ಪಾಕಿಸ್ತಾನ ಪರ ಘೋಷಣೆ ನಿಜ: ಖಾಸಗಿ ಎಫ್‌ಎಸ್‌ಎಲ್‌ ವರದಿ!

KannadaprabhaNewsNetwork | Updated : Mar 05 2024, 10:45 AM IST

ಸಾರಾಂಶ

ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪದ ಸಂಬಂಧ ರಾಜ್ಯ ಬಿಜೆಪಿ ಬಿಡುಗಡೆ ಮಾಡಿರುವ ಖಾಸಗಿ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ‘ಪಾಕಿಸ್ತಾನ ಜಿಂದಾಬಾದ್‌’ ಘೋಷಣೆ ಕೂಗಿರುವುದು ಖಚಿತವಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪದ ಸಂಬಂಧ ರಾಜ್ಯ ಬಿಜೆಪಿ ಬಿಡುಗಡೆ ಮಾಡಿರುವ ಖಾಸಗಿ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ‘ಪಾಕಿಸ್ತಾನ ಜಿಂದಾಬಾದ್‌’ ಘೋಷಣೆ ಕೂಗಿರುವುದು ಖಚಿತವಾಗಿದೆ.

ಬಲಪಂಥೀಯ ಸಂಘಟನೆಯಾಗಿರುವ ‘ಸಂವಾದ ಫೌಂಡೇಷನ್’ಗಾಗಿ ಖಾಸಗಿ ವಿಧಿವಿಜ್ಞಾನ ಸಂಸ್ಥೆ ‘ಕ್ಲ್ಯೂ4 ಎವಿಡೆನ್ಸ್‌ ಫಾರೆನ್ಸಿಕ್ ಲ್ಯಾಬ್‌’ ಸಿದ್ಧಪಡಿಸಿರುವ ವರದಿಯನ್ನು ಪ್ರತಿಪಕ್ಷ ಬಿಜೆಪಿ ಬಿಡುಗಡೆಗೊಳಿಸಿದೆ.

ಖಾಸಗಿ ವಿಧಿವಿಜ್ಞಾನ ಪ್ರಯೋಗಾಲಯವು 30 ಸೆಕೆಂಡ್‌ನ ವಿಡಿಯೊವನ್ನು ತಾಂತ್ರಿಕ ವಿಶ್ಲೇಷಣೆಗೆ ಒಳಪಡಿಸಿ ಈ ವರದಿಯನ್ನು ಸಿದ್ಧಪಡಿಸಿದೆ.

ವಿಡಿಯೋದ ಪ್ರತಿ ಫ್ರೇಮ್‌ ವಿಶ್ಲೇಷಿಸಲಾಗಿದೆ. ಆಡಿಯೋದಲ್ಲಿನ ಪ್ರತಿ ಶಬ್ದ, ಉಚ್ಚಾರಣೆ, ವೇಗ ಎಲ್ಲವನ್ನೂ ತಾಂತ್ರಿಕ ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಇದರಲ್ಲಿ ‘ನಾಸೀರ್‌ ಸಾಬ್‌ ಜಿಂದಾಬಾದ್‌’ ಮತ್ತು ‘ಪಾಕಿಸ್ತಾನ್‌ ಜಿಂದಾಬಾದ್‌’ ಎರಡೂ ಘೋಷಣೆ ಕೂಗಿರುವುದು ಖಚಿತವಾಗಿದೆ ಎಂದು ಹೇಳಿದೆ.

ವಿಡಿಯೋದಲ್ಲಿನ ಆಡಿಯೋ ವಿಶ್ಲೇಷಣೆ ವೇಳೆ ಪ್ರತಿ ಅಕ್ಷರ ಉಚ್ಚಾರಣೆಯನ್ನು ಕೂಲಂಕಷವಾಗಿ ಪರೀಕ್ಷಿಸಲಾಗಿದೆ. ‘ಪಾಕಿಸ್ತಾನ್‌’ ಪದ ಉಚ್ಚಾರಣೆ ‘ಆನ್‌’ ಶಬ್ದದ ಮೂಲಕ ಅಂತ್ಯವಾಗುತ್ತದೆ. 

