ಐತಿಹಾಸಿಕ ಮೂಲನಂದೀಶ್ವರ ಜಾತ್ರೆಯ ಪಲ್ಲಕ್ಕಿ ಮಹೋತ್ಸವ

KannadaprabhaNewsNetwork |  
Published : Sep 01, 2026, 03:15 AM IST
31ಬಿಎಸ್ವಿ01- ಬಸವನಬಾಗೇವಾಡಿಯ ಆರಾಧ್ಯದೈವ ಮೂಲನಂದೀಶ್ವರ(ಬಸವೇಶ್ವರ) ಜಾತ್ರಾಮಹೋತ್ಸದಂಗವಾಗಿ ಸೋಮವಾರ ಸಾಂಪ್ರದಾಯಿಕ ಪಲ್ಲಕ್ಕಿ ಉತ್ಸವದಲ್ಲಿ ಸಚಿವ ಶಿವಾನಂದ ಪಾಟೀಲ ಭಾಗವಹಿಸಿ ಪಲ್ಲಕ್ಕಿ ಹೊತ್ತು ಸಾಗಿದರು. | Kannada Prabha

ಸಾರಾಂಶ

ಆ.31 ರಿಂದ ಸೆ.4ರವರೆಗೆ ಐದು ದಿನಗಳ ಕಾಲ ನಡೆಯಲಿರುವ ಪಟ್ಟಣದ ಆರಾಧ್ಯದೇವ ಮೂಲನಂದೀಶ್ವರ (ಬಸವೇಶ್ವರ) ಐತಿಹಾಸಿಕ ಜಾತ್ರಾಮಹೋತ್ಸವ ಸೋಮವಾರ ಪಲ್ಲಕ್ಕಿ ಉತ್ಸವ ಸಂಭ್ರಮ, ಸಡಗರದಿಂದ ಜರುಗಿತು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಆ.31 ರಿಂದ ಸೆ.4ರವರೆಗೆ ಐದು ದಿನಗಳ ಕಾಲ ನಡೆಯಲಿರುವ ಪಟ್ಟಣದ ಆರಾಧ್ಯದೇವ ಮೂಲನಂದೀಶ್ವರ (ಬಸವೇಶ್ವರ) ಐತಿಹಾಸಿಕ ಜಾತ್ರಾಮಹೋತ್ಸವ ಸೋಮವಾರ ಪಲ್ಲಕ್ಕಿ ಉತ್ಸವ ಸಂಭ್ರಮ, ಸಡಗರದಿಂದ ಜರುಗಿತು.

ಐತಿಹಾಸಿಕ ಮೂಲನಂದೀಶ್ವರ ಮೂರ್ತಿಗೆ ಬೆಳಗ್ಗೆ ರುದ್ರಾಭಿಷೇಕ, ಬೆಳ್ಳಿ ಅಲಂಕಾರ, ವಿಶೇಷ ಪೂಜೆಯನ್ನು ಅರ್ಚಕರಾದ ಗೌರಿಶಂಕರ ಚರಂತಿಮಠ, ವಿಶ್ವನಾಥ ಕಾಳಹಸ್ತೇಶ್ವರಮಠ ನೆರವೇರಿಸಿದರು. ಬೆಳಗಿನ ಜಾವ ಮೂರು ಗಂಟೆಯಿಂದಲೇ ವಿವಿಧೆಡೆಗಳಿಂದ ಆಗಮಿಸಿದ್ದ ರಾಜ್ಯದ ವಿವಿಧ ಜಿಲ್ಲೆ, ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಭಕ್ತರು ದೇವರಿಗೆ ಅಭಿಷೇಕ ಮಾಡಿಸಿದರು. ಅಪಾರ ಪ್ರಮಾಣದ ಭಕ್ತರು ದೇವಸ್ಥಾನ ಸುತ್ತಲೂ ದೀಡ್ ನಮಸ್ಕಾರ ಹಾಕಿ ಹರಕೆ ತೀರಿಸಿದರು.

