ಚಿತ್ರಕಲೆ ಸೃಜನಶೀಲತೆ ಅರಳಿಸುವ ಕಲೆ: ಎಸ್‌.ಬಿ.ಧನಂಜಯ

KannadaprabhaNewsNetwork |  
Published : Dec 13, 2025, 01:30 AM IST
12ಕೆಎಂಎನ್‌ಡಿ-1ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ತಾಲೂಕು ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬಿ.ಇ.ಓ ಎಸ್.ಬಿ.ಧನಂಜಯ ಬಹುಮಾನ ವಿತರಿಸಿದರು. | Kannada Prabha

ಸಾರಾಂಶ

‘ಕನ್ನಡಪ್ರಭ’ದಿನಪತ್ರಿಕೆ ರಾಜ್ಯಾದ್ಯಂತ ಪ್ರತಿ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸುತ್ತಿರುವುದು ಉತ್ತಮ ಬೆಳವಣಿಗೆ. ಇದರಿಂದ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಹೊರತರಲು ಸಾಧ್ಯವಾಗಲಿದ್ದು ಸ್ಪರ್ಧೆಯಲ್ಲಿ ಸೋಲು-ಗೆಲುವು ಎರಡನ್ನು ಸಮಚಿತ್ತದಿಂದ ಸ್ವೀಕರಿಸಿ ಮುಂದಿನ ಗೆಲುವನ್ನು ಕಾಣಲು ಕಾತುರರಾಗಬೇಕು.

ಕನ್ನಡಪ್ರಭ ವಾರ್ತೆ ಮದ್ದೂರು

ಚಿತ್ರಕಲೆ ಸೃಜನಶೀಲತೆ ಅರಳಿಸುವ ಕಲೆ. ಕ್ರಿಯಾಶೀಲತೆ ರೂಢಿಸಿಕೊಂಡು ಕೌಶಲ್ಯ ಸಾಧಿಸಿದರೆ ಕಲೆಯಿಂದಲೇ ಉತ್ತಮ ಭವಿಷ್ಯ ಕಂಡುಕೊಳ್ಳಲು ಸಾಧ್ಯವಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಬಿ.ಧನಂಜಯ ತಿಳಿಸಿದರು.

ಪಟ್ಟಣದ ಶಿಕ್ಷಣ ಇಲಾಖೆಯ ಬಿಆರ್‌ಸಿ ಕಚೇರಿಯಲ್ಲಿ ‘ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್’, ಅರಣ್ಯ ಇಲಾಖೆ ಹಾಗೂ ಸಾರ್ವಜನಿಕರ ಶಿಕ್ಷಣ ಇಲಾಖೆಯಿಂದ ಕರ್ನಾಟಕ ವನ್ಯಜೀವಿ ವಿಷಯಕ್ಕೆ ಸಂಬಂಧಿಸಿದಂತೆ ಆಯೋಜಿಸಿದ್ದ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಸಾಂಸ್ಕೃತಿಕ ಮತ್ತು ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಂಡು ತಮ್ಮ ಜ್ಞಾನಾರ್ಜನೆಯನ್ನು ಹೆಚ್ಚಿಸಿಕೊಂಡು ಅತ್ತ್ಯುನ್ನತ ಸಾಧನೆ ಮಾಡುವ ಮೂಲಕ ತಾವು ಓದಿದ ಶಾಲೆಗೆ ಮತ್ತು ಪೋಷಕರಿಗೆ ಕೀರ್ತಿ ತರಬೇಕು ಎಂದರು.

ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಕ್ರೀಡೆ, ಸಾಂಸ್ಕೃತಿಕ ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳದ ಪರಿಣಾಮ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸುವ ವೇಳೆ ಹಿಂಜರಿಕೆ ಮತ್ತು ಆತಂಕ ಪಡಬೇಕಾದ ಅನಿವಾರ್ಯತೆ ಕಂಡು ಬರುತ್ತಿದ್ದು ಶಿಕ್ಷಕರು ಹಾಗೂ ಪೋಷಕರು ಮಕ್ಕಳನ್ನು ಕೇವಲ ಅಂಕಗಳಿಕೆಗಷ್ಟೇ ಸೀಮಿತಗೊಳಿಸದೆ ಸ್ಪರ್ಧಾತ್ಮಕ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಲು ಪ್ರೇರೇಪಿಸಬೇಕು ಎಂದರು.

‘ಕನ್ನಡಪ್ರಭ’ದಿನಪತ್ರಿಕೆ ರಾಜ್ಯಾದ್ಯಂತ ಪ್ರತಿ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸುತ್ತಿರುವುದು ಉತ್ತಮ ಬೆಳವಣಿಗೆ. ಇದರಿಂದ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಹೊರತರಲು ಸಾಧ್ಯವಾಗಲಿದ್ದು ಸ್ಪರ್ಧೆಯಲ್ಲಿ ಸೋಲು-ಗೆಲುವು ಎರಡನ್ನು ಸಮಚಿತ್ತದಿಂದ ಸ್ವೀಕರಿಸಿ ಮುಂದಿನ ಗೆಲುವನ್ನು ಕಾಣಲು ಕಾತುರರಾಗಬೇಕು ಎಂದರು.

