಸ್ಥೆಯಿಂದ ದೇಶದ ಮುಂದಿನ ನಾಯಕರ ಉದಯ: ಪ್ರಜ್ವಲ್ ಎಸ್. ಜೈನ್