ಜಾತ್ರಾ ಉತ್ಸವ ಸಮಿತಿ ಪದಾಧಿಕಾರಿಗಳು, ಬಸವ ಭಕ್ತರು ದೇವಸ್ಥಾನದಿಂದ ವಿರಕ್ತಮಠಕ್ಕೆ ತೆರಳಿ ಶ್ರೀಮಠದ ಸಿದ್ದಲಿಂಗ ಸ್ವಾಮೀಜಿ, ಶಿವಾನಂದ ಈರಕಾರ ಮುತ್ಯಾ ಅವರನ್ನು ದೇವಸ್ಥಾನಕ್ಕೆ ಮೆರವಣಿಗೆ ಮೂಲಕ ಬರಮಾಡಿಕೊಂಡರು. ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಚಿವ ಶಿವಾನಂದ ಪಾಟೀಲ ಅವರು ಹಿರಿಯರ ಸಮ್ಮುಖದಲ್ಲಿ ದೇವಸ್ಥಾನದಲ್ಲಿದ್ದ ಬೆಳ್ಳಿ ನಂದಿ ಉತ್ಸವ ಮೂರ್ತಿ ಪಲ್ಲಕ್ಕಿ ಕಟ್ಟೆಯವರೆಗೆ ತೆಗೆದುಕೊಂಡು ಬಂದು ಅಲಂಕೃತ ಬೆಳ್ಳಿ ಪಲ್ಲಕ್ಕಿಯಲ್ಲಿ ಬೆಳ್ಳಿ ಉತ್ಸವ ನಂದಿ ಮೂರ್ತಿ ಪ್ರತಿಷ್ಠಾಪಿಸಿ ನಂತರ ಪಲ್ಲಕ್ಕಿಗೆ ವಿಶೇಷ ಪೂಜೆ ಸಲ್ಲಿಸಿ ಮಂಗಳಾರತಿ ನೆರವೇರಿಸಿ ಉತ್ಸವಕ್ಕೆ ಚಾಲನೆ ದೊರಕಿತು. ಸಚಿವ ಶಿವಾನಂದ ಪಾಟೀಲ ಅವರು ದೇವಸ್ಥಾನ ಆವರಣ ದಾಟುವವರೆಗೂ ಪಲ್ಲಕ್ಕಿ ಹೊತ್ತು ಸಾಗಿದರು. ನಂತರ ಪಲ್ಲಕ್ಕಿ ಐತಿಹಾಸಿಕ ಹೋರಿಮಟ್ಟಿ ಗುಡ್ಡಕ್ಕೆ ತೆರಳಿ ಪಲ್ಲಕ್ಕಿ ಉತ್ಸವ ನಡೆಯಿತು. ಗುಡ್ಡದಲ್ಲಿ ಶಿವಾನಂದ ಈರಕಾರ ಮುತ್ಯಾ ಅವರಿಂದ ಹೇಳಿಕೆ ಜರುಗಿತು. ನಂತರ ಬಸವನಹಟ್ಟಿ ಗ್ರಾಮಕ್ಕೆ ತೆರಳಿಗ್ರಾಮಸ್ಥರು ಪೂಜೆ ಸಲ್ಲಿಸಿದ ಬಳಿಕ ಬುತ್ತಿ ಬಸವಣ್ಣ ದೇವಸ್ಥಾನಕ್ಕೆ ಆಗಮಿಸಿತು. ನಂತರ ಪಲ್ಲಕ್ಕಿಗೆ ವಾಡೇದ ಅವರ ತೋಟಕ್ಕೆ ಆಗಮಿಸಿದ ನಂತರ ಭಕ್ತರು ಪೂಜೆ ಸಲ್ಲಿಸಿದರು. ಸಂಜೆ ಪಟ್ಟಣದ ಕಂಬಿಕಟ್ಟೆಗೆ ಆಗಮಿಸಿದ ಪಲ್ಲಕ್ಕಿಯನ್ನು ಅಪಾರ ಸಂಖ್ಯೆಯ ಭಕ್ತಸಮೂಹ ಸ್ವಾಗತಿಸಿಕೊಂಡರು. ದೇವಸ್ಥಾನ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಆಕರ್ಷಕ ಸಿಡಿಮದ್ದು ಗಮನಸೆಳೆಯಿತು.