ವಲಯ ಅರಣ್ಯಾಧಿಕಾರಿ ಗವಿಯಪ್ಪ ಮಾತನಾಡಿ, ‘ಕನ್ನಡಪ್ರಭ’ ದಿನಪತ್ರಿಕೆ ಹಾಗೂ ಸುವರ್ಣ ನ್ಯೂಸ್ ಚಾನೆಲ್ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕೆಂಬ ನಿಟ್ಟಿನಲ್ಲಿ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಿ ವನ್ಯಜೀವಿಗಳ ಮತ್ತು ಅರಣ್ಯ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡುತ್ತಿರುವುದು ಸಂತಸದ ವಿಚಾರ. ಇತ್ತೀಚಿನ ದಿನಗಳಲ್ಲಿ ಮಾನವನ ದುರಾಸೆಯಿಂದ ಅರಣ್ಯ ಸಂಪತ್ತು ಕಣ್ಮರೆಯಾಗುತ್ತಿದ್ದು ಇದನ್ನು ಉಳಿಸಿ ಬೆಳೆಸಿ ಸಂರಕ್ಷಿಸಬೇಕಾದದ್ದು ಯುವಕರ ಕರ್ತವ್ಯವಾಗಿದ್ದು ಕಾಡು ಪ್ರಾಣಿಗಳು ನಮ್ಮಂತೆ ವಾಸಿಸುವ ಹಕ್ಕಿದ್ದು ಅವುಗಳು ಸ್ವ-ಇಚ್ಚೆಯಿಂದ ಬದುಕಲು ಕಾಡು ಅತ್ಯವಶ್ಯಕವಾಗಿದ್ದು ಇದನ್ನರಿತು ಪ್ರತಿಯೊಬ್ಬರೂ ಗಿಡನೆಟ್ಟು ಕಾಡನ್ನು ಬೆಳೆಸಬೇಕು ಎಂದು ಸಲಹೆ ನೀಡಿದರು.

ವಿವಿಧ ಶಾಲೆಗಳಿಂದ ಆಗಮಿಸಿದ್ದ ಹಲವಾರು ವಿದ್ಯಾರ್ಥಿಗಳು ಉತ್ಸುಕತೆಯಿಂದ ಚಿತ್ರಕಲಾ ಸ್ಪರ್ಧೆಯಲ್ಲಿ ಪಾಲ್ಗೊಂಡು ವನ್ಯಜೀವಿ ವಿಷಯಕ್ಕೆ ಸಂಬಂಧಿಸಿದಂತೆ ಹಲವು ಬಗೆಯ ಚಿತ್ರಗಳನ್ನು ರಚಿಸಿ ಬಹುಮಾನ ಪಡೆದರು.

ಬಹುಮಾನ ವಿತರಣೆ:

8, 9 ಮತ್ತು 10ನೇ ತರಗತಿಯ ಪ್ರೌಢಶಾಲಾ ವಿಭಾಗಕ್ಕೆ ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ 8ನೇ ತರಗತಿಯಲ್ಲಿ ಡಿ.ಎಂ.ವರ್ಷ(ಪ್ರಥಮ), ಪುನೀತಾಮಂಗಳ (ದ್ವಿತೀಯ), ರುಹಿನ(ತೃತೀಯ) ಬಹುಮಾನ ಪಡೆದರು.

9ನೇ ತರಗತಿಯಲ್ಲಿ ಎಚ್.ಬಿ.ವಿಷ್ಣುಪ್ರಸಾದ್(ಪ್ರಥಮ), ವಿ.ನಿಹಾರಿಕಾ(ದ್ವಿತೀಯ), ಎಸ್.ಪ್ರತೀಕ್ಷಾ(ತೃತೀಯ), ಎಂ.ಭರತ್(ಸಮಾಧಾನಕರ ಬಹುಮಾನ) ಪಡೆದರು.

10ನೇ ತರಗತಿಯಲ್ಲಿ ಡಿ.ಎಸ್.ಪ್ರಿಯಾ(ಪ್ರಥಮ), ಎನ್.ಎಸ್.ಹರ್ಷಸ್(ದ್ವಿತೀಯ), ಎನ್.ಆರ್.ಹಿತೈಷ್‌ಗೌಡ(ತೃತೀಯ), ಎಲ್.ಮದನ್‌ಕುಮಾರ್ (ಸಮಾಧಾನಕರ ಬಹುಮಾನ) ಪಡೆದರು.

ವಿಜೇತ ವಿದ್ಯಾರ್ಥಿಗಳಿಗೆ ಬಿಇಒ ಧನಂಜಯ ಬಹುಮಾನ ವಿತರಿಸಿದರಲ್ಲದೆ ಚಿತ್ರಕಲಾ ಶಿಕ್ಷಕರಾದ ಮಲ್ಲಿಕಾರ್ಜುನ ಹಾಗೂ ಮಹಮ್ಮದ್ ರಫಿಕ್ ಡಂಬಳ್ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು.

ಈ ವೇಳೆ ಟಿಪಿಇಒ ಎಂ.ಮಹದೇವ, ಕನ್ನಡಪ್ರಭ ದಿನಪತ್ರಿಕೆಯ ಪ್ರತಿನಿಧಿ ಎಸ್.ಪುಟ್ಟಸ್ವಾಮಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಧಿವೇಶನ ಮುಗಿದ ಬಳಿಕ ಡಿಕೆಶಿಗೆ ಶುಭಸುದ್ದಿ : ಇಕ್ಬಾಲ್
ಬೆಳಗಾವೀಲೂ ‘ಕೈ’ ಡಿನ್ನರ್‌ ಸಭೆಗೆ ಬಿವೈವಿ ಕಿಡಿ