ಈ ಆನ್‌ ಎಂಬುದು ಅನುನಾಸಿಕ ಸ್ವರ. ಅಂದರೆ, ಮೂಗಿನ ಸಹಾಯದಿಂದ ಉಚ್ಚಾರಣೆ ಮಾಡಲಾಗುತ್ತದೆ. ಇನ್ನು ‘ಸಾಬ್‌’ ಪದ ಉಚ್ಚಾರಣೆ ‘ಆಬ್‌’ ಶಬ್ದದಲ್ಲಿ ಕೊನೆಗೊಳ್ಳುತ್ತದೆ. 

ಹೀಗೆ ವಿಡಿಯೋದಲ್ಲಿನ ಆಡಿಯೋದ ಪ್ರತಿ ಪದದ ಪ್ರತಿ ಅಕ್ಷರವನ್ನು ಸೂಕ್ಷ್ಮವಾಗಿ ವಿಶ್ಲೇಷಣೆಗೆ ಒಳಪಡಿಸಿದಾಗ ನಾಸೀರ್‌ ಸಾಬ್‌ ಜಿಂದಾಬಾದ್‌ ಮತ್ತು ಪಾಕಿಸ್ತಾನ ಜಿಂದಾಬಾದ್‌ ಎಂದು ಘೋಷಣೆ ಕೂಗಿರುವುದು ಖಚಿತವಾಗಿದೆ ಎಂದು ವರದಿ ತಿಳಿಸಿದೆ.

ಖಾಸಗಿ ವರದಿ ದೃಢೀಕರಣ ನೀಡಿದೆ - ವಿಜಯೇಂದ್ರ: ‘ಖಾಸಗಿ ಎಫ್ಎಸ್‌ಎಲ್ ವರದಿ ಈಗಾಗಲೇ ಈ ಕುರಿತು ದೃಢೀಕರಣ ನೀಡಿದೆ. ಸರ್ಕಾರಿ ವರದಿ ಕೂಡ ನಿಮ್ಮ ಕೈ ಸೇರಿದೆ. 

ಆದಾಗ್ಯೂ ವರದಿ ಇನ್ನೂ ತಲುಪಿಲ್ಲ ಎಂಬ ಹಸೀ ಸುಳ್ಳು ಹೇಳುತ್ತಿರುವ ನಿಮ್ಮ ನಡೆ, ನಿಮ್ಮ ರಾಷ್ಟ್ರ ಬದ್ಧತೆಯನ್ನು ಪ್ರಶ್ನಿಸುವಂತಾಗಿದೆ’ ಎಂದು ವರದಿಯನ್ನು ಲಗತ್ತಿಸಿ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.

‘ಸಿದ್ದರಾಮಯ್ಯ ಅವರೇ, ರಾಜ್ಯ ಹಾಗೂ ಜನರ ಹಿತಾಸಕ್ತಿಯೇ ನಮ್ಮ ಮೊದಲ ಆದ್ಯತೆ. ದೇಶದ್ರೋಹಿ ಉಗ್ರರು ಹಾಗೂ ಪಾತಕಿಗಳಿಗೆ ಕರ್ನಾಟಕ ನೆಲೆಯಾಗಬಾರದೆಂಬುದಷ್ಟೇ ನಮ್ಮ ಪ್ರಾಮಾಣಿಕ ಕಾಳಜಿ. 

ಪ್ರಜಾಪ್ರಭುತ್ವದ ಹೃದಯ ಮಂದಿರ ವಿಧಾನಸೌಧಕ್ಕೆ ಧಾವಿಸಿ ಬಂದು ಪೋಲಿಸರ ಎದುರೇ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಕೂಗುವಷ್ಟರ ಮಟ್ಟಿಗೆ ವಿದ್ರೋಹಿಗಳು ಧೈರ್ಯ ತೋರುತ್ತಾರೆ, ಇದರ ಬೆನ್ನಲೇ ರಾಜಧಾನಿಯಲ್ಲಿ ಬಾಂಬ್ ಸ್ಫೋಟವಾಗುತ್ತದೆ ಎಂದರೆ ಈ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಲ್ಲಿ ಅಡಗಿ ಕುಳಿತಿದೆ? ಎಂಬುದು ಬಹುದೊಡ್ಡ ಪ್ರಶ್ನೆಯಾಗಿ ರಾಜ್ಯದ ಜನರನ್ನು ಕಾಡುತ್ತಿದೆ’ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭೂಗತ ಶಕ್ತಿಗಳಿಗೆ ಸ್ವಾತಂತ್ರ್ಯ ದೊರೆತ ವಾತಾವರಣ ನಿರ್ಮಾಣವಾಗಿದೆ. ಜನರು ಆತಂಕದ ನೆರಳಿನಲ್ಲಿ ಬದುಕುವ ಸ್ಥಿತಿ ಬಂದೊದಗಿದೆ. 