ಕಲಾತಂಡಗಳ ಮೆರಗು:

ಪಲ್ಲಕ್ಕಿ ಉತ್ಸವದಲ್ಲಿ ಭಟ್ಕಳದ ಝಂಡಾ ಮೇಳ, ಕೊಣ್ಣೂರಿನ ರಾಯಣ್ಣ ಮಹಿಳಾ ಕಲಾತಂಡದ ಡೊಳ್ಳು, ಸಾಂಗಲಿಯ ಝಾಂಜ್‌ ಮೇಳ, ಸಾರವಾಡದ ವಿವಿಧ ಗೊಂಬೆಗಳು, ಕೊಬನೂರಿನ ಕರಡಿ ಮಜಲು, ಬಸವನಬಾಗೇವಾಡಿಯ ಶ್ರೀಗುರು ಬ್ಯಾಂಜೋ ಬ್ರಾಸ್ ಬ್ಯಾಂಡ್ ಸೇರಿ ವಿವಿಧ ಕಲಾ ತಂಡಗಳು, ವಾದ್ಯಮೇಳಗಳು, ಗಜರಾಜ ಉತ್ಸವಕ್ಕೆ ಮೆರಗು ತಂದವು.

ಪಲ್ಲಕ್ಕಿ ಉತ್ಸವದಲ್ಲಿ ಸಿದ್ದಲಿಂಗ ಸ್ವಾಮೀಜಿ, ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ಆಯುಕ್ತ ಗುರುನಾಥ ದಡ್ಡೆ, ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ, ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಬಸವೇಶ್ವರ ಬ್ಯಾಂಕಿನ ಅಧ್ಯಕ್ಷ ಲೋಕನಾಥ ಅಗರವಾಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷ ಶ್ರೀಕಾಂತ ಕೊಟ್ರಶೆಟ್ಟಿ, ವಿಡಿಸಿಸಿ ಬ್ಯಾಂಕಿನ ನಿರ್ದೇಶಕ ಚಂದ್ರಶೇಖರಗೌಡ ಪಾಟೀಲ, ಬಸವಸೈನ್ಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ, ಜೆಡಿಎಸ್ ಮುಖಂಡ ಅಪ್ಪುಗೌಡ ಪಾಟೀಲ, ವಿವಿಧ ಸಂಘ-ಸಂಸ್ಥೆಯ ಮುಖ್ಯಸ್ಥರು, ಮುಖಂಡರಾದ ಭರತು ಅಗರವಾಲ, ಬಸವರಾಜ ಹಾರಿವಾಳ, ಚಂದ್ರಶೇಖರಗೌಡ ಪಾಟೀಲ, ಬಸವರಾಜ ಗೊಳಸಂಗಿ, ಶೇಖರ ಗೊಳಸಂಗಿ, ಬಾಲಚಂದ್ರ ಮುಂಜಾನಿ, ರವಿಗೌಡ ಚಿಕ್ಕೊಂಡ, ವಿನುತ ಕಲ್ಲೂರ, ಸುರೇಶಗೌಡ ಪಾಟೀಲ, ರವಿ ರಾಠೋಡ, ಸಂಗಮೇಶ ಓಲೇಕಾರ, ಅಶೋಕ ಹಾರಿವಾಳ, ಮಲ್ಲಿಕಾರ್ಜುನ ನಾಯಕ, ಜಟ್ಟಿಂಗರಾಯ ಮಾಲಗಾರ, ರವಿ ಪಟ್ಟಣಶೆಟ್ಟಿ, ಮಹಾಂತೇಶ ಹಂಜಗಿ, ವ್ಹಿ.ಬಿ.ಮರ್ತುರ, ರಾಜೇಂದ್ರ ಪತ್ತಾರ, ಅನಿಲ ದುಂಬಾಳಿ, ಮೀರಾಸಾಬ ಕೊರಬು, ರಮೇಶ ಯಳಮೇಲಿ, ಸಂಗಯ್ಯ ಒಡೆಯರ, ಜಗದೀಶ ಕೊಟ್ರಶೆಟ್ಟಿ, ಉಮೇಶ ಹಾರಿವಾಳ, ಡಾ.ಬಸವರಾಜ ಕೋಟಿ, ಬಸವರಾಜ ರಾಯಗೊಂಡ, ಸಂಗಯ್ಯ ಕಾಳಹಸ್ತೇಶ್ವರಮಠ, ಶಿವಲಿಂಗಯ್ಯ ತೆಗ್ಗಿನಮಠ, ಸಂಗನಗೌಡ ಚಿಕ್ಕೊಂಡ, ಹರೀಶ ಅಗರವಾಲ, ಸಂಗನಬಸು ಪೂಜಾರಿ, ಬಸವರಾಜ ಪೂಜಾರಿ, ಬಸವರಾಜ ಅವಟಿ, ಅಮರ ಗಾಯಕವಾಡ, ಭದ್ರು ಮಣ್ಣೂರ, ರವಿ ನಾಯ್ಕೋಡಿ, ವಿ.ಬಿ.ಮರ್ತುರ, ನೀಲು ನಾಯಕ, ಸುಭಾಸ ಗಾಯಕವಾಡ,ಬಸವರಾಜ ಚೌರಿ ಸೇರಿದಂತೆ ಅಪಾರ ಪ್ರಮಾಣದ ಜನಸ್ತೋಮ ಭಾಗವಹಿಸಿತ್ತು.

