ಪಾಕಿಸ್ತಾನ ಜಿಂದಾಬಾದ್‌ ಘೋಷಣೆ: ಬಿಜೆಪಿಯಿಂದ ಪ್ರತಿಭಟನೆ

KannadaprabhaNewsNetwork | Published : Feb 29, 2024 2:00 AM

ಸಾರಾಂಶ

ಮಂಗಳವಾರ ವಿಧಾನಸೌಧದಲ್ಲಿ ಕಾಂಗ್ರೆಸ್ ನಾಯಕ, ರಾಜ್ಯಸಭಾ ಸಂಸದ ಸಯ್ಯದ್ ನಾಸೀರ್ ಹುಸೇನ್‌ ಬೆಂಬಲಿಗರು ಪಾಕ್‌ಪರ ಘೋಷಣೆ ಕೂಗಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರಮಂಗಳವಾರ ವಿಧಾನಸೌಧದಲ್ಲಿ ಕಾಂಗ್ರೆಸ್ ನಾಯಕ, ರಾಜ್ಯಸಭಾ ಸಂಸದ ಸಯ್ಯದ್ ನಾಸೀರ್ ಹುಸೇನ್‌ ಬೆಂಬಲಿಗರು ಪಾಕ್‌ಪರ ಘೋಷಣೆ ಕೂಗಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಹೊರಟಿದ್ದ ಪ್ರತಿಭಟನಾಕಾರರನ್ನು ಭುವನೇಶ್ವರಿ ವೃತ್ತದಲ್ಲಿಯೇ ಬಂಧಿಸಲಾಯಿತು.

ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು, ಅಲ್ಲಿಂದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ನಾಸೀರ್ ಹುಸೇನ್ ಭಾವಚಿತ್ರಗಳನ್ನು ಹಿಡಿದು, ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಾ ಭುವನೇಶ್ವರಿ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ನಾಸೀರ್ ಹುಸೇನ್ ಭಾವಚಿತ್ರಗಳನ್ನು ಸುಡಲು ಹಾಗೂ ಜಿಲ್ಲಾ ಕಾಂಗ್ರೆಸ್‌ ಕಚೇರಿಗೆ ಮುತ್ತಿಗೆ ಹಾಕಲು ಸಿದ್ದತೆ ನಡೆಸುತ್ತಿದ್ದಾಗ ಪೊಲೀಸರು ಅವಕಾಶ ನೀಡದೇ ಭುವನೇಶ್ವರಿ ವೃತ್ತದಲ್ಲಿಯೇ ಪ್ರತಿಭಟನಾಕಾರರನ್ನು ಬಂಧಿಸಿ ಕರೆದೊಯ್ದರು. ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ನೂಕಾಟ ತಳ್ಳಾಟವಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಯುವ ಮೋರ್ಚಾದ ಸೂರ್ಯಕುಮಾರ್ ವಿಜಯೋತ್ಸವದ ನೆಪದಲ್ಲಿ ಪವಿತ್ರ ಕ್ಷೇತ್ರದಲ್ಲಿ ದೇಶ ವಿರೋಧಿ ಘೋಷಣೆ ಕೂಗಿದ್ದಾರೆ. ಇವರನ್ನು ತಕ್ಷಣ ಬಂಧಿಸಬೇಕು ಎಂದು ಆಗ್ರಹಿಸಿದರು. ಡಿಕೆ ಸುರೇಶ್‌ ದೇಶ ಒಡೆಯುವ ಹೇಳಿಕೆ ಕೊಟ್ಟಿದ್ದರು. ಈಗ ಪಾಕಿಸ್ತಾನ ಪರ ಘೋಷಣೆ ಕೂಗಲಾಗಿದೆ, ಕಾಂಗ್ರೆಸ್ ಪಕ್ಷ ಇರುವುದೇ ದೇಶ ಒಡೆಯಲು, ಅಲ್ಲಿ ರಾಹುಲ್‌ಗಾಂಧಿ ಭಾರತ್ ನ್ಯಾಯ ಜೋಡೋಯಾತ್ರೆ ಮಾಡುತ್ತಿದ್ದಾರೆ, ಹಿಂದುಗಡೆಯಿಂದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ದೇಶತೋಡೋ ಮಾಡುತ್ತಿದ್ದಾರೆ, ಪ್ರಶ್ನೆ ಕೇಳಿದ ಪತ್ರಕರ್ತರಿಗೆ ಧಮಕಿ ಹಾಕಿದ್ದಾರೆ, ಮತಗಳ ಓಲೈಕೆಗಾಗಿ ದೇಶದ್ರೋಹ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಪಾಕಿಸ್ತಾನ್‌ ಜಿಂದಾಬಾದ್ ಎಂಬ ರಾಷ್ಟ್ರ ದ್ರೋಹದ ಉಗ್ರ ಘೋಷಣೆ ಕೂಗಿದ ಸಯ್ಯದ್ ನಾಸೀರ್ ಹುಸೇನ್ ಮತ್ತು ಬೆಂಬಲಿಗರನ್ನು ಬಂಧಿಸಬೇಕು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವಾಗ ನಾವ್ಯಾರಿಗೆ ಹೆದರಬೇಕು ಎಂಬ ದುಷ್ಟ ಮನಸ್ಸಿನಿಂದ ಘೋಷಣೆ ಕೂಗಿರುವ ದೇಶ ವಿರೋಧಿ ನೀಚರನ್ನು ಈ ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಆಗ್ರಹಿದರು.

ಪ್ರತಿಭಟನೆಯಲ್ಲಿ ಪ್ರಣಯ್, ನಿಜಗುಣರಾಜು, ವಿರಾಟ್ ಶಿವು, ಚಂದ್ರಶೇಖರ್, ಶಿವರಾಜ್, ನಟರಾಜು, ಬಾಲಸುಬ್ರಹ್ಮಣ್ಯಂ, ಮನೋಜ್ ಪಟೇಲ್, ಜಯಸುಂದರ್,ಆನಂದ್ ಭಗೀರಥ, ಮಂಜು, ಕುಮಾರ್, ಮಹೇಶ್, ಕೇಬಲ್ ರಂಗಸ್ವಾಮಿ, ಶಿವರುದ್ರ, ಬಸವರಾಜು, ಶಾಂತಮೂರ್ತಿ, ರಾಜು. ಮಹದೇವಸ್ವಾಮಿ, ಗಾಯಿತ್ರಿ, ವಿಜಯೇಂದ್ರ, ಮನು ಇತರರು ಭಾಗವಹಿಸಿದ್ದರು.

Share this article