ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವಾಸಿಗಳು ಸೇರಿದಂತೆ ಆದಿವಾಸಿಗಳ ಸಮಸ್ಯೆ ಪರಿಹರಿಸುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯವನ್ನು ಸಹಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ/ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ಹೇಳಿದರು.ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಸವಣಾಲು ಗ್ರಾಮದ ಹಿತ್ತಿಲಪೇಲ ಮಲೆಕುಡಿಯ ಸಮುದಾಯದ ಕಾಲೋನಿಗೆ ಮಂಗಳವಾರ ಭೇಟಿ ನೀಡಿ, ಅಹವಾಲು ಸ್ವೀಕರಿಸಿ ಮಾತನಾಡಿದರು.ಅಧಿಕಾರಿಗಳು ಕಾಲಮಿತಿಯೊಳಗೆ ಸಮಸ್ಯೆಗಳನ್ನು ಪರಿಹರಿಸಲು ವಿಫಲರಾದರೆ ಸರ್ಕಾರದ ಗಮನಕ್ಕೆ ತರುತ್ತೇನೆ. ಸರ್ಕಾರ ಮತ್ತು ಜನರ ಮಧ್ಯೆ ಸೇತುವೆಯಾಗಿ ಅಧಿಕಾರಿಗಳು ಕೆಲಸ ಮಾಡಬೇಕು. ಇಲಾಖೆಗಳ ನಡುವೆ ಸಮನ್ವಯ ಕೊರತೆಯಿಂದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗಿಲ್ಲ ಎಂದರು. ಸಮಸ್ಯೆ ಹುಟ್ಟಿದಲ್ಲೇ ಸಮಸ್ಯೆಗೆ ಪರಿಹಾರ ಇದೆ. ಸಮಸ್ಯೆಗಳನ್ನು ಪರಿಹರಿಸಲು ನಿಗಮ ಪ್ರಾಮಾಣಿಕ ಪ್ರಯತ್ನ ಮಾಡುತ್ತದೆ ಎಂದ ಅವರು ಜನರ ಸಮಸ್ಯೆಗಳನ್ನು ಈಡೇರಿಸಲು ಇಲಾಖೆಗಳು ಕೈಗೊಂಡ ಕ್ರಮಗಳ ಬಗ್ಗೆ ಆಗಾಗ ನಿಗಮಕ್ಕೆ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಮಲೆಕುಡಿಯ ಸಮುದಾಯದ ಹಿರಿಯರಾದ ಪರಮೇಶ್ವರ ಉಜಿರೆ ಮಾತನಾಡಿ 2017 ರಲ್ಲಿ ಸಮುದಾಯದ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿತ್ತಾದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದರು. ಮಾಜಿ ತಾ.ಪಂ ಸದಸ್ಯ ಜಯರಾಂ ದಿಡುಪೆ ಮಾತನಾಡಿ ಮಲವಂತಿಗೆಯ ಮಲೆಕುಡಿಯ ಸಮುದಾಯ ಭವನ ಕುಸಿದು ಬಿದ್ದು 4-5 ವರ್ಷ ಕಳೆದರೂ ಇನ್ನೂ ಪುನರ್ನಿರ್ಮಾಣ ಮಾಡಿಲ್ಲ ಎಂದರು. ಸೇಸಪ್ಪ ಮಲೆಕುಡಿಯ ಶಿರ್ಲಾಲು ಮಾತನಾಡಿ ಮಲೆಕುಡಿಯ ಸಮುದಾಯದ ಹಲವರಿಗೆ ಜಮೀನಿನ ದಾಖಲೆಗಳು ಇಲ್ಲ. ದಾಖಲೆಗಳಿಗಾಗಿ ಇಲಾಖೆಗಳ ಅಲೆದಾಟ ಇನ್ನೂ ತಪ್ಪಿಲ್ಲ ಎಂದರು. ಮಲೆಕುಡಿಯ ಸಮುದಾಯದ ಗಂಗಯ್ಯ ಹೇರಾಳ್ ಮಾತನಾಡಿ ಅತಿ ಹೆಚ್ಚು ಆದಿವಾಸಿಗಳು ವಾಸಿಸುತ್ತಿರುವ ನೆರಿಯ ಗ್ರಾಮದ ಆರೋಗ್ಯ ಕೇಂದ್ರದಲ್ಲಿ ವೈದಾಧಿಕಾರಿಗಳು ಸೇರಿದಂತೆ ಸಿಬ್ಬಂದಿಗಳ ಕೊರತೆಯಿದೆ ಎಂದರು.
ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸಂಚಾಲಕ ಶೇಖರ್ ಲಾಯಿಲ ಮಾತನಾಡಿ, ಮಲೆಕುಡಿಯ ಸಮುದಾಯಕ್ಕೆ ಮಲೈಕುಡಿ ಎಂದು ಜಾತಿ ಪ್ರಮಾಣಪತ್ರ ನೀಡಲಾಗುತ್ತದೆ. ಇದರಿಂದಾಗಿ ಮಲೆಕುಡಿಯ ಸಮುದಾಯದ ಆಚಾರ, ವಿಚಾರ , ಭಾಷೆ ಸಂಸ್ಕೃತಿಗಳ ಅಸ್ತಿತ್ವವೇ ನಶಿಸುವ ಸಾಧ್ಯತೆಯಿದೆ ಎಂದ ಅವರು ಆದಿವಾಸಿಗಳ ಸಮಸ್ಯೆಗಳನ್ನು ಈಡೇರಿಸಲು ಅಧಿಕಾರಿಗಳಿಗೆ ಇಚ್ಛಾಶಕ್ತಿಯ ಕೊರತೆಯಿದೆ ಎಂದರು.ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಕೊರತೆ ಇದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಭವಾನಿ ಶಂಕರ್ ಹೇಳಿದರು. ಮೂಲಭೂತ ಸೌಕರ್ಯಗಳಿಗೆ ಅನುದಾನವಿಲ್ಲ ಎಂದು ಹೇಳುವುದು ಸರಿಯಲ್ಲ, ಅನುದಾನ ಕೊಟ್ಟರೆ ಎಷ್ಟು ತಿಂಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತೀರಿ ಎಂದು ಹಿತ್ತಿಲಪೇಲ ಸೇತುವೆ ನಿರ್ಮಾಣವನ್ನು ಉಲ್ಲೇಖಿಸಿ ಅಧ್ಯಕ್ಷರು ಪ್ರಶ್ನಿಸಿದರು.ಮೆಸ್ಕಾಂ ಇಲಾಖೆಯ ಎಇಇ ಕ್ಲೆಮೆಂಟ್ ಬೆಂಜಮಿನ್ ಬರ್ಗ್ಸ್ ಮಾತನಾಡಿ ಸವಣಾಲು ಗ್ರಾಮದ ಹಿತ್ತಿಲಪೇಲ ಸೇರಿದಂತೆ 6 ಗ್ರಾಮಗಳ ಮಲೆಕುಡಿಯ ಸಮುದಾಯಕ್ಕೆ ವಿದ್ಯುತ್ ಸಂಪರ್ಕಕ್ಕೆ ಸಂಬಂಧಿಸಿದಂತೆ ಪರ್ವೆಶ್ 2 ನಲ್ಲಿ ಆನ್‌ಲೈನ್ ಅರ್ಜಿ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು. ವನ್ಯಜೀವಿ ಅರಣ್ಯ ಇಲಾಖೆಯ ಅರಣ್ಯಾಧಿಕಾರಿ ಷರ್ಮಿಷ್ಠ ಮಾತನಾಡಿ ವಿದ್ಯುತ್ ಸಂಪರ್ಕಕ್ಕಾಗಿ ಸಲ್ಲಿಸಿದ ಅರ್ಜಿಗಳು ಡಿಸಿಎಫ್ ಲಾಗಿನ್ ನಲ್ಲಿದೆ. ವಾರದೊಳಗೆ ಈ ಬಗ್ಗೆ ಕ್ರಮ ವಹಿಸುತ್ತೇವೆ. ಈಗಾಗಲೇ ಯುಜಿ ಕೇಬಲ್ ಮೂಲಕ ವಿದ್ಯುತ್ ಪೂರೈಕೆ ಮಾಡುವ ಬಗ್ಗೆ ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದರು.ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಧನಂಜಯ , ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ಎಇಇ ಕೆ.ಬಿ ಜನಾರ್ದನ , ಅಲೆಮಾರಿ ಬುಡಕಟ್ಟು ಒಕ್ಕೂಟದ ರಾಜ್ಯ ಜಂಟಿ ಕಾರ್ಯದರ್ಶಿ ಆನಂದ ಕುಮಾರ್ ಏಕಲವ್ಯ, ಮೇಲಂತಬೆಟ್ಟು ಗ್ರಾಮ ಪಂಚಾಯಿತಿ ಪಿಡಿಒ ಶ್ರೀಧರ್ ಹೆಗ್ಡೆ, ಕಾರ್ಯದರ್ಶಿ ನಿರ್ಮಲ್ ಕುಮಾರ್ , ಸವಣಾಲು ಗ್ರಾಮ ಕರಣಿಕ ಹೆರಾಲ್ಡ್ ಮೋನಿಸ್, ಬೆಳ್ತಂಗಡಿ ಎಎಸ್ಐ ದುರ್ಗಾದಾಸ್ ಉಪಸ್ಥಿತರಿದ್ದರು.