ಭಾರತದ ಇತಿಹಾಸ ಗುರುತಿಸಲು ಚಿತ್ರಕಲೆಯೂ ಆಧಾರ

KannadaprabhaNewsNetwork |  
Published : Sep 07, 2025, 01:00 AM IST

ಸಾರಾಂಶ

ಭಾರತೀಯ ಇತಿಹಾಸ, ಪರಂಪರೆಯನ್ನು ಗುರುತಿಸಲು ಇರುವ ಪ್ರಮುಖ ಆಧಾರಗಳಲ್ಲಿ ಚಿತ್ರಕಲೆಯೂ ಒಂದು. ಚಿತ್ರಕಲಾವಿದರಾಗಿ ನೀವೆಲ್ಲರೂ ಅಂತಹ ಪರಂಪರೆಯನ್ನು ಉಳಿಸುವ ರಾಯಭಾರಿಗಳು ಎಂದು ಜಿ.ಪಂ.ಸಿಇಒ ಜಿ.ಪ್ರಭು ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರು

ಭಾರತೀಯ ಇತಿಹಾಸ, ಪರಂಪರೆಯನ್ನು ಗುರುತಿಸಲು ಇರುವ ಪ್ರಮುಖ ಆಧಾರಗಳಲ್ಲಿ ಚಿತ್ರಕಲೆಯೂ ಒಂದು. ಚಿತ್ರಕಲಾವಿದರಾಗಿ ನೀವೆಲ್ಲರೂ ಅಂತಹ ಪರಂಪರೆಯನ್ನು ಉಳಿಸುವ ರಾಯಭಾರಿಗಳು ಎಂದು ಜಿ.ಪಂ.ಸಿಇಒ ಜಿ.ಪ್ರಭು ತಿಳಿಸಿದ್ದಾರೆ.

ನಗರದ ಬಾಪೂಜಿ ಶಿಕ್ಷಣ ಸಂಸ್ಥೆಯ ರವೀಂದ್ರ ಕಲಾನಿಕೇತನಕ್ಕೆ 44 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಜೈನ್ ಶಾಂತಮಣಿ ಕಲಾ ಕೇಂದ್ರ ಆಯೋಜಿಸಿದ್ದ ಆತ್ಮ ಸಂತೋಷಕ್ಕಾಗಿ ಎರಡು ದಿನಗಳ ಗುರುಶಿಷ್ಯ ಪರಂಪರ ರಾಜ್ಯ ಕಲಾ ಶಿಬಿರವನ್ನು ದೀಪ ಬೆಳಗಿಸಿ, ಕಲಾಕೃತಿ ರಚಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಭಾರತದ ಮೂರು ಸಾವಿರ ವರ್ಷಗಳ ಇತಿಹಾಸ ಮತ್ತು ಪರಂಪರೆಯನ್ನು ತಿಳಿಯಲು ಇರುವ ಭಾಷೆ, ಬರವಣಿಗೆ ಮತ್ತು ಚಿತ್ರಕಲೆ ಪ್ರಮುಖ ಸಾಧನಗಳಾಗಿವೆ. ಅಜಂತಾ, ಎಲ್ಲೋರ ಸೇರಿದಂತೆ ಅನೇಕ ದೇವಾಲಯಗಳು, ಗುಹೆಗಳು ನಮ್ಮ ಭವ್ಯ ಪರಂಪರೆಯನ್ನು ಜಗತ್ತಿನ ಮುಂದೆ ತೆರೆದಿಟ್ಟಿವೆ ಎಂದರು.