‘ಬೆಂದ ಮನೆಯಲ್ಲಿ ಗಳ ಇರಿಯುವ’ ರಾಜಕಾರಣ ಮಾಡುವ ದುರ್ಗತಿ ಬಿಜೆಪಿಗೆ ಬಂದಿಲ್ಲ. ವಿಧಾನ ಸೌಧದಲ್ಲೇ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೇಳಿಬಂದರೆ ನಾವು ಕೈಕಟ್ಟಿ ಕೂರಬೇಕೇ? ಈ ಸಂಬಂಧ ಮಾಧ್ಯಮಗಳ ವರದಿಯನ್ನು ನೀವು ನಂಬಲಿಲ್ಲ. 

ಪ್ರತ್ಯಕ್ಷದರ್ಶಿಗಳ ಹೇಳಿಕೆ ಆಲಿಸಲಿಲ್ಲ. ರಾಷ್ಟ್ರ ಹಿತಾಸಕ್ತಿಯ ಈ ಗಂಭೀರ ಪ್ರಕರಣದ ಬಗ್ಗೆ ತಾತ್ಸಾರ ತೋರುತ್ತಿರುವುದರ ನಿಮ್ಮ ವರ್ತನೆ ರಾಷ್ಟ್ರ ದ್ರೋಹಿಗಳನ್ನು ರಕ್ಷಿಸಲು ಆದ್ಯತೆ ನೀಡುತ್ತಿರುವಂತಿದೆ ಎಂದು ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಧಿವಿಜ್ಞಾನ ವರದಿ ಆಧರಿಸಿ ಮೂವರು ಕಾಂಗ್ರೆಸ್ಸಿಗರ ಸೆರೆ
ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದಲ್ಲಿ ಆಡಳಿತಾರೂಢ ಹಾಗೂ ವಿರೋಧ ಪಕ್ಷಗಳ ನಡುವೆ ಇತ್ತೀಚೆಗೆ ಭಾರಿ ರಾಜಕೀಯ ಸಮರಕ್ಕೆ ಕಾರಣವಾಗಿದ್ದ ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಪ್ರಕರಣ ಸಂಬಂಧ ಬ್ಯಾಡಗಿಯ ಮೆಣಸಿನಕಾಯಿ ವ್ಯಾಪಾರಿ ಸೇರಿದಂತೆ ಮೂವರು ಕಾಂಗ್ರೆಸ್ ಕಾರ್ಯಕರ್ತರನ್ನು ವಿಧಾನಸೌಧ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಮೊಹಮ್ಮದ್‌ ಶಫಿ ನಾಶಿಪುಡಿ, ದೆಹಲಿ ಕಿಶನ್‌ಗಂಜ್‌ನ ಮೊಹಮ್ಮದ್‌ ಇಲ್ತಾಜ್‌ ಹಾಗೂ ಶಿವಾಜಿನಗರದ ಜಯಮಹಲ್‌ನ ಮುನಾವರ್ ಅಹ್ಮದ್ ಬಂಧಿತರಾಗಿದ್ದು, ವಿಧಾನಸೌಧ ಆವರಣದಲ್ಲಿ ‘ಪಾಕಿಸ್ತಾನ ಜಿಂದಾಬಾದ್‌’ ಘೋಷಣೆ ಕೂಗಿರುವುದು ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್‌) ವರದಿಯಲ್ಲಿ ಖಚಿತವಾದ ಬೆನ್ನಲ್ಲೇ ಸೋಮವಾರ ವಿಚಾರಣೆಗೆ ಕರೆದು ಬಳಿಕ ಆರೋಪಿಗಳನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಆರೋಪಿಗಳು ಪಾಕಿಸ್ತಾನ ಪರ ಘೋಷಣೆ ಕೂಗಿರುವುದು ಎಫ್‌ಎಸ್‌ಎಲ್ ವರದಿಯಲ್ಲಿ ಸಾಬೀತಾಗಿದೆ ಎಂಬ ವದಂತಿ ಕಳೆದ ಎರಡು-ಮೂರು ದಿನಗಳಿಂದ ಹಬ್ಬಿತ್ತು. 