ದೇವಸ್ಥಾನ ಆವರಣದಲ್ಲಿ ಬೆಳಗ್ಗೆ ವಿವೇಕ ಬಿಗ್ರೇಡ್ ಸೇರಿದಂತೆ ವಿವಿಧ ಯುವಕರು ಭಕ್ತರಿಗೆ ಪ್ರಸಾದ ಸೇವೆ ಸಲ್ಲಿಸಿದರು.

ವಿವೇಕ ಬಿಗ್ರೇಡ್ ವಿಶೇಷವಾಗಿ ಮಾದಲಿ, ಮಸಾಲಿ ಅನ್ನ ಪ್ರಸಾದ ವ್ಯವಸ್ಥೆ ಮಾಡಿದ್ದರು.

ಪಲ್ಲಕ್ಕಿ ಉತ್ಸವದ ಸಂದರ್ಭದಲ್ಲಿ ಬಸ್ ಹೊರವಲಯದ ರಸ್ತೆಯ ಮಾರ್ಗವಾಗಿ ಸಂಚಾರ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸ್ ಇಲಾಖೆಯಿಂದ ದ್ರೋಣ್ ಕ್ಯಾಮೆರಾ ಕಣ್ಗಾವಲು ವಹಿಸಲಾಗಿತ್ತು.

ಈರಕಾರ ಮುತ್ಯಾ ನುಡಿದ ಹೇಳಿಕೆಗಳು:

ತುರ್ತು ಹುಬ್ಬಿ ಉತ್ತರಿ ಮಳೆಗೆ ಮಂಡಿ ಕಟ್ಟಿಸಿನಿ, ಹಸ್ತ ಮಳೆ ಸರುವ ಸರುವ ಕೊಟ್ಟಿನಿ, ಸ್ವಾತಿ ಮಳೆ ಸೋಸಿ ನೋಡುವರೊಳಗ ನಾಲ್ಕು ಮೂಲಿಗೆ ಸರುವ ಕೊಟಿನಿ, ಹತ್ತಿ ಸಾಲ್ಯಾಗ ಹಮ್ಮಿಣಿ ಒಗದಿನಿ, ಗೋಧಿ, ಕುಸುಬಿ, ಕಡ್ಲಿ ಜೋಳದ ಬೆನ್ನು ಹತ್ಯಾವ, ಜಾತ್ರೆ ಚಂಚಲ ಮಂಚಲ ಮನಸ್ಸಿನಿಂದ ಮಾಡಕತ್ತಿರಿ , ಅದಕ್ಕ ಮ್ಯಾಗ ನೋಡಕತ್ತಿರಿ, ಹಿಂದಿನ ವಾರ ಮಾಡಿದ್ದು ಸರಿಯಾಗಿಲ್ಲ, ಮತ್ತೆ ಐದು ವಾರ ಮಾಡಿ ಇಪ್ಪತ್ತೈದು ಮುತ್ತೈದೆಯರಿಗೆ ಉಡಿ ತುಂಬಬೇಕು.ಮ್ಯಾಗ ನೋಡಲಾರದೆ ಕುರಗಿ ಸಾಗ ಮಾಡ್ರಿ ನೆಲಗಂಗಮ್ಮನ ಬಿಟ್ಟಿನಿ ಎಂದು ಹೇಳಿಕೆ ನುಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಜೆಕಾರು: ಸಾರಥಿ ಆಂಬುಲೆನ್ಸ್ ಲೋಕಾರ್ಪಣೆ
ಭಾರತ್‌ ಜೋಡೋ ನೋಂದಣಿಗೆ ಕಾಂಗ್ರೆಸ್‌ನಿಂದ ಆಂದೋಲನ: ಐವನ್‌ ಡಿಸೋಜಾ