ಚಿತ್ರಕಲೆ ಮನುಷ್ಯನ ಮನಸ್ಸಿನ ಅಭಿವ್ಯಕ್ತಿಯ ಭಾಗವಾಗಿದೆ. ಲಲಿತ ಕಲೆಗಳಲ್ಲಿ ಇಂದಿಗೂ ಚಿತ್ರಕಲೆ ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿದೆ. ಇದು ಒಂದು ಪ್ರಕೃತಿಯ ಭಾಷೆ. ಆದರೆ ಇದನ್ನು ನಮ್ಮ ಯುವ ಪೀಳಿಗೆಗೆ ಹೇಳಿಕೊಡುವುದರಲ್ಲಿ ನಾವು ವಿಫಲರಾಗಿದ್ದೇವೆ. ಹಾಗಾಗಿ ಎಲ್ಲರೂ ಆತ್ಮತೃಪ್ತಿಗಿಂತ ಅನ್ನ ನೀಡುವ ಶಿಕ್ಷಣಕ್ಕೆ ಒತ್ತು ನೀಡಿ, ಮನುಷ್ಯನಿಗೆ ಸಂಸ್ಕಾರ, ಗೌರವ ತಂದುಕೊಡುವ ಕಲಾ ಮಾಧ್ಯಮವನ್ನು ಕಡೆಗಣಿಸಿದ್ದಾರೆ. ಅವರನ್ನು ಪುನಃ ಇತ್ತ ಕರೆತರಲು ಜೈನ್ ಶಾಂತಮಣಿ ಕಲಾ ಕೇಂದ ಗುರುಶಿಷ್ಯ ಪರಂಪರೆ ಅಭಿಯಾನ ಆರಂಭಿಸಿರುವುದು ಒಂದು ಒಳ್ಳೆಯ ಬೆಳವಣಿಗೆ ಎಂದು ಸಿಇಒ ನುಡಿದರು.

ಸುಮಾರು 300 ವರ್ಷಗಳ ಕಾಲ ಕರ್ನಾಟಕವನ್ನಾಳಿದ ಹೊಯ್ಸಳ ರಾಜಮನೆತನ, 1596/ಕ್ಕೂ ಹೆಚ್ಚು ದೇವಾಲಯಗಳನ್ನು ನಿರ್ಮಾಣ ಮಾಡಿದೆ.ಇಂದಿಗೂ ಹೊಯ್ಸಳ ದೇವಾಲಯಗಳು ಅಧುನಿಕ ತಂತ್ರಜ್ಞಾನಕ್ಕೆ ಸವಾಲಾಗಿವೆ.ಕಲೆಯ ಆರಾಧನೆ ಕಡಿಮೆಯಾಗಿ ಮನುಷ್ಯನ ಜೀವನ ಯಾಂತ್ರಿಕೃತವಾಗಿದೆ. ಮೌಲ್ಯ ರಹಿತ ಜೀವನವನ್ನು ನಡೆಸುತ್ತಿದ್ದಾರೆ. ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ಮೂಲಕ ನಾವೆಲ್ಲರೂ ಇದನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಕೆಲಸ ಮಾಡೋಣ ಎಂದು ನುಡಿದರು.

ಜೈನ್ ಶಾಂತಮಣಿ ಕಲಾ ಕೇಂದ್ರದ ಮುಖ್ಯಸ್ಥರಾದ ಡಾ.ಅವಿನಾಶ್ ಕಾಟೇ ಮಾತನಾಡಿ, ಪ್ರಬಲ ಮಾಧ್ಯಮವಾಗಿ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಜೈನ್ ಶಾಂತಮಣಿ ಕಲಾಕೇಂದ್ರ ಗುರುಶಿಷ್ಯ ಪರಂಪರೆ ಅಭಿಯಾನವನ್ನು ಆಯೋಜಿಸಿದೆ. ಮನಸ್ಸಿನ ಭಾವನೆಗಳಿಗೆ ಬಣ್ಣ ಹಚ್ಚಿ, ಭಾಷೆ ಪರಿಕಲ್ಪನೆ ನೀಡುತ್ತಿದ್ದ ಕಲಾ ಪ್ರಕಾರ ಇಂದು ಕ್ಷೀಣಿಸತೊಡಗಿದೆ. ಬಹುತೇಕ ಚಿತ್ರಕಲಾ ಶಾಲೆಗಳು ಮುಚ್ಚುವ ಹಂತದಲ್ಲಿವೆ. ಚಿತ್ರಕಲೆಯ ಜೊತೆಗೆ ತಂತ್ರಜ್ಞಾನವನ್ನು ಅಳವಡಿಸಿಕೊಂಡಲ್ಲಿ ಮಾತ್ರ ಈ ಮಾಧ್ಯಮ ಉಳಿಯಲು ಸಾಧ್ಯ.ಹಾಗಾಗಿ ಜೈನ್ ಶಾಂತಮಣಿ ಕಲಾ ಕೇಂದ್ರ ಬಿಎಫ್‌ಎ ಮತ್ತು ಎಂ.ಎಫ್.ಎ ನಡುವೆ ಬ್ರಿಡ್ಜ್ ಕೋರ್ಸು ಆರಂಭಿಸಿ, ಮತ್ತಷ್ಟು ಉನ್ನತ್ತಿಕರಣಕ್ಕೆ ಮುಂದಾಗಿದೆ. ಇದರ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು.

ಈ ರೀತಿಯ ಶಿಬಿರಗಳನ್ನು ಕರ್ನಾಟಕದ ಯಾವುದೇ ಭಾಗದಲ್ಲಿ ಆಯೋಜಿಸಿದರು, ಜೈನ್ ಶಾಂತಮಣಿ ಕಲಾ ಕೇಂದ್ರ ಎಲ್ಲ ರೀತಿಯಿ ಸಹಕಾರ, ಸಹಾಯ ನೀಡಲಿದೆ.ಕಲಾವಿದರನ್ನು ಉಳಿಸುವ ಮೂಲಕ ಕಲಾ ಪರಂಪರೆಯನ್ನು ಉಳಿಸುವುದು ಇದರ ಹಿಂದಿನ ಉದ್ದೇಶ ಎಂದರು.

ಕಲಾವಿದರು ಹಾಗೂ ನಿವೃತ್ತ ಪ್ರಾಂಶುಪಾಲರಾದ ಕಿಶೋರ್‌ಕುಮಾರ್ ಮಾತನಾಡಿ, ಬಾಪೂಜಿ ವಿದ್ಯಾಸಂಸ್ಥೆ ಅಡಿಯಲ್ಲಿ ಆರಂಭವಾದ ರವೀಂದ್ರ ಕಲಾನಿಕೇತನ 44ವರ್ಷಗಳಲ್ಲಿ ಸುಮಾರು 2500ಕ್ಕೂ ಹೆಚ್ಚು ಚಿತ್ರಕಲಾವಿದರನ್ನು ತಯಾರು ಮಾಡಿದೆ. ಗುರುಶಿಷ್ಯ ಪರಂಪರೆ ಪರಿಕಲ್ಪನೆಯ ಮೂಲಕ ಈ ಕಲೆಯನ್ನು ಉಳಿಸುವ ಕೆಲಸ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಜೈನ ಶಾಂತಮಣಿ ಕಲಾ ಕೇಂದ್ರದ ಪ್ರಯತ್ನಕ್ಕೆ ಅಭಿನಂದನೆಗಳನ್ನು ತಿಳಿಸಿದರು.

ವೇದಿಕೆಯಲ್ಲಿ ಕಲಾಶಿಬಿರದ ಆಯೋಜಕರಾದ ಹರ್ಷ ಹರಿಯಬ್ಬೆ, ಅರುಣ್, ನರಸಿಂಹಮೂರ್ತಿ, ರವಿ.ಟಿ.ಎಚ್, ಲೋಕೇಶ್, ಕೃಷ್ಣಪ್ಪ ಸೇರಿದಂತೆ ಹಲವು ಉಪಸ್ಥಿತರಿದ್ದರು. ಎರಡು ದಿನಗಳ ಈ ಶಿಬಿರದಲ್ಲಿ ಹಿರಿಯರಾದ ಪ್ರಸನ್ನ, ಮನುಚಕ್ರವರ್ತಿ, ದಾವಣಗೆರೆಯ ಅಲಿ, ಅಶೋಕ್, ರಾಮಜಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 100 ಜನ ಹಿರಿಯ ಕಲಾವಿದರು ಭಾಗವಹಿಸಿದ್ದು, ಹಿರಿಯರು, ಕಿರಿಯರು ಸೇರಿ ಕಲಾಕೃತಿಗಳನ್ನು ರಚಿಸಲಿದ್ದಾರೆ.

PREV

Recommended Stories

ದಸರಾ ವೇಳೆ ಬಾನುರಿಂದ 2023ರ ಘಟನೆ ಮರುಕಳಿಸಬಾರ್ದು : ಯದುವೀರ್‌
ಮೈಸೂರು ದಸರಾ: ಜಂಬೂಸವಾರಿ ಟಿಕೆಟ್‌ ₹3500, ಗೋಲ್ಡ್‌ಕಾರ್ಡ್ ₹6500