ಜತೆಗೆ ಪ್ರತಿಪಕ್ಷ ಬಿಜೆಪಿ ನಾಯಕರು ವರದಿ ಸರ್ಕಾರದ ಕೈಸೇರಿದೆ ಎಂದು ಪದೇ ಪದೇ ಹೇಳಿಕೆ ನೀಡುತ್ತಿದ್ದರು. ಆದರೂ ಸರ್ಕಾರ ಮಾತ್ರ ಮೌನಕ್ಕೆ ಶರಣಾಗಿತ್ತು. 

ಸೋಮವಾರ ಪ್ರತಿಪಕ್ಷ ಬಿಜೆಪಿ ಖಾಸಗಿ ಎಫ್‌ಎಸ್‌ಎಲ್‌ ವರದಿ ಬಿಡುಗಡೆಗೊಳಿಸಿದ ಬಳಿಕ ಸರ್ಕಾರಕ್ಕೆ ಒತ್ತಡ ನಿರ್ಮಾಣವಾಯಿತು. ಹೀಗಾಗಿ, ಪೊಲೀಸರು ಆರೋಪಿಗಳನ್ನು ಬಂಧಿಸಿದರು ಎಂದು ಮೂಲಗಳು ತಿಳಿಸಿವೆ.

ವಿಧಾನಸಭಾ ಅಧಿವೇಶನದ ಸಮಯದಲ್ಲೇ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಹುರಿಯಾಳು ನಾಸಿರ್ ಹುಸೇನ್‌ ಗೆಲುವಿನ ಸಂಭ್ರಮದಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೇಳಿ ಬಂದಿತ್ತು. 

ಈ ಪ್ರಕರಣವು ವಿಧಾನಸಭೆಯ ಉಭಯ ಸದನಗಳಲ್ಲಿ ಪ್ರಸ್ತಾಪವಾಗಿ ಆಡಳಿತಾರೂಢ ಕಾಂಗ್ರೆಸ್ ಹಾಗೂ ವಿರೋಧ ಪಕ್ಷ ಬಿಜೆಪಿ ನಡುವೆ ಭಾರಿ ಜಟಾಪಟಿ ನಡೆದಿತ್ತು. ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು.

ಏನಿದು ಘಟನೆ?
ಕಳೆದ ಫೆ.27ರಂದು ವಿಧಾನಸೌಧದಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್‌ ಅಭ್ಯರ್ಥಿ ನಾಸೀರ್‌ ಹುಸೇನ್‌ ವಿಜಯೋತ್ಸವದ ವೇಳೆ ಅವರ ಬೆಂಬಲಿಗರು ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಗಿದ್ದರು. 

ಈ ಘಟನೆಯ ವಿಡಿಯೋ ಆಧರಿಸಿ ಸ್ವಯಂಪ್ರೇರಿತವಾಗಿ ಎಫ್‌ಐಆರ್ ದಾಖಲಿಸಿಕೊಂಡು ವಿಧಾನಸೌಧ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದರು.ಬಳಿಕ ಆರೋಪದ ಮೇರೆಗೆ ಶಫಿ ನಾಶಿಪುಡಿ, ದೆಹಲಿಯ ಇಲ್ತಾಜ್‌ ಹಾಗೂ ಮುನಾವರ್‌ನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆಗೊಳಪಡಿಸಿದ್ದರು. 

ಅಲ್ಲದೆ ಈ ಮೂವರ ಧ್ವನಿ ಸಂಗ್ರಹಿಸಿ ಎಫ್‌ಎಸ್‌ಎಲ್‌ಗೆ ಪೊಲೀಸರು ಕಳುಹಿಸಿದ್ದರು. ಆಗ ಘೋಷಣೆ ಕೂಗಿದ ವಿಡಿಯೋ ಹಾಗೂ ಆರೋಪಿತರ ಧ್ವನಿಯಲ್ಲಿ ಸಾಮ್ಯತೆ ಇದೆ. ಆರೋಪಿಗಳು ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿರುವುದು ದೃಢವಾಗಿದೆ ಎಂದು ಎಫ್‌ಎಸ್‌ಎಲ್ ತಜ್ಞರು ವರದಿ ಸಲ್ಲಿಸಿದ್ದರು. ಅಂತಿಮವಾಗಿ ಎಫ್‌ಎಸ್‌ಎಲ್‌ ವರದಿ ಆಧರಿಸಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

2 ಬಾರಿ ಪಾಕ್‌ ಜಿಂದಾಬಾದ್: ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್‌ ಗೆಲುವಿನ ಸಂಭ್ರಮಾಚರಣೆ ವೇಳೆ ಉದ್ದೇಶಪೂರ್ವಕವಾಗಿ ಪಾಕಿಸ್ತಾನ ಪರವಾಗಿ ಆರೋಪಿಗಳು ಘೋಷಣೆ ಕೂಗಿರುವುದು ಖಚಿತವಾಗಿಲ್ಲ. ಆದರೆ ಎರಡು ಬಾರಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿರುವುದು ಸ್ಪಷ್ಟವಾಗಿದೆ. ಹುಸೇನ್‌ ಅವರಿಂದ ಪಡೆದ ಪಾಸ್‌ನಲ್ಲೇ ವಿಧಾನಸೌಧವನ್ನು ಆರೋಪಿಗಳು ಪ್ರವೇಶಿಸಿದ್ದರು. ಇನ್ನು ವಿಚಾರಣೆ ವೇಳೆ ತಾವು ತಪ್ಪು ಮಾಡಿಲ್ಲ ಎಂದು ಆರೋಪಿಗಳು ಅಲವತ್ತುಕೊಂಡಿದ್ದಾಗಿ ಮೂಲಗಳು ಹೇಳಿವೆ.

ದೆಹಲಿಯ ನಾಯಕ ಇಲ್ತಾಜ್‌: ಈ ಆರೋಪಿಗಳ ಪೈಕಿ ನಾಶಿಪುಡಿ ಮೆಣಸಿನಕಾಯಿ ವ್ಯಾಪಾರಿ ಆಗಿದ್ದರೆ, ಇನ್ನುಳಿದವರು ಸಣ್ಣಪುಟ್ಟ ಕೆಲಸ ಮಾಡುತ್ತಾರೆ. ಇನ್ನು ಇಲ್ತಾಜ್‌ ದೆಹಲಿ ಕಾಂಗ್ರೆಸ್‌ನ ಕಾರ್ಯಕಾರಿ ಸಮಿತಿ ಸದಸ್ಯನಾಗಿದ್ದ. 

ಈ ಘಟನೆ ಬಳಿಕ ದೆಹಲಿಗೆ ಮರಳಿದ್ದ ಆತನಿಗೆ ವಾಟ್ಸಾಪ್‌ನಲ್ಲಿ ನೋಟಿಸ್ ಕಳುಹಿಸಿ ವಿಚಾರಣೆಗೆ ಕರೆಸಲಾಯಿತು. ಮೂರು ದಿನಗಳ ವಿಚಾರಣೆ ಬಳಿಕ ಪಾಕಿಸ್ತಾನ ಜಿಂದಾಬಾದ್‌ ಎಂದು ಆತ ಕೂಗಿರುವುದು ದೃಢಪಟ್ಟ ಕೂಡಲೇ ಬಂಧನಕ್ಕೊಳಪಡಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ವಿಧಾನಸೌಧ ಆ‍ವರಣದಲ್ಲಿ ಪಾಕಿಸ್ತಾನ ಜಿಂದಾಬಾದ್ ಕೂಗಿದ ಪ್ರಕರಣ ಸಂಬಂಧ ಎಫ್‌ಎಸ್‌ಎಲ್ ವರದಿ, ಸಾಂದರ್ಭಿಕ ಸಾಕ್ಷ್ಯಾಧಾರಗಳು ಹಾಗೂ ಪ್ರತ್ಯಕ್ಷದರ್ಶಿಗಳ ಹೇಳಿಕೆ ಆಧರಿಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.-ಡಾ.ಶೇಖರ್ ಎಚ್.ತೆಕ್ಕಣ್ಣನವರ್, ಡಿಸಿಪಿ, ಕೇಂದ್ರ ವಿಭಾಗ

